ಬೆಂಗಳೂರು: ಮುಸ್ಲಿಮರಿಗೆ 1 ಕೋಟಿ ರೂ. ವರೆಗಿನ ಸರಕಾರಿ ಕಾಮಗಾರಿಯಲ್ಲಿ ಶೇ. 4ರಷ್ಟು ಮೀಸಲು ನೀಡುವ ಪ್ರಸ್ತಾವ ಹೊಸ ವಿವಾದ ಸೃಷ್ಟಿಸಿದ್ದು, ವಕ್ಫ್ ಪ್ರಕರಣದ ಬೆನ್ನಲ್ಲೇ ಸರಕಾರ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿದೆ.
ಈ ವಿಚಾರ ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಕಾರಣವಾಗಿದ್ದು, ವಿವಾದ ತಾರಕಕ್ಕೇರುವುದಕ್ಕೆ ಮುನ್ನವೇ “ಅಂತಹ ಯಾವುದೇ ಪ್ರಸ್ತಾವ ಸರಕಾರದ ಮುಂದೆ ಇಲ್ಲ’ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಸ್ಪಷ್ಟನೆ ನೀಡಿದೆ.
ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರಿಗೆ ನೀಡಿದ ಮೀಸಲಾತಿ ರೀತಿಯಲ್ಲೇ ಮುಸ್ಲಿಮರಿಗೂ ಅವಕಾಶ ಕಲ್ಪಿಸಬೇಕೆಂದು ಮುಸ್ಲಿಂ ಸಮುದಾಯದ ಶಾಸಕರ ನಿಯೋಗ ಮಾಡಿದ ಮನವಿ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದರು ಎನ್ನಲಾಗಿದೆ.
ತಮ್ಮ ಮೊದಲ ಅವಧಿಯಲ್ಲಿ ಎಸ್ಸಿ/ಎಸ್ಟಿ ಗುತ್ತಿಗೆದಾರರಿಗೆ ಮೀಸಲು ಕಲ್ಪಿಸಿದ ರೀತಿಯಲ್ಲಿ ತಮಗೂ ಅವಕಾಶ ಮಾಡಿಕೊಡಬೇಕೆಂದು ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ “ಸಮುದಾಯದ ಆರ್ಥಿಕ ಸಶಕ್ತೀಕರಣ ದೃಷ್ಟಿಯಿಂದ’ ಸರಕಾರ ಈ ಬಗ್ಗೆ ಚಿಂತನೆ ನಡೆಸಿತ್ತು ಎಂದು ತಿಳಿದು ಬಂದಿದೆ.
ಈ ಬಗ್ಗೆ ಚರ್ಚೆ ಪ್ರಾರಂಭವಾಗುತ್ತಿದ್ದಂತೆ ಸಿಎಂ ಕಾರ್ಯಾಲಯದಿಂದ ತುರ್ತು ಸ್ಪಷ್ಟನೆ ನೀಡಲಾಗಿದೆ. ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಬೇಕೆಂಬ ಬಗ್ಗೆ ಬೇಡಿಕೆ ನಿಜ. ಆದರೆ ಈ ಕುರಿತು ಸರಕಾರದ ಮುಂದೆ ಯಾವುದೇ ಪ್ರಸ್ತಾವ ಇಲ್ಲ. ಮತ್ತೂಂದು ಹಸಿ ಸುಳ್ಳಿಗೆ ಸ್ಪಷ್ಟನೆ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ. ಆದರೆ ಮುಖ್ಯಮಂತ್ರಿಗಳಾಗಿಲಿ ಉಪಮುಖ್ಯಮಂತ್ರಿಯಾಗಲೀ ಈ ಬಗ್ಗೆ ಬಹಿರಂಗ ಹೇಳಿಕೆ ಬಿಡುಗಡೆ ಮಾಡಿಲ್ಲ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ವಿಪಕ್ಷ ನಾಯಕರು ಮಾತ್ರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.