Advertisement

Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು

01:02 PM Nov 15, 2024 | Team Udayavani |

ಕುಂದಾಪುರ: ಬೈಂದೂರು, ಕುಂದಾಪುರ, ಬೈಂದೂರು, ಉಡುಪಿ, ಕಾರ್ಕಳ ಸಹಿತ ಜಿಲ್ಲಾದ್ಯಂತ ಗುರುವಾರ ಮಧ್ಯಾಹ್ನದಿಂದ ಮತ್ತೆ ಗುಡುಗು ಸಹಿತ ಮಳೆಯಾಗಿದೆ. ಮುಂಗಾರು ಹಂಗಾಮಿನ ಕಟಾವಿನ ತರಾತುರಿಯಲ್ಲಿದ್ದ ರೈತರಿಗೆ ಮತ್ತೆ ಅಡ್ಡಿ ಉಂಟು ಮಾಡಿದೆ. ಯಂತ್ರಗಳು ಸಿಗದೇ ಕಟಾವು ವಿಳಂಬವಾಗುತ್ತಿದ್ದು, ಖಾಸಗಿ ಕಟಾವು ಯಂತ್ರಗಳು ದರ ಹೆಚ್ಚಿಸಿ, ಬೇಡಿಕೆ ಸೃಷ್ಟಿಗೆ ಹುನ್ನಾರ ನಡೆಸುತ್ತಿದ್ದಾರೆ ಅನ್ನುವ ಆರೋಪ ರೈತರಿಂದ ಕೇಳಿ ಬರುತ್ತಿದೆ.

Advertisement

ಅಕಾಲಿಕ ಮಳೆಯಿಂದಾಗಿ ಮುಂಗಾರು ಹಂಗಾಮಿನ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆಗೆ ಹಾನಿಯಾಗುತ್ತಿದೆ. ಬೆಳೆದಿದ್ದ ಒಂದಿಷ್ಟು ಬೆಳೆಯೂ ಸಕಾಲದಲ್ಲಿ ಕಟಾವು ಮಾಡಲಾಗದೇ ರೈತರು ಕಂಗಾಲಾಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು 35 ಸಾವಿರ ಹೆಕ್ಟೇರ್‌ ಪ್ರದೇಶಲ್ಲಿ ಭತ್ತದ ಕೃಷಿ ಮಾಡಲಾಗಿದೆ. ಈ ಪೈಕಿ ಶೇ.40-50 ರಷ್ಟು ರೈತರದು ಮಾತ್ರ ಕಟಾವು ಆಗಿದೆ.

ಗದ್ದೆಗೆ ಇಳಿಯುವುದೇ ಕಷ್ಟ
ಬೆಳೆದು ನಿಂತಿದ್ದ ಭತ್ತ ಕೊಯ್ಲು ಮಾಡಲು ಹೊರಟಿದ್ದವರನ್ನು ಮಳೆ ಕಂಗೆಡಿಸಿದೆ. ಕೆಲವೆಡೆಗಳಲ್ಲಿ ಗದ್ದೆಗಳಲ್ಲಿ ನೀರು ನಿಂತಿದ್ದು, ಗಾಳಿಗೆ ಭತ್ತದ ಪೈರು ಬಾಗಿ, ನೀರಲ್ಲಿ ತೋಯುತ್ತಿದೆ. ಯಂತ್ರಗಳು ಬಂದರೂ, ಗದ್ದೆಗೆ ಇಳಿಸುವುದು ಕಷ್ಟ. ಕೆಸರು ನೀರಲ್ಲಿ ಹುದುಗಿ ಹೋಗುವ ಆತಂಕವೂ ಇದೆ. ಇನ್ನು ಜನರೇ ಕೊಯ್ಲು ಮಾಡಿದರೂ, ಕೊಯ್ದು ಇಡಲು ಗದ್ದೆಗಳಲ್ಲಿ ನೀರು ಇರುವುದರಿಂದ ಕಷ್ಟ. ಮಳೆ ಹೀಗೆ ಮುಂದುವರಿದದ್ದೇ ಆದರೆ ಭತ್ತ ಉದುರಿ ನೆಲಕಚ್ಚುವುದು ನಿಶ್ಚಿತ ಎನ್ನುವ ಆತಂಕ ರೈತರದಾಗಿದೆ.

ಹಿಂಗಾರು ಹಂಗಾಮಿನ ಕೃಷಿ ಕಾರ್ಯವೂ ವಿಳಂಬ ಸಾಧ್ಯತೆ!
ಭತ್ತದ ಬೆಳೆ ಕಟಾವಿಗೆ ಸಿದ್ಧವಾಗಿದ್ದು, ಮಳೆಯಿಂದಾಗಿ ಕಟಾವು ಮಾಡಲು ಆಗುತ್ತಿಲ್ಲ. ಹೀಗೆಯೇ ಬಿಟ್ಟರೆ ಬೆಳೆ ಪೂರ್ತಿ ಕಾಡುಪ್ರಾಣಿಗಳು, ಪಕ್ಷಿಗಳಿಗೆ ಆಹಾರ ಆಗುತ್ತವೆ. ಬೆಳೆದ ರೈತರಿಗೆ ಸಿಗುವುದು ಅನುಮಾನವೆನಿಸಿದೆ. ಇನ್ನು ಹೀಗೆ ಮಳೆ ಮುಂದುವರಿದರೆ ಮುಂಬರುವ ಹಿಂಗಾರು ಹಂಗಾಮಿನ ಕೃಷಿ ಕಾರ್ಯವೂ ವಿಳಂಬಗೊಳ್ಳಲಿದೆ ಎನ್ನುವುದಾಗಿ ಆತಂಕ ವ್ಯಕ್ತಪಡಿಸುತ್ತಾರೆ ಹೊಸಂಗಡಿ ಬೆಚ್ಚಳಿಯ ರೈತರಾದ ರಾಜೇಂದ್ರ ಪೂಜಾರಿ.

ಕಟಾವಿಗೆ ಸಿಗುತ್ತಿಲ್ಲ ಯಂತ್ರಗಳು; ದರ ಹೆಚ್ಚಿಸಿ ಬೇಡಿಕೆ ಸೃಷ್ಟಿ ಹುನ್ನಾರ
ಕುಂದಾಪುರ, ಬೈಂದೂರು ಭಾಗದಲ್ಲಿ ಹೊರ ಜಿಲ್ಲೆಗಳಿಂದ ಆಗಮಿಸಿರುವ ಕಟಾವು ಯಂತ್ರಗಳಿಗೆ ಗಂಟೆಗೆ ಹೆಚ್ಚೆಂದರೆ 2,300 -2,400 ರೂ. ದರದಲ್ಲಿ ಕಟಾವು ಮಾಡಲಾಗುತ್ತಿದೆ. ಆದರೆ ಈಗ ಕೆಲ ದಿನಗಳಿಂದ ಎಲ್ಲೆಡೆಗಳಲ್ಲಿ ಕಟಾವು ಯಂತ್ರಗಳಿಗೆ ಬೇಡಿಕೆ ಕೇಳಿ ಬರುತ್ತಿರುವುದರಿಂದ ಯಂತ್ರಗಳ ಮಾಲಕರು ಸಹ ದರವನ್ನು ಹೆಚ್ಚಿಸುತ್ತಿದ್ದು, 2,800, 3 ಸಾವಿರ, 3,500 ರೂ. ಕೊಟ್ಟರೆ ಬರುತ್ತೇವೆ. ಇಲ್ಲದಿದ್ದರೆ ಬರುವುದಿಲ್ಲ ಅನ್ನುವ ಬೇಡಿಕೆಯನ್ನು ಇಡುತ್ತಿರುವುದು ಕುಂದಾಪುರದ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿದೆ. ಇದು ರೈತರಿಗೆ ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಿದೆ.

Advertisement

ರಾತ್ರಿ-ಹಗಲು ಬೆಳೆ ಕಾಯುತ್ತಿದ್ದೇವೆ..
5 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗಿದೆ. ನಮ್ಮ ಜಡ್ಡಿನಗದ್ದೆ, ಕೆಲಾ, ಕೆಳಸುಂಕ ಪ್ರದೇಶದಲ್ಲಿ ಸುಮಾರು 300 ಎಕರೆಯಷ್ಟು ಬೆಳೆ ಕಟಾವಿಗೆ ಬಾಕಿಯಿದೆ. ಕಳೆದ 15 ದಿನಗಳಿಂದ ಯಂತ್ರಕ್ಕಾಗಿ ಕಾಯುತ್ತಿದ್ದೇವೆ. ಕೃಷಿ ಇಲಾಖೆಯ ಯಂತ್ರಗಳು ಸಿಗುತ್ತಿಲ್ಲ. ಖಾಸಗಿಯವರು ಹೆಚ್ಚು ಬೆಲೆ ಕೊಟ್ಟರೆ ಬರುತ್ತೇವೆ ಅನ್ನುತ್ತಿದ್ದಾರೆ. ಬೆಳಗ್ಗೆ ಮಂಗ, ನವಿಲು ಕಾಟವಾದರೆ ರಾತ್ರಿ ಹಂದಿ, ಜಂಕೆ, ಕಡವೆ ಕಾಟ. ರಾತ್ರಿ – ಹಗಲು ಗದ್ದೆ ಬದಿ ಬೆಳೆದ ಬೆಳೆಯನ್ನು ಕಾಯುವಂತಾಗಿದೆ.
– ರಾಘವೇಂದ್ರ ನಾಯ್ಕ ಜಡ್ಡಿನಗದ್ದೆ

8 ಕಟಾವು ಯಂತ್ರ ಲಭ್ಯ
ನಮ್ಮಲ್ಲಿ ಇಲಾಖೆಯಡಿ ಯಂತ್ರಧಾರೆ ಕೇಂದ್ರಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 8 ಕಟಾವು ಯಂತ್ರಗಳು ಲಭ್ಯವಿದ್ದು, ರೈತರು ಮುಂಗಡ ಬುಕ್ಕಿಂಗ್‌ ಮಾಡಿಕೊಂಡು ಪಡೆಯಬಹುದು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರ ಸಿರಿಯಡಿ 45 ಯಂತ್ರಗಳಿವೆ. ಸ್ವಯಂ ಸೇವಾ ಸಂಸ್ಥೆಯವರು ಯಾರಾದರೂ ಆಸಕ್ತಿಯಿದ್ದರೆ ಹೆಚ್ಚುವರಿ ಯಂತ್ರಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ಚಂದ್ರಶೇಖರ ನಾಯಕ್‌, ಉಪನಿರ್ದೇಶಕರು, ಕೃಷಿ ಇಲಾಖೆ ಉಡುಪಿ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next