ಹುಬ್ಬಳ್ಳಿ: ಸಣ್ಣಪುಟ್ಟ ವ್ಯಾಪಾರ, ಪಾರಂಪರಿಕವಾಗಿ ಬಂದ ವೃತ್ತಿ ಮಾಡಿಕೊಂಡಿದ್ದವರಿಗೆ ಉದ್ಯಮಿಗಳಾಗುವ ತರಬೇತಿ ನೀಡಿ, ಸಂವಹನ ಕಲೆ, ವಹಿವಾಟು ವೃದ್ಧಿಯೊಂದಿಗೆ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳ ಸುಮಾರು 11 ಸಾವಿರ ಸಣ್ಣ ವ್ಯಾಪಾರಸ್ಥರಿಗೆ ಉದ್ಯಮ ದೀಕ್ಷೆ ನೀಡುವ ನಿಟ್ಟಿನಲ್ಲಿ ದೇಶಪಾಂಡೆ ಪ್ರತಿಷ್ಠಾನದ ‘ನವೋದ್ಯಮಿ’ ಮಹತ್ವದ ಸಾಧನೆ ತೋರಿದೆ.
ಕರ್ನಾಟಕ, ತೆಲಂಗಾಣ ಹಾಗೂ ಉತ್ತರ ಪ್ರದೇಶದಲ್ಲಿ ಸಂಪರ್ಕ ಹೊಂದಿರುವ ದೇಶಪಾಂಡೆ ಪ್ರತಿಷ್ಠಾನದ ನವೋದ್ಯಮಿ ಯೋಜನೆ, ನಾವೆಂದು ಉದ್ಯಮಿಗಳಾಗಬೇಕು ನಮ್ಮದೇನಿದ್ದರೂ ಸಣ್ಣಪುಟ್ಟ ವ್ಯಾಪಾರ, ಕುಟುಂಬ ನಿರ್ವಹಣೆ ವೃತ್ತಿ ಎಂದುಕೊಂಡವರಿಗೆ ಉದ್ಯಮಶೀಲತೆ ರುಚಿ ಹಚ್ಚಿಸಿ,
ಅವರ ವಹಿವಾಟು ವೃದ್ಧಿಯ ಜತೆಗೆ ಉದ್ಯಮಿಗಳ ಸಾಲಿಗೆ ತಂದು ನಿಲ್ಲಿಸುವ ಸಾರ್ಥಕ ಸೇವೆಯಲ್ಲಿ ತೊಡಗಿದೆ.
ಡಾ| ಗುರುರಾಜ ದೇಶಪಾಂಡೆ ಅವರು ಅಮೆರಿಕದಲ್ಲಿ ನೆಲೆಕಂಡ ಉದ್ಯಮಿಯಾಗಿದ್ದರೂ, ಜನ್ಮತಳೆದ ನೆಲಕ್ಕೆ ಏನಾದರೂ ಮಾಡಬೇಕೆಂಬ ಉದ್ದೇಶದೊಂದಿಗೆ ಹುಬ್ಬಳ್ಳಿಯಲ್ಲಿ ಸಾಮಾಜಿಕ ಉದ್ಯಮ, ವಿದ್ಯಾರ್ಥಿಗಳಿಗೆ ತರಬೇತಿ, ಕೃಷಿ-ಉದ್ಯಮ ಅಭಿವೃದ್ಧಿ, ಆರೋಗ್ಯ ಹೀಗೆ ಬಹು ಉದ್ದೇಶ ಚಿಂತನೆಯ ದೇಶಪಾಂಡೆ ಪ್ರತಿಷ್ಠಾನ ಆರಂಭಿಸಿದರು. ಅದರ ಭಾಗವಾಗಿಯೇ 2011ರಲ್ಲಿ ‘ನವೋದ್ಯಮಿ’ ಯೋಜನೆ ಮೊಳಕೆಯೊಡೆದಿತ್ತು.
ಸಣ್ಣ ವ್ಯಾಪಾರಸ್ಥರು, ಅತಿಸಣ್ಣ ಉದ್ಯಮಿಗಳು, ಪಾರಂಪರಿಕ ವೃತ್ತಿಯಲ್ಲೇ ಮುಂದುವರಿದವರನ್ನು ಗುರುತಿಸಿ ಅವರಿಗೆ ಅಗತ್ಯ ತರಬೇತಿಯೊಂದಿಗೆ ಉದ್ಯಮ ಬೆಳವಣಿಗೆಗೆ ಅಣಿಗೊಳಿಸುವ ಕಾರ್ಯಕ್ಕೆ ನವೋದ್ಯಮಿ ಮುಂದಾಗಿತ್ತು. ಆರಂಭದಲ್ಲಿ ಹಲವು ಅನುಮಾನ, ಪಾರಂಪರಿಕವಾಗಿ ಬಂದು ವೃತ್ತಿ-ವ್ಯಾಪಾರದ ಗುಟ್ಟು ರಟ್ಟಾದರೆ ಹೇಗೆ, ನಮಗೆ ಕಲಿಸುವ ಇವರಿಗೇನು ಲಾಭ, ನಾಳೆ ನನ್ನ ವ್ಯಾಪಾರ-ಪಾರಂಪರಿಕ ಕಸುಬಿಗೆ ತೊಂದರೆ ತಂದರೆ, ಪೈಪೋಟಿಯಾಗಿ ಇನ್ನೊಬ್ಬರನ್ನು ಸೃಷ್ಟಿಸಿದರೆ, ಇವರೊಂದಿಗೆ ಸೇರಿದರೆ ನನಗೆ ಲಾಭ ಆಗುವುದೇ ಎಂಬಿತ್ಯಾದಿ ಹಲವು ಅನುಮಾನ, ಪ್ರಶ್ನೆಗಳೊಂದಿಗೆ ನವೋದ್ಯಮಿಗೆ ಅಡಿಯಿಟ್ಟ ಅನೇಕರು ಇಂದು ಸಂತಸದ ನಗೆ ಬೀರಿದ್ದಾರೆ.
11 ಸಾವಿರ ಜನರಿಗೆ ತರಬೇತಿ: 2011ರಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಕಟ್ಟಡದಲ್ಲಿ ಆರಂಭಗೊಂಡ ನವೋದ್ಯಮಿಯಲ್ಲಿ ವಿಶೇಷವಾಗಿ ಗ್ರಾಮೀಣ ಹಾಗೂ ಬಡ ಮಹಿಳೆಯರು ಬಟ್ಟೆ, ಪೇಟಿಂಗ್, ಆಹಾರ ಉತ್ಪನ್ನಗಳು, ಗೃಹಲಂಕಾರ, ಆಟಿಕೆ ವಸ್ತುಗಳು ಹೀಗೆ ವಿವಿಧ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ, ಉದ್ಯಮ ನೆಗೆತ ಕಂಡುಕೊಂಡಿದ್ದಾರೆ. ನವೋದ್ಯಮಿ ಹುಬ್ಬಳ್ಳಿ ಸ್ಯಾಂಡ್‌ಬಾಕ್ಸ್, ನಿಜಾಮಾಬಾದ್‌ನ ಕಾಕತಿಯ ಸ್ಯಾಂಡ್‌ಬಾಕ್ಸ್, ವಾರಣಾಸಿಯ ಏಕ್ ಸೋಚ್ ಸ್ಯಾಂಡ್ ಬಾಕ್ಸ್ ಸಂಪರ್ಕದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ ಒಟ್ಟು 11,000 ಸಣ್ಣ ವ್ಯಾಪಾರಸ್ಥರು-ಉದ್ಯಮಿಗಳಿಗೆ ಉದ್ಯಮ ನೆಗೆತ ತರಬೇತಿ ನೀಡಿದೆ.
ಸುಮಾರು 968 ಸಣ್ಣ ಉದ್ಯಮದಾರರನ್ನು ಗುರುತಿಸಿ ಅವರಿಗೆ ಅಗತ್ಯ ಸಹಾಯ, ಮಾರುಕಟ್ಟೆ ನೆರವು ಕಲ್ಪಿಸುವ ಕಾರ್ಯ ಮಾಡಿದ್ದು, ಇದರಲ್ಲಿ ಸುಮಾರು 100 ಉದ್ಯಮದಾರರು ತಮ್ಮ ವಹಿವಾಟನ್ನು 4 ಕೋಟಿ ರೂ.ನಿಂದ 12 ಕೋಟಿ ರೂ.ವರೆಗೂ ಹೆಚ್ಚಿಸಿಕೊಂಡಿದ್ದಾರೆ. ಅಂದಾಜು 600 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿರುವುದು ಮಹತ್ತರ ಸಾಧನೆಯಾಗಿದೆ.
ನವೋದ್ಯಮಿ ಅಡಿಯಲ್ಲಿ ತರಬೇತಿ ಪಡೆದುಕೊಂಡ ಸುಮಾರು 100ಕ್ಕೂ ಹೆಚ್ಚು ಸಣ್ಣ ಉದ್ಯಮದಾರಿಗೆ ಬ್ಯಾಂಕ್ ಗಳ ಮೂಲಕ 1.5 ಕೋಟಿ ರೂ. ಸಾಲ ಸೌಲಭ್ಯದ ಸಂಪರ್ಕ ಕಲ್ಪಿಸಿದೆ. 200ಕ್ಕೂ ಹೆಚ್ಚು ಮಾರ್ಗದರ್ಶಕರು, ವಿವಿಧ ಉದ್ಯಮ ತಜ್ಞರು, ಯಶಸ್ವಿ ಉದ್ಯಮಿಗಳಿಂದ ಮಾರ್ಗದರ್ಶನ, ತರಬೇತಿ ಕಾರ್ಯ ತೋರಿದೆ. ನವೋದ್ಯಮಿಯಡಿ ತರಬೇತಿ ಪಡೆದವರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ನವೋದ್ಯಮಿಯಿಂದಲೇ ಮಾರಾಟ ಮಳಿಗೆ ಆರಂಭಿಸಲಾಗಿದ್ದು, ವಿವಿಧೆಡೆ ನವೋದ್ಯಮಿ ಸಂತೆಗಳನ್ನು ಆಯೋಜಿಸಲಾಗುತ್ತಿದೆ.
ಅಮರೇಗೌಡ ಗೋನವಾರ