ಮಹಾನಗರ: ಜನರಿಗೆ ಆಡಳಿತದಲ್ಲಿ ಆಗುವ ತೊಂದರೆ, ವಿಳಂಬ ತಪ್ಪಿಸುವುದಕ್ಕೆ ಜಾರಿಗೊಂಡಿರುವ ಇ-ಖಾತಾ ವ್ಯವಸ್ಥೆಯಲ್ಲಿ ಮತ್ತೆ ಸಮಸ್ಯೆ ಎದುರಾಗಿದೆ.
ಸಾಮಾನ್ಯವಾಗಿ ಯಾರಾದರೂ ಜಾಗ ಮಾರಾಟ ಮಾಡಿದಾಗ ಅವರ ಇ-ಖಾತಾ ಕೂಡ ವರ್ಗಾವಣೆಗೊಳ್ಳುತ್ತದೆ, ಎಂದರೆ ಅವರ ಮಾಲಕತ್ವದ ದಾಖಲೆಗಳೂ ಕೂಡ ವರ್ಗಾವಣೆಗೊಳ್ಳುತ್ತದೆ. ಇದಕ್ಕೆ ಮ್ಯುಟೇಶನ್ ಪ್ರಕ್ರಿಯೆ ನಡೆಯಬೇಕಿದೆ. ಆದರೆ ಕಳೆದ ಕೆಲ ತಿಂಗಳಿನಿಂದ ಮ್ಯುಟೇಶನ್ಗೆ ಪೂರ್ವದಲ್ಲಿ ಯಾರ ಹೆಸರಿನಿಂದ ಜಾಗ ಮಾರಾಟಗೊಳ್ಳುತ್ತದೆಯೋ ಅವರಿಗೆ ನೋಟಿಸ್ ಕೊಡಬೇಕಾಗುತ್ತದೆ. ಆದರೆ ನೋಟಿಸ್ ನೀಡಲು ಈಗಿನ ಸರ್ವರ್ನಲ್ಲಿ ಸಾಧ್ಯವಾಗದೆ ಸಮಸ್ಯೆ ಎದುರಾಗಿದೆ.
ಮೊದಲು ಅರ್ಜಿದಾರರು ಮಂಗಳೂರು ಒನ್ನಲ್ಲಿ ಇ-ಖಾತಾ ಪ್ರತಿ, ಸೇಲ್ಡೀಡ್, ತೆರಿಗೆ ರಶೀದಿಯೊಂದಿಗೆ ಖಾತಾ ವರ್ಗಾವಣೆಗೆ ಅರ್ಜಿಹಾಕುತ್ತಾರೆ. ಇದು ರೆವಿನ್ಯೂ ವಿಭಾಗಕ್ಕೆ ಬರುತ್ತದೆ. ಬಳಿಕ ಕಂದಾಯ ನಿರೀಕ್ಷಕರು ಆ ಕಡತವನ್ನು ಆನ್ಲೈನ್ನಲ್ಲಿ ತೆಗೆದು ಪೂರ್ವಮಾಲಕರಿಗೆ ನೋಟಿಸ್ ಮಾಡಬೇಕು (ಇದಕ್ಕೆ ಒಂದು ತಿಂಗಳ ಸಮಯವಿದೆ) ಈ ಪ್ರಕ್ರಿಯೆ ಸರಿಯಾಗಿ ಆಗುತ್ತಿಲ್ಲ. ಕೆಲವೊಮ್ಮೆ ಕಡತ ತೆರೆಯುವಲ್ಲಿಯೂ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ.
ಇಲ್ಲಿ ಅಧಿಕಾರಿ ಪ್ರಕ್ರಿಯೆ ಹೇಗೋ ಮುಗಿಸಿ ಮುಂದೆ ಕಳುಹಿಸುತ್ತಾರೆ. ಅಲ್ಲಿ ಜಾಗದ ಪ್ರಮಾಣವಾರು ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಅಧಿಕಾರಿ, ವಲಯ ಆಯುಕ್ತರಿಗೆ ಅನುಮೋದಿಸುವ ಅಧಿಕಾರ ಇದೆ. ಕಡತವನ್ನು ಷರಾದೊಂದಿಗೆ ಬೆರಳಚ್ಚು ಕೊಟ್ಟು ಅನುಮೋದಿಸುವ ಕೆಲಸ ಕಂದಾಯ ಅಧಿಕಾರಿಯದ್ದು. ಆದರೆ ಬೆರಳಚ್ಚು ಕೊಟ್ಟಾಗ ಸ್ವೀಕೃತಗೊಳ್ಳುತ್ತಿಲ್ಲ. ಬದಲಿಗೆ ಕಡತವೇ ಮತ್ತೆ ಕಂದಾಯ ನಿರೀಕ್ಷಕರಿಗೆ ಹೋಗುತ್ತಿದೆ.
ಇಂತಹ ಸಮಸ್ಯೆ ಬಗ್ಗೆ ಬೆಂಗಳೂರಿನ ಕಚೇರಿಗೂ ತಿಳಿಸಲಾಗಿದೆ, ಆದರೆ ಸಮಸ್ಯೆ ಬಗೆಹರಿದಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸುತ್ತಾರೆ.
ಕಾವೇರಿ-ಇ-ಆಸ್ತಿ ಇಂಟಿಗ್ರೇಶನ್ನಲ್ಲೂ ಸಮಸ್ಯೆ
ಕಳೆದ ಅಕ್ಟೋಬರ್ನಿಂದ ಇ-ಖಾತಾ ಕೊಡುವುದಕ್ಕೆ ಕಾವೇರಿ ಹಾಗೂ ಇ-ಆಸ್ತಿ ವ್ಯವಸ್ಥೆಗಳನ್ನು ಇಂಟಿಗ್ರೇಟ್ ಮಾಡಲಾಗಿದೆ, ಮ್ಯಾನ್ಯುವಲ್ ಆಗಿ ನೀಡುವಂತಿಲ್ಲ ಎಂದೂ ಸರಕಾರದ ಸೂಚನೆ ಇದೆ. ಆದರೆ ಇಲ್ಲೂ ಕಾವೇರಿಯಲ್ಲಿ ಆಸ್ತಿ ನೋಂದಣಿಯಾಗಿರುವುದು ಸಬ್ಮಿಟ್ ಕೊಟ್ಟರೂ ಇ-ಆಸ್ತಿಯಲ್ಲಿ ದಾಖಲೆಗಳು ಲಭ್ಯವಾಗದೆ ಕೂಡ ಸಮಸ್ಯೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.