ಮಣಿಪಾಲ: ರಾಜ್ಯ ಸರಕಾರ, ವಕ್ಫ್ ಬೋರ್ಡ್ ಲ್ಯಾಂಡ್ ಜೆಹಾದ್ ನಡೆಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ನೇತೃತ್ವದಲ್ಲಿ ಇಲ್ಲಿನ ಉಪೇಂದ್ರ ಪೈ ವೃತ್ತ(ಕಾಯಿನ್ ಸರ್ಕಲ್)ದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಇದು ಕೇವಲ ರೈತರ ಆಸ್ತಿ ಮಾತ್ರವಲ್ಲ ಸಾರ್ವಜನಿಕರು, ಸರಕಾರಿ ಅಧಿಕಾರಗಳ ಆಸ್ತಿಯೂ ವಕ್ಫ್ ಬೋರ್ಡ್‌ಗೆ ಹೋಗಿರುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮ್ಮಕ್ಕಿನಿಂದಲೇ ಇದು ಆಗಿದೆ. ಸಚಿವ ಜಮೀರ್‌ಖಾನ್ ತತ್‌ಕ್ಷಣ ರಾಜೀನಾಮೆ ನೀಡಬೇಕು. ಈ ಸಂಬಂಧ ಮುಖ್ಯಮಂತ್ರಿಗಳು ಜನರ ಕ್ಷಮೆ ಕೇಳಬೇಕು ಹಾಗೂ ವಕ್ಫ್ ಅದಾಲತ್ ನಡೆಸದಂತೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು. ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಮಸೂದೆಗೆ ರಾಜ್ಯ ಸರಕಾರ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.
ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಲ್ಯಾಂಡ್ ಜೆಹಾದ್‌ಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಹಿಂದೂಗಳು ಒಂದಾಗಿ ಹೋರಾಟ ಮಾಡದಿದ್ದರೆ ಮುಂದೆ ಇನ್ನಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ. ಹಿಂದೂಗಳ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಹಿಂದೂಗಳಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ವಕ್ತಾರ ಸತೀಶ್ ಶೆಟ್ಟಿ ಮುಟ್ಲಪಾಡಿ ಮಾತನಾಡಿ ರಾಜ್ಯ ಸರಕಾರ ಹಾಗೂ ವಕ್ಫ್ ಬೋರ್ಡ್ ಕ್ರಮವನ್ನು ಖಂಡಿಸಿದರು. ಪ್ರತಿಭಟನೆಯ ಅನಂತರ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಕಾರರನ್ನು ತಡೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಖಾನ್, ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ ಶೆಟ್ಟಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಪ್ರಮುಖರಾದ ಶಿಲ್ಪಾ ಸುವರ್ಣ, ಸಂಧ್ಯಾ ರಮೇಶ್, ವಿಜಯ ಕುಮಾರ್ ಉದ್ಯಾವರ, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಶ್ರೀಶ ನಾಯಕ್ ಪೆರ್ಣಂಕಿಲ, ರಾಜೇಶ್ ಕಾವೇರಿ, ದಿನೇಶ್ ಅಮೀನ್, ರಾಜೀವ್ ಕುಲಾಲ್, ನಳಿನಿ ಪ್ರದೀಪ್ ರಾವ್, ವಿಜಯ್ ಕೊಡವೂರು, ಗೀತಾಂಜಲಿ ಸುವರ್ಣ, ಶ್ರೀನಿಧಿ ಹೆಗ್ಡೆ, ಸತ್ಯಾನಂದ ನಾಯಕ್, ಶಿವಕುಮಾರ್ ಅಂಬಲಪಾಡಿ ಸಹಿತ ವಿವಿಧ ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದ್ದರು.