Advertisement

ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ ವಿತರಣೆ ಶುರು

06:25 AM Aug 04, 2018 | |

ಉಡುಪಿ: ಹದಿಹರೆಯದ (6 – 12ನೇ ತರಗತಿ ವರೆಗಿನ) ಹೆಣ್ಣು ಮಕ್ಕಳು ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ದೃಷ್ಟಿಯಿಂದ, ಶುಚಿತ್ವದ ಅರಿವಿನ ನಿಟ್ಟಿನಲ್ಲಿ  ಆರೋಗ್ಯ ಇಲಾಖೆಯಿಂದ “ಶುಚಿ’ ಯೋಜನೆಯಡಿ ಜಿಲ್ಲೆಯ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲಾ – ಕಾಲೇಜು ವಿದ್ಯಾರ್ಥಿನಿಯರಿಗೆ ಸರಕಾರದ ರಾಷ್ಟ್ರೀಯ ಗ್ರಾಮೀಣ ಅಭಿಯಾನದಡಿ ಸಂಪೂರ್ಣ ಉಚಿತ ನ್ಯಾಪ್ಕಿನ್ (ಸ್ಯಾನಿಟರಿ ಪ್ಯಾಡ್‌) ವಿತರಿಸುವ ಯೋಜನೆ ಚಾಲ್ತಿಯಲ್ಲಿದೆ. 

Advertisement

ವಿತರಣೆ ಆರಂಭ
6ನೇ ತರಗತಿಯ ಮೊದಲು ಹೆಣ್ಣು ಮಕ್ಕಳಿಗೆ ಋತುಚಕ್ರ ಆರಂಭಗೊಂಡರೆ ಅಂತಹ ಹೆಣ್ಣು ಮಕ್ಕಳನ್ನೂ ಗುರುತಿಸಿ ನ್ಯಾಪ್ಕಿನ್ ವಿತರಿಸಲಾಗುತ್ತಿದೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ಈ ಬಾರಿ ಈಗ ತಾನೇ ಸರಬರಾಜು ಆರಂಭಗೊಂಡಿದೆ. ಜಿಲ್ಲೆಯಲ್ಲಿರುವ ಶಾಲಾ – ಕಾಲೇಜುಗಳ ಪಟ್ಟಿಯನ್ನು ಸರಕಾರಕ್ಕೆ ಈಗಾಗಲೇ ಕಳುಹಿಸಿಕೊಡಲಾಗಿದ್ದು, ಸರಕಾರದಿಂದ ನೇರವಾಗಿ ಶಾಲಾ – ಕಾಲೇಜುಗಳಿಗೆ ಸರಬರಾಜಾಗಿ, ಅಲ್ಲಿಂದ ವಿದ್ಯಾರ್ಥಿನಿಯರಿಗೆ ವಿತರಣೆಯಾಗಲಿದೆ.  

ವರ್ಷಕ್ಕೆ 13 ಪ್ಯಾಕೇಟ್‌ 
10 ಪ್ಯಾಡ್‌ಗಳಿರುವ 1 ಪ್ಯಾಕೇಟ್‌ ಅನ್ನು ಪ್ರತೀ ತಿಂಗಳಿಗೆ 1ರಂತೆ ವರ್ಷಕ್ಕೆ 13 ಪ್ಯಾಕೇಟ್‌ಗಳನ್ನು ಒದಗಿಸಲಾಗುತ್ತಿದೆ. (ಕೆಲವು ಹೆಣ್ಣು ಮಕ್ಕಳಿಗೆ ನಿಗದಿತ ದಿನಾಂಕದ ಮೊದಲೇ ಋತುಸ್ರಾವವಾಗುವ ನಿಟ್ಟಿನಲ್ಲಿ 12ರ ಬದಲು 13 ಪ್ಯಾಡ್‌ಗಳನ್ನು ನೀಡಲಾಗುತ್ತಿದೆ). ಶಾಲೆಗಳು ಮತ್ತು ಹಾಸ್ಟೆಲ್‌ ಒಳಗೊಂಡಿರುವ ಶಾಲೆಗಳಲ್ಲಿ (ರೆಸಿಡೆನ್ಶಿಯಲ್‌ ಸ್ಕೂಲ್‌)ಗಳ ನೋಡಲ್‌ ಶಿಕ್ಷಕಿಯರ ಮೂಲಕ  ಹೆಣ್ಣು ಮಕ್ಕಳಿಗೆ ಪೂರೈಕೆ ಮಾಡಲಾಗುತ್ತದೆ. 

ಶಾಲೆಯಿಂದ ಹೊರಗೆ ಉಳಿದವರಿಗೂ ವಿತರಣೆ
ಪ್ಯಾಡ್‌ಗಳನ್ನು ಸರಕಾರವೇ ಖರೀದಿಸಿ ಶಾಲೆಗಳ ಮೂಲಕ ವಿತರಿಸುತ್ತದೆ. ಶಾಲೆಯಿಂದ ಹೊರಗುಳಿದ ಹದಿಹರೆಯದ ಹೆಣ್ಣು ಮಕ್ಕಳಿಗೂ ಇಲಾಖೆಯಿಂದ ನ್ಯಾಪಿನ್‌ ವಿತರಣೆಯಾಗಬೇಕೆನ್ನುವ ನೆಲೆಯಲ್ಲಿ ಅಂಗನವಾಡಿಗಳ ಮೂಲಕ ವಿತರಿಸಲಾಗುತ್ತಿದೆ.ಜಿಲ್ಲೆಯ 2039 ಶಾಲೆ ಮತ್ತು ಅಂಗನವಾಡಿ ವ್ಯಾಪ್ತಿಯ ಒಟ್ಟು 34,448 ಹದಿಹರೆಯದ ಹೆಣ್ಣು ಮಕ್ಕಳು ಫ‌ಲಾನುಭವಿಗಳಿದ್ದಾರೆ.

ವಿತರಣೆ ಪ್ರಕ್ರಿಯೆ ಚಾಲ್ತಿಯಲ್ಲಿ
ಈ ವರ್ಷ ಈಗಾಗಲೇ ವಿತರಣೆಗೆ ಚಾಲನೆ ದೊರಕಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ ವಿತರಣೆಯಾಗಲಿದೆ.
– ಡಾ| ರೋಹಿಣಿ
ಜಿಲ್ಲಾ  ಆರೋಗ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next