ಕಲಬುರಗಿ: ಬಹು ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ಜಯದೇವ ಹೃದ್ರೋಗ ಆಸ್ಪತ್ರೆಯ ಸುಸಜ್ಜಿತ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಗೈರು ಹಾಜರಾಗಿರುವುದು ಅಚ್ಚರಿ ಮೂಡಿಸಿದೆ.
ಕಳೆದೆರಡು ದಿನಗಳಿಂದ ನಗರದಲ್ಲಿಯೇ ಇದ್ದು ಅದ್ದೂರಿ ಸಮಾರಂಭದ ಎಲ್ಲಾ ಸಿದ್ಧತೆಗಳನ್ನು ಅವಲೋಕಿಸಿದ್ದರು.
ಶನಿವಾರ (ಡಿ.21) ಮಧ್ಯಾಹ್ನ ಬೆಂಗಳೂರಿಗೆ ತೆರಳಿದ್ದ ಸಚಿವ ಖರ್ಗೆ ಅವರು ಇಂದು (ಡಿ.22) ವಿಶೇಷ ವಿಮಾನದಲ್ಲೇ ಸಿಎಂ ಜತೆ ಆಗಮಿಸಬೇಕಿತ್ತು. ಆದರೆ ಬಾರದೆ ಸಮಾರಂಭದಿಂದ ದೂರ ಉಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.
ಇನ್ನೊಂದೆಡೆ ಸಮಾರಂಭದ ಅಧ್ಯಕ್ಷತೆ ವಹಿಸುವ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಭಾವಚಿತ್ರ ಜಾಹೀರಾತಿನಲ್ಲಿ ಹಾಕಿಲ್ಲವೆಂದು ಶಾಸಕರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.
ಜಯದೇವ ಹೃದ್ರೋಗ ಆಸ್ಪತ್ರೆ ಉದ್ಘಾಟನೆ ನಿಟ್ಟಿನಲ್ಲಿ ತೆರೆಯಲ್ಲಿ ನಡೆದಿರುವ ಕೆಲವು ಘಟನೆಗಳೇ ಉಸ್ತುವಾರಿ ಸಚಿವರು ಸಮಾರಂಭದಿಂದ ದೂರ ಉಳಿಯುವಂತೆ ಮಾಡಿತೇ ಎಂದು ಚರ್ಚೆಯಾಗುತ್ತಿದೆ.
ಬಲ್ಲ ಮಾಹಿತಿಗಳ ಪ್ರಕಾರ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲರನ್ನು ಸ್ವಾಗತಿಸುವ ಜವಾಬ್ದಾರಿ ಸಿಎಂ ಅವರು ವಹಿಸಿದ್ದರಿಂದ ಸಮಾಂಭದಲ್ಲಿ ಪಾಲ್ಗೊಳ್ಳಲಿಕ್ಕಾಗಿಲ್ಲ ಎಂದು ತಿಳಿಸಲಾಗಿದೆ.