ಜಗತ್ತಿನಾದ್ಯಂತ ಅನೇಕ ಮಕ್ಕಳನ್ನು ಬಾಧಿಸುವ ಜನ್ಮಜಾತ ವೈಕಲ್ಯಗಳಲ್ಲಿ ಅತೀ ಸಾಮಾನ್ಯವಾದುದು ಸೀಳು ತುಟಿ ಮತ್ತು ಅಂಗುಳ (ಕ್ಲೆಫ್ಟ್ ಲಿಪ್ ಮತ್ತು ಪೆಲೇಟ್). ಸ್ತ್ರೀಯು ಗರ್ಭಿಣಿಯಾಗಿರುವ ಅವಧಿಯಲ್ಲಿ ಶಿಶುವಿನ ತುಟಿಗಳು ಮತ್ತು ಬಾಯಿಯ ಮೇಲ್ಭಾಗ (ಅಂಗುಳ) ಸಮರ್ಪಕವಾಗಿ ರೂಪುಗೊಳ್ಳದಿದ್ದರೆ ಈ ತೊಂದರೆ ಕಾಣಿಸಿಕೊಳ್ಳುತ್ತದೆ ಮತ್ತು “ಸೀಳು’ ಉಂಟಾಗುತ್ತದೆ.
ಕೆಲವೊಮ್ಮೆ ಇತರ ಕಾಯಿಲೆಗಳು ಮತ್ತು ಸಿಂಡ್ರೋಮ್‌ಗಳು ಕೂಡ ಇದರ ಜತೆಗೆ ಇರಬಹುದು. ಸೀಳು ತುಟಿ ಮತ್ತು ಅಂಗುಳ ಹೊಂದಿ ಜನಿಸಿದ ಶಿಶು ಸೌಂದರ್ಯಾತ್ಮಕ ಕಾರಣ ಮತ್ತು ಶಿಶುವಿಗೆ ಮಾತಿನ ಬೆಳವಣಿಗೆ ಸರಿಯಾಗಿ ಆಗುವ ಕಾರಣಕ್ಕಾಗಿ ಕ್ಲಪ್ತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಈ ವೈಕಲ್ಯಗಳು ಚಿಂತೆಗೆ ಕಾರಣವಾದರೂ ಕೂಡ ಸೀಳು ತುಟಿ, ಅಂಗುಳಕ್ಕೆ ಕಾರಣಗಳು, ಸವಾಲುಗಳು ಮತ್ತು ಚಿಕಿತ್ಸೆಗಳ ಬಗ್ಗೆ ಕುಟುಂಬಗಳು ಕಲಿಯುವುದು ತಮ್ಮ ಪ್ರಯಾಣವನ್ನು ಹೆಚ್ಚು ವಿಶ್ವಾಸದಿಂದ ಮತ್ತು ಪರಿಣಾಮಕಾರಿಯಾಗಿ ನಡೆಸಲು ಸಹಾಯ ಮಾಡುತ್ತದೆ.
ಸೀಳು ತುಟಿ ಮತ್ತು ಅಂಗುಳ ಉಂಟಾಗಲು ಕಾರಣವೇನು?
ಸೀಳು ತುಟಿ ಮತ್ತು ಅಂಗುಳ ಉಂಟಾಗುವುದಕ್ಕೆ ನಿರ್ದಿಷ್ಟವಾದ ಕಾರಣ ಸ್ಪಷ್ಟವಾಗಿಲ್ಲ; ಆದರೆ ಪರಿಸರಕ್ಕೆ ಸಂಬಂಧಿಸಿದ ಮತ್ತು ವಂಶವಾಹಿ ಅಂಶಗಳಿಂದ ಇದು ತಲೆದೋರುತ್ತದೆ ಎಂಬುದಾಗಿ ಭಾವಿಸಲಾಗಿದೆ. ಕುಟುಂಬದಲ್ಲಿ ಸೀಳು ತುಟಿ – ಅಂಗುಳ ಹೊಂದಿರುವವರು ಈಗಾಗಲೇ ಇರುವುದು, ತಾಯಿಯು ಕೆಲವು ಔಷಧಗಳನ್ನು ಉಪಯೋಗಿಸಿರುವುದು, ಧೂಮಪಾನ ಅಥವಾ ಗರ್ಭಿಣಿ ಅವಧಿಯಲ್ಲಿ ಪೌಷ್ಟಿಕಾಂಶ ಕೊರತೆ ಇತ್ಯಾದಿ ಅಂಶಗಳು ಶಿಶು ಈ ವೈಕಲ್ಯಗಳೊಂದಿಗೆ ಜನಿಸುವ ಸಾಧ್ಯತೆಯನ್ನು ಹೆಚ್ಚಿಸಬಹುದಾಗಿದೆ.
-ಮುಂದಿನ ವಾರಕ್ಕೆ
ಡಾಸ್ಮಿನ್ ಎಫ್. ಡಿ’ಸೋಜಾ,
ಕ್ಲಿನಿಕಲ್ ಸೂಪರ್‌ವೈಸರ್ ಗ್ರೇಡ್-1
ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್
ಪೆಥಾಲಜಿ ವಿಭಾಗ, ಕೆಎಂಸಿ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪ್ಲಾಸ್ಟಿಕ್ ಸರ್ಜರಿ ವಿಭಾಗ, ಕೆಎಂಸಿ, ಮಂಗಳೂರು)