ಉಡುಪಿ : ಈ ತನಕ ರಾಜ್ಯದ ಪ.ಪೂ. ಮತ್ತು ಪದವಿ ಕಾಲೇಜುಗಳಲ್ಲಿ ಮಾತ್ರ ಅನುಷ್ಠಾನದಲ್ಲಿದ್ದ ರಾಷ್ಟ್ರೀಯ ಸೇವಾ ಯೋಜನಾ ಘಟಕವನ್ನು (ಎನ್ ಎಸ್‌ಎಸ್) ಈ ಶೈಕ್ಷಣಿಕ ಸಾಲಿನಿಂದ ಪ್ರೌಢಶಾಲೆಗಳಿಗೂ ವಿಸ್ತರಿಸಲಾಗಿದ್ದು ಅದರಂತೆ ಪ್ರಾರಂಭಿಕವಾಗಿ ರಾಜ್ಯದ ಆಯ್ದ 340 ಪ್ರೌಢಶಾಲೆಗಳಲ್ಲಿ ಈ ಸಾಲಿನಿಂದಲೇ ಎನ್‌ಎಸ್‌ಎಸ್ ಘಟಕವನ್ನು ಪ್ರಾರಂಭಿಸಲಾಗಿದೆ.
ಅನುದಾನವನ್ನು ಬಿಡುಗಡೆ
8 ಮತ್ತು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಸಕ್ತ 50ರಿಂದ 100 ವಿದ್ಯಾರ್ಥಿಗಳ ಘಟಕವನ್ನು ಪ್ರಾರಂಭಿಸಿ ಕಾರ್ಯ ಪ್ರವೃತ್ತರಾಗುವುದಂತೆ ರಾಜ್ಯದ ವಿವಿಧ ಜಿಲ್ಲೆಯಿಂದ ಆಯ್ಕೆಯಾಗಿರುವ ಪ್ರತಿ ಜಿಲ್ಲೆಯ 10 ಸರಕಾರಿ ಪ್ರೌಢಶಾಲಾ ಮುಖ್ಯಸ್ಥರಿಗೆ ಇಲಾಖೆ ಸೂಚಿಸಿ ಬೇಕಾದ ಅನುದಾನವನ್ನು ಬಿಡುಗಡೆ ಮಾಡಿದೆ. ಇದಕ್ಕೆ ಬೇಕಾದ ಹಣಕಾಸಿನ ಸಹಾಯವನ್ನು ಯುವ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್ ಎಸ್‌ಎಸ್ ಕೋಶವು ಭರಿಸಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕವೇ ಈ ಕಾರ್ಯಕ್ರಮವು ಜಾರಿಯಾಗಲಿದ್ದು, ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನವನ್ನು ಸಾಧಿಸುವುದು ಹಾಗೂ ಸಮಾಜ ಸೇವೆಯ ಅರಿವನ್ನು ಪ್ರೌಢ ಹಂತದಲ್ಲೆ ವಿದ್ಯಾರ್ಥಿಗಳಿಗೆ ನೀಡುವುದು ಇಲಾಖೆಯ ಮುಖ್ಯ ಉದ್ದೇಶವಾಗಿರುತ್ತದೆ. ಪ್ರೌಢ ಹಂತದಲ್ಲೇ ಎನ್‌ಎಸ್‌ಎಸ್ ಬಗ್ಗೆ ಅರಿವು ಮೂಡಿಸಿದರೆ ಪ.ಪೂ. ಹಾಗೂ ಪದವಿ ಕಾಲೇಜುಗಳಲ್ಲಿ ಇದನ್ನು ಮುಂದುವರಿಸಲು ಅನುಕೂಲವಾಗಲಿದೆ ಎಂಬ ಆಶಯ ಇಲಾಖೆಯದ್ದಾಗಿದೆ.
ಉಡುಪಿ ಜಿಲ್ಲೆಗೆ ಸಂಬಂಧಪಟ್ಟಂತೆ ಉಡುಪಿ ಬಾಲಕಿಯರ ಸರಕಾರಿ ಪ.ಪೂ ಕಾಲೇಜು, ಒಳಕಾಡು ಪ್ರೌಢಶಾಲೆ, ಬ್ರಹ್ಮಾವರ, ಕುಂದಾಪುರ, ಬಿದ್ಕಲ್ ಕಟ್ಟೆ, ಬೈಲೂರು, ಹೆಬ್ರಿ, ಮಣೂರು, ನಾವುಂದ, ಕಂಬದಕೋಣೆ ಸರಕಾರಿ ಪ.ಪೂ. ಕಾಲೇಜುಗಳ ಪ್ರೌಢಶಾಲೆಗಳಲ್ಲಿ ಈ ಸಾಲಿನಿಂದಲೇ ಎನ್‌ಎಸ್‌ಎಸ್ ಘಟಕವನ್ನು ಪ್ರಾರಂಭಿಸಲು ಇಲಾಖೆ ಕ್ರಮಕೈಗೊಂಡಿದೆ.