ದುಮ್ಕಾ: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಮಹಾ ಮೈತ್ರಿ ಕೂಟ ಇನ್ನು ಎರಡು ಮೂರು ದಿನದಲ್ಲಿ ಹೊಸ ಸರಕಾರ ರಚಿಸುವುದಾಗಿ ಹೇಮಂತ್ ಸೊರೇನ್ ಸಹೋದರ ಬಸಂತ್ ಸೊರೇನ್ ಹೇಳಿದ್ದಾರೆ.
ಜನಾದೇಶ ಸಂಪೂರ್ಣ ನಮ್ಮ ಪರವಾಗಿದೆ. ಹಾಗಾಗಿ ಎರಡು ಮೂರು ದಿನದೊಳಗೆ ನಾವು ಸರಕಾರ ರಚಿಸುತ್ತೇವೆ ಎಂದು ಹೇಮಂತ್ ಸಹೋದರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಾರ್ಖಂಡ್ ವಿಧಾನಸಭೆಯ 81 ಕ್ಷೇತ್ರಗಳ ಪೈಕಿ ಜೆಎಂಎಂ +ಕಾಂಗ್ರೆಸ್ + ಆರ್ ಜೆಡಿ ಮೈತ್ರಿ ಕೂಟ ಒಟ್ಟು 47 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿದೆ. ಉಳಿದಂತೆ ಬಿಜೆಪಿ 25 ಸ್ಥಾನಗಳನ್ನು ಗೆದ್ದು ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.
ಜೆಎಂಎಂ ಪಕ್ಷದ ನೇತಾರ ಹೇಮಂತ್ ಸೊರೇನ್ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ನಿಶ್ಚಿತವಾಗಿದೆ. ಈ ಹಿಂದೆ ಅಲ್ಪಕಾಲಕ್ಕೆ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಮತ್ತೊಮ್ಮೆ ಪಟ್ಟ ಅಲಂಕರಿಸಲಿದ್ದಾರೆ.