Advertisement

Karkala: ಈದುವಿಗೆ ಬೇಕು ಸರಕಾರಿ ಕಾಲೇಜು

01:16 PM Nov 13, 2024 | Team Udayavani |

ಕಾರ್ಕಳ: ನಕ್ಸಲರ ಆಡುಂಬೊಲವಾಗಿ ಸಂತ್ರಸ್ತವಾದ ಕಾರ್ಕಳ ತಾಲೂಕಿನ ಈದು ಗ್ರಾಮ ಈಗಲೂ ಹಲವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದಿರುವುದರ ಜತೆಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲೂ ಹಲವು ಬೇಡಿಕೆಗಳನ್ನು ಮುಂದಿಟ್ಟು ಈಡೇರಿಕೆಗೆ ಕಾಯುತ್ತಿದೆ. ನೂರಾರು ವಿದ್ಯಾರ್ಥಿಗಳಿರುವ ಈ ಊರಲ್ಲಿ ಪದವಿಪೂರ್ವ ಕಾಲೇಜು ಸ್ಥಾಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ಸರಕಾರ ಸ್ಪಂದಿಸಿಲ್ಲ ಎನ್ನುವ ನೋವು ಈ ಭಾಗದ ಜನರದ್ದು.

Advertisement

ಈದು ಗ್ರಾಮದಲ್ಲಿ ಶತಮಾನ ಆಚರಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲೆ ಇದೆ. ಇಲ್ಲಿನ ಎಲ್‌ಕೆಜಿಯಲ್ಲಿ 35, ಯುಕೆಜಿಯಲ್ಲಿ 12, ಪ್ರಾಥಮಿಕ ಶಾಲೆಯಲ್ಲಿ 299, ಪ್ರೌಢ ಶಾಲೆಯಲ್ಲಿ 150 ವಿದ್ಯಾರ್ಥಿಗಳಿದ್ದಾರೆ. ಪ್ರತೀ ವರ್ಷ ಎಸೆಸೆಲ್ಸಿಯಲ್ಲಿ 60ರಿಂದ 80 ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ. ಅವರಿಗೆ ಮುಂದೆ ಶಿಕ್ಷಣ ಪಡೆಯುವ ಸರಿಯಾದ ವ್ಯವಸ್ಥೆ ಇಲ್ಲಿಲ್ಲ.

ಎಸೆಸೆಲ್ಸಿ ಮುಗಿಸಿ ಪಿಯುಸಿಗೆ ಹೋಗಬೇಕು ಎಂದರೆ ಇಲ್ಲಿನ ವಿದ್ಯಾರ್ಥಿಗಳು ದೂರದ ಬೆಳ್ತಂಗಡಿ ಇಲ್ಲವೇ ಬಜಗೋಳಿಗೆ ಬಸ್‌ನಲ್ಲಿ ಓಡಾಡಬೇಕು. ಆದರೆ, ಇಲ್ಲಿನ ಜನರು ಅಷ್ಟೊಂದು ಸ್ಥಿತಿವಂತರಲ್ಲ. ಹೀಗಾಗಿ ಎಸೆಸೆಲ್ಸಿ ಮುಗಿಸಿದವರಲ್ಲಿ ಹಲವರು ಮುಂದಿನ ಶಿಕ್ಷಣಕ್ಕೆ ಹೋಗದೆ ಮನೆಯಲ್ಲೇ ಉಳಿಯುವಂತೆಯೂ ಆಗಿದೆ.

ಇಲ್ಲಿನ ಸರಕಾರಿ ಶಾಲೆ 1923ರಲ್ಲಿ ಸ್ಥಾಪನೆಯಾಗಿದ್ದು, ವಿಶಾಲವಾದ ಜಾಗ, ಆಟದ ಮೈದಾನ ಸಹಿತ ಉತ್ತಮ ಕಟ್ಟಡ ಹೊಂದಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಉತ್ತಮವಾಗಿದೆ. ಶಿಕ್ಷಕರು, ಸಿಬಂದಿಗೆ ಕೊರತೆ ಇಲ್ಲ. ಎಲ್ಲ ಆಯಾಮಗಳಿಂದಲೂ ಈ ಶಾಲೆ ವ್ಯಾಪ್ತಿಯಲ್ಲೇ ಕಾಲೇಜು ಸ್ಥಾಪಿಸಲು ಪೂರಕ ಸೌಕರ್ಯವನ್ನು ಹೊಂದಿದೆ ಎನ್ನುತ್ತಾರೆ ಗ್ರಾಮದ ಪ್ರಮುಖರು.

ಕಾಡಂಚಿನ ಮಕ್ಕಳ ಕಷ್ಟ ಅರ್ಥ ಮಾಡಿಕೊಳ್ಳಿ
ಈದು ಶಾಲೆಗೆ ಬೊಳ್ಳೆಟ್ಟು, ನೂರಾಲ್‌ಬೆಟ್ಟು, ವರಿಮಾರು, ಈದು, ಕರಿಂದ್ಯಾಲು, ಡೊಂಕಬೆಟ್ಟು, ಬಟ್ಟೇಣಿ, ಬಟ್ಟಾಜೆ, ಬೇಂಗಾಡಿ, ಬೋರುಗುಡ್ಡೆ, ಗಂಗೆನೀರು ಹೀಗೆ ಕಾಡಂಚಿನ ಊರುಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ. ಇಲ್ಲಿನ ವಿದ್ಯಾರ್ಥಿಗಳು ಕಾಲೇಜಿಗೆ ಹೊಗಬೇಕು ಎಂದರೆ ಮೊದಲು ಕಾಡಂಚಿನಿಂದ ಈದುವಿಗೆ ಬರಬೇಕು, ಅಲ್ಲಿಂದ ಹೊಸ್ಮಾರಿನ ಪ್ರಧಾನ ರಸ್ತೆಗೆ ಬರಬೇಕು, ಅಲ್ಲಿಂದ ಬೆಳ್ತಂಗಡಿ, ಬಜಗೋಳಿ, ಮೂಡುಬಿದಿರೆ ಮೊದಲಾದ ಪ್ರದೇಶಕ್ಕೆ ಹೋಗಬೇಕು. ಈ ಭಾಗದಲ್ಲಿ ಬಸ್‌ ವ್ಯವಸ್ಥೆ ಇಲ್ಲ. ಸರ್ವಿಸ್‌ ರಿಕ್ಷಾ ಇಲ್ಲವೇ ಬಾಡಿಗೆ ಮಾಡಿಕೊಂಡು ಹೋಗಬೇಕು. ಹೆಚ್ಚಿನವರು ಇದನ್ನೆಲ್ಲ ಭರಿಸಲಾಗದೆ ನಡೆದುಕೊಂಡೇ ಹೋಗುವ ಪರಿಸ್ಥಿತಿ ಇದೆ. ಕಾಲೇಜಿಗೆ ಹೋಗುವ ಮಕ್ಕಳು ಒಂಟಿಯಾಗಿ ನಡೆದುಕೊಂಡು ಹೋಗಲೂ ಭಯಪಡುತ್ತಾರೆ. ಹೀಗಾಗಿ ಹಲವರ ಶಿಕ್ಷಣವೂ ಮೊಟಕುಗೊಂಡಿದೆ.

Advertisement

ಶೀಘ್ರದಲ್ಲೆ ಭೇಟಿ
ಈದು ಗ್ರಾಮಕ್ಕೆ ಶೀಘ್ರದಲ್ಲಿಯೇ ಭೇಟಿ ನೀಡಲಾಗುವುದು. ಮೂಲ ಸೌಕರ್ಯ ಸಹಿತ ವಿವಿಧ ಆಡಾಳಿತಾತ್ಮಕ ಸೇವೆಗಳ ಸುಧಾರಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ. ಕಾಲೇಜು ಪ್ರಸ್ತಾವನೆ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸರಕಾರದ ಗಮನಕ್ಕೆ ತರಲಾಗುವುದು.
– ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

ಪರಿಶೀಲಿಸಿ ಕ್ರಮ
ಪ್ರೌಢಶಾಲೆಯಲ್ಲಿ ಎಷ್ಟು ಮಂದಿ ಇದ್ದಾರೆ, ಸಮೀಪದ ಸರಕಾರಿ ಕಾಲೇಜಿನ ದಾಖಲಾತಿ ಪ್ರಮಾಣವನ್ನು ಪರಿಶೀಲಿಸಬೇಕು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಕೊರತೆಯಾಗಬಾರದು. ಈ ನಿಟ್ಟಿನಲ್ಲಿ ಸಾಧಕ ಬಾಧಕ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಗ್ರಾಮದಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ 4 ಕೋ. ರೂ. ಅನುದಾನ ಮಂಜೂರಾಗಿದ್ದು, ಟೆಂಡರ್‌ ಪ್ರಕ್ರಿಯೆಯಲ್ಲಿದೆ.
– ವಿ. ಸುನಿಲ್‌ ಕುಮಾರ್‌, ಶಾಸಕರು, ಕಾರ್ಕಳ

ವಿಶೇಷ ಪ್ಯಾಕೇಜ್‌ ಬೇಕು
ಈದು ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಸರಕಾರ ಮತುವರ್ಜಿ ವಹಿಸಬೇಕು. ಗ್ರಾ.ಪಂ.ಗೆ ಅನುದಾನ ಕೊರತೆಯಿಂದ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಸರಕಾರವು ವಿಶೇಷ ಪ್ಯಾಕೇಜ್‌ ಘೋಷಿಸಬೇಕು. 2018 ರಿಂದ ಕಾಲೇಜು ಸ್ಥಾಪನೆಗೆ ಸರಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ಇದುವರೆಗೆ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗಿಲ್ಲ.
-ಸದಾನಂದ್‌ ಪೂಜಾರಿ, ಅಧ್ಯಕ್ಷರು, ಗ್ರಾ. ಪಂ. ಈದು

ನಮ್ಮೂರಲ್ಲೇ ಕಾಲೇಜು ಶಿಕ್ಷಣ ಕೊಡಿ
ಈ ಗ್ರಾಮದಲ್ಲಿ ಬಹುತೇಕ ಕುಟುಂಬ ಆರ್ಥಿಕವಾಗಿ ಸದೃಢರಲ್ಲ. ಕೃಷಿ ಮತ್ತು ಕೃಷಿ ಕೂಲಿ ಮಾಡಿಕೊಂಡು ಬದುಕುವರು. ಮಕ್ಕಳ ಶಿಕ್ಷಣಕ್ಕಾಗಿ ಸರಕಾರಿ ವ್ಯವಸ್ಥೆಯನ್ನೇ ನಂಬಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸರಕಾರಿ ಪ.ಪೂ. ಶಿಕ್ಷಣಕ್ಕೆ ದೂರದ ಮೂಡು ಬಿದಿರೆ, ಬಜಗೋಳಿ ಇಲ್ಲಿನ ಮಕ್ಕಳು ನಿತ್ಯ ಓಡಾಡುವುದು ಕಷ್ಟ. ಬಸ್‌ನಲ್ಲಿ ಓಡಾ ಟಕ್ಕೆ ಸಮಯ, ಟಿಕೆಟ್‌ ಖರ್ಚಿನ ಆರ್ಥಿಕ ಹೊರೆ ಹೊರಲು ಕಷ್ಟವಾಗುತ್ತಿದೆ. ಹೀಗಾಗಿ ನಮ್ಮೂರಲ್ಲೆ ಕಾಲೇಜು ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಅನುಕೂಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next