ವಾಡಿ: ದಡಾರ-ರುಬೆಲ್ಲಾ ಲಸಿಕೆ ಹಾಕಲು ನಿಗದಿತ ಸಮಯಕ್ಕೆ ಶಾಲೆಗೆ ಬಾರದ ವೈದ್ಯಕೀಯ ತಂಡದ ವಿರುದ್ಧ ಆಕ್ರೋಶಗೊಂಡ ಪಾಲಕರು, ಶಾಲೆ ಆವರಣದಲ್ಲಿಯೇ ಪ್ರತಿಭಟನೆಗೆ ಮುಂದಾದ ಪ್ರಸಂಗ ಶುಕ್ರವಾರ ಪಟ್ಟಣದಲ್ಲಿ ನಡೆಯಿತು.
ಪಟ್ಟಣದ ಎಸಿಸಿ ಕಾಲೋನಿಯ ಡಿಎವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳಗ್ಗೆ 8:30 ಗಂಟೆಗೆ ನಿಗದಿಯಾಗಿದ್ದ ದಡಾರ-ರುಬೆಲ್ಲಾ ಲಸಿಕಾ ಕಾರ್ಯಕ್ರಮ, ಶಾಲಾ ಆಡಳಿತ ಮಂಡಳಿ ಹಾಗೂ ವೈದ್ಯಕೀಯ ತಂಡದ ಸಮಯ ಪಾಲನೆ ಕೊರತೆಯಿಂದ ರದ್ದುಗೊಂಡಿತು.
ಶಾಲೆಯ ಪ್ರಾಂಶುಪಾಲರ ಆದೇಶದಂತೆ ಬೆಳಗ್ಗೆಯೇ ಸ್ಥಳದಲ್ಲಿದ್ದ ನೂರಾರು ಜನ ಪಾಲಕರು, ಮದ್ಯಾಹ್ನ 11:30 ಗಂಟೆ ವರೆಗೂ ವೈದ್ಯರನ್ನು ಕಾಯ್ದು ಗೋಳಾಡಿದರು. ಹಸಿದ ಹೊಟ್ಟೆಯಲ್ಲಿ ನಿಂತಿದ್ದ ಮಕ್ಕಳು, ತೊಂದರೆ ಅನುಭವಿಸಿದರು.
ತಡವಾಗಿ ಅಂದರೆ 11:30 ಗಂಟೆಗೆ ಬಂದ ವೈದ್ಯ ಸಿಬ್ಬಂದಿಯನ್ನು ಶಾಲಾ ದ್ವಾರದಲ್ಲಿಯೇ ತಡೆದ ಪಾಲಕರು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ 8:30 ಗಂಟೆಗೆ ಶಾಲೆ ಆರಂಭಗೊಳ್ಳುತ್ತದೆ. ಇಷ್ಟೊಂದು ತಡವಾಗಿ ಬಂದರೆ ಮಕ್ಕಳ ಗತಿಯೇನು? ತಿಂಡಿ ತಿಂದು ಬಂದಿರುವ ಮಕ್ಕಳು ಮಧ್ಯಾಹ್ನದ ಊಟದ ಡಬ್ಬಿಯನ್ನು ತಂದಿಲ್ಲ.
ಸರಕಾರಿ ಸಿಬ್ಬಂದಿಯಾಗಿರುವ ತಮಗೆ ಸಮಯದ ಅರಿವಿಲ್ಲವೇ ಎಂದು ಪಾಲಕರಾದ ಶಂಕರ ಜಾಧವ, ವೀರಣ್ಣ ಯಾರಿ, ನಾಗೇಂದ್ರ ಬೊಮ್ಮನಳ್ಳಿ, ಸೋಮಲಾ ಚವ್ಹಾಣ, ಗೌತಮ ಬೇಡೆಕರ, ಕಾಶೀನಾಥ ಶೆಟಗಾರ ಮತ್ತಿತರರು ತೀವ್ರ ತರಾಟೆ ತೆಗೆದುಕೊಂಡರು.
ನಿರ್ಲಕ್ಷ ವಹಿಸಿದ ದಡಾರ ಲಸಿಕಾ ತಂಡದ ವಿರುದ್ಧ ಕ್ರಮಕೈಗೊಳ್ಳಬೇಕು. ಲಸಿಕೆ ಹಾಕಲು ಮತ್ತೂಂದು ದಿನಾಂಕ ನಿಗದಿಪಡಿಸಬೇಕು ಎಂದು ಜಿಲ್ಲಾ ವೈದ್ಯಾಧಿಧಿಕಾರಿಯನ್ನು ಆಗ್ರಹಿಸಿದರು.