Advertisement

Mangaluru: ಪಿಲಿಕುಳದಲ್ಲಿ ನ. 17ರಂದು ಕಂಬಳ ಆಯೋಜನೆ ಇಲ್ಲ

10:34 PM Nov 12, 2024 | Team Udayavani |

ಬೆಂಗಳೂರು: ಮಂಗಳೂರು ಸಮೀಪದ ಪಿಲಿಕುಳದ ನಿಸರ್ಗ ಧಾಮದ ಬಳಿ ನ. 17ರಂದು ಕಂಬಳ ಸ್ಪರ್ಧೆ ನಡೆಸುವ ಕುರಿತು ಈವರೆಗೂ ಯಾವುದೇ ನಿರ್ಧಾರವಾಗಿಲ್ಲ ಎಂದು ಹೈಕೋರ್ಟ್‌ಗೆ ರಾಜ್ಯ ಸರಕಾರ ಮಾಹಿತಿ ನೀಡಿದೆ.

Advertisement

ಪಿಲಿಕುಳದ ಕಂಬಳ ಸ್ಪರ್ಧೆಯು ಪ್ರಾಣಿ ಸಂಗ್ರಹಾಲಯದ (ನಿಸರ್ಗ ಧಾಮ) ಸಮೀಪ ನಡೆಲಿರುವುದರಿಂದ ಅಲ್ಲಿನ ಪ್ರಾಣಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಆಕ್ಷೇಪಿಸಿ “ಪೀಪಲ್‌ ಫಾರ್‌ ದಿ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್ ಅನಿಮಲ್‌’ (ಪೆಟಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಮತ್ತು ನ್ಯಾ| ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರಕಾರ ಮಂಗಳವಾರ ಮಾಹಿತಿ ನೀಡಿತು.

ಅರ್ಜಿದಾರರ ಪರ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ, ದಕ್ಷಿಣ ಕನ್ನಡ ಮತ್ತು ಉಡುಪಿಯ ಯಾವುದೇ ಭಾಗದಲ್ಲಿ ಕಂಬಳ ಸ್ಪರ್ಧೆಗೆ ಆಕ್ಷೇಪವಿಲ್ಲ. ಪಿಲಿಕುಳದಲ್ಲಿ ಆಯೋಜನೆಗೂ ಅಭ್ಯಂತರವಿಲ್ಲ. ಆದರೆ ಪ್ರಾಣಿ ಸಂಗ್ರಹಾಲಯದ ಪರಿಸರದಲ್ಲಿ ಆಯೋಜನೆಗೆ ವಿರೋಧವಿದೆ. ಉದ್ದೇಶಿತ ಸ್ಪರ್ಧೆಯು ಪ್ರಾಣಿ ಸಂಗ್ರಹಾಲಯದ ಸಮೀಪ ನಡೆಯುತ್ತಿವುದರಿಂದ ಅಲ್ಲಿರುವ ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತದೆ. ಈ ಸಂಬಂಧ ಪ್ರಾಣಿ ಸಂಗ್ರಹಾಲಯದ ನಿರ್ದೇಶಕರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.

ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ, ನವೆಂಬರ್‌ 17ಕ್ಕೆ ಪಿಳಿಕುಳದಲ್ಲಿ ಕಂಬಳ ಸ್ಪರ್ಧೆ ನಡೆಸುವುದು ಇನ್ನೂ ನಿರ್ಧಾರವಾಗಿಲ್ಲ. ಪಿಳಿಕುಳ ಅಭಿವೃದ್ಧಿ ಪ್ರಾಧಿಕಾರದ ಸ್ಥಳದಲ್ಲಿ ಕಂಬಳ ಸ್ಪರ್ಧೆ ಆಯೋಜಿಸಲಾಗುತ್ತದೆ. ಅವರು ವರದಿ ನೀಡಬೇಕು. ದ.ಕ. ಜಿಲ್ಲಾಧಿಕಾರಿ ಕಂಬಳ ಸ್ಪರ್ಧೆಯ ಉಸ್ತುವಾರಿಯಾಗಿರುತ್ತಾರೆ. ಹೀಗಾಗಿ ಅವರನ್ನು ಅರ್ಜಿದಾರರು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಬೇಕು ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮಂಗಳೂರು ಜಿಲ್ಲಾಧಿಕಾರಿ ಹಾಗೂ ಪಿಲಿಕುಳ ಆಭಿವೃದ್ಧಿ ಪ್ರಾಧಿಕಾರವನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಸೇರಿಸಲು ಅನುಮತಿಸಿ ವಿಚಾರಣೆಯನ್ನು ನವೆಂಬರ್‌ 20ಕ್ಕೆ ಮುಂದೂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next