ಲಕ್ನೋ: ಪ್ರೀತಿಸಿದ ಯುವತಿಗೋಸ್ಕರ ಮಹಿಳೆಯೊಬ್ಬರು ತನ್ನ ಲಿಂಗವನ್ನು ಬದಲಾಯಿಸಿಕೊಳ್ಳುವ ಸರ್ಜರಿಗೆ ಒಳಗಾಗಿ ವಿವಾಹವಾಗಿದ್ದಾರೆ. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಈ ಅಸಾಂಪ್ರದಾಯಿಕ ಮದುವೆ ನೆರವೇರಿದೆ.
ಕನ್ನೌಜ್ನ ಸರೈ ಮೀರಾ ಎಂಬಲ್ಲಿನ ಆಭರಣ ವ್ಯಾಪಾರಿಯ ಮಗಳು ಬ್ಯೂಟಿ ಪಾರ್ಲರ್ ಮಾಲೀಕನಾಗಿರುವ ಯುವತಿ ಜತೆ ನವೆಂಬರ್ 25 ರಂದು ವಿವಾಹವಾಗಿದ್ದಾರೆ. ತಾನು ಇಷ್ಟಪಟ್ಟ ಹುಡುಗಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಆಭರಣ ವ್ಯಾಪಾರಿಯ ಮಗಳು ತನ್ನ ಲಿಂಗವನ್ನೇ ಬದಲಾಯಿಸಿಕೊಳ್ಳುವ ಸರ್ಜರಿಗೆ ಒಳಗಾಗಿದ್ದಾರೆ.
ಆಭರಣ ವ್ಯಾಪಾರಿಯ ಮಗಳು ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆ ಎಂದು ಕರೆಯುವ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ. ಗಂಡಾಗಿ ಬದಲಾಗುವ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು ಈ ಹಂತದಲ್ಲೇ ಯುವತಿ ಪ್ರೀತಿಸಿದ ಹುಡುಗಿ ಜತೆ ವಿವಾಹವಾಗಿದ್ದಾರೆ.
ಲವ್ ಸ್ಟೋರಿ ಶುರುವಾದದ್ದು ಹೇಗೆ?: 2020ರಲ್ಲಿ ಬ್ಯೂಟಿ ಪಾರ್ಲರ್ ಹೊಂದಿರುವ ಯುವತಿ ಚಿನ್ನ ಖರೀದಿಸಲು ವ್ಯಾಪಾರಿಯ ಕುಟುಂಬದ ಒಡೆತನದ ಆಭರಣದ ಅಂಗಡಿಗೆ ಬಂದಾಗ ಇಬ್ಬರ ನಡುವೆ ಪರಿಚಯವಾಗುತ್ತದೆ. ಈ ಪರಿಚಯ ಆತ್ಮೀಯತೆಗೆ ತಿರುಗಿದ ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ.
ಇದಾದ ನಂತರ ಎರಡೂ ಕುಟುಂಬದ ಒಪ್ಪಿಗೆ ಪಡೆದು ಇಬ್ಬರು ವಿವಾಹವಾಗಲು ನಿಶ್ಚಯಿಸುತ್ತಾರೆ. ಇದಕ್ಕಾಗಿ ಆಭರಣ ವ್ಯಾಪಾರಿಯ ಮಗಳು ಗಂಡಾಗಿ ಬದಲಾಗುವ ಸರ್ಜರಿಗೆ ಒಳಗಾಗಲು ಮುಂದಾಗುತ್ತಾಳೆ.
ಪರಿಣಾಮ ವ್ಯಾಪಾರಿಯ ಮಗಳು ಮೂರು ಲಿಂಗ ಪುನರ್ವಿತರಣೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾಳೆ. ಪುರುಷ ರೂಪಕ್ಕೆ ತನ್ನ ರೂಪಾಂತರವನ್ನು ಪೂರ್ಣಗೊಳಿಸಲು ನಾಲ್ಕನೆಯದಕ್ಕೆ ತಯಾರಿ ನಡೆಸುತ್ತಿದ್ದಾಳೆ ಎಂದು ವರದಿ ತಿಳಿಸಿದೆ.
ಲಿಂಗ-ದೃಢೀಕರಣ ಶಸ್ತ್ರಚಿಕಿತ್ಸೆಯ ಕಾರ್ಯವಿಧಾನಗಳಿಗೆ ಸುಮಾರು 7 ಲಕ್ಷ ರೂ. ಖರ್ಚು ತಗುಲಿದೆ ಎಂದು ವರದಿ ತಿಳಿಸಿದೆ.
ಸದ್ಯ ಈ ಮದುವೆ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಚರ್ಚೆ ಹುಟ್ಟು ಹಾಕಿದೆ.