ಚಿಕ್ಕಬಳ್ಳಾಪುರ: ಹೊಸ ವರ್ಷವನ್ನು ಬರಮಾಡಿಕೊಳ್ಳಲು ಯುವಕ ಯುವತಿಯರು ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಅದೇ ರೀತಿ ನೀವು ನೂತನ ವರ್ಷವನ್ನು ಬರಮಾಡಿಕೊಳ್ಳಲು ನಂದಿ ಬೆಟ್ಟಕ್ಕೆ ಹೋಗಲಿಚ್ಛಿಸಿದ್ದರೆ ನಿಮ್ಮ ಯೋಜನೆ ಬದಲಿಸಬೇಕಾಗುತ್ತದೆ.
ಹೌದು, ನಂದಿ ಬೆಟ್ಟದಲ್ಲಿ ಹೊಸ ವರ್ಷ ಸಂಭ್ರಮಾಚಾರಣೆಯನ್ನು ನಿಷೇಧಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ನಂದಿಗಿರಿ ಧಾಮಕ್ಕೆ ನೀವು ಡಿಸೆಂಬರ್ 31ರ ಸಂಜೆ ನಾಲ್ಕು ಗಂಟೆಯಿಂದ ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1ರ ಬೆಳಿಗ್ಗೆ 8 ಗಂಟೆಯವರಗೂ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಬೆಟ್ಟದಲ್ಲಿ ಯಾವುದೇ ತರದ ಹೊಸ ವರ್ಷದ ಆಚರಣೆ ಭಾಗವಾಗಿ ಪಾರ್ಟಿ ಸೇರಿದಂತೆ ಸಂಭ್ರಮಾಚರಣೆಗೆ ಅವಕಾಶ ಇಲ್ಲ. ಡಿ.31 ಮದ್ಯರಾತ್ರಿ ಯಾವುದೇ ವಸತಿ ಗೃಹಗಳ ಬುಕ್ಕಿಂಗ್ ಇರುವುದಿಲ್ಲ. ಅಂದು ರಾತ್ರಿ ಬೆಟ್ಟದಲ್ಲಿ ತಂಗಲು ಯಾರಿಗೂ ಅವಕಾಶ ನೀಡುವುದಿಲ್ಲ. ಡಿ.31 ಸಂಜೆ ಬೆಟ್ಟದಲ್ಲಿ ಇರುವರು ಕೆಳಗೆ ಇಳಿಯಬೇಕೆಂದು ಈಗಾಗಲೇ ಸೂಚಿಸಲಾಗಿದೆ ಎಂದರು.
ಹೊಸ ವರ್ಷದ ಆಚರಣೆಗೆ 31ರ ಮದ್ಯ ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದರೆ ಕಾನೂನು ಸುವ್ಯವಸ್ಥೆ ಜೊತೆಗೆ ವಾಹನಗಳ ಹಾಗೂ ಜನದಟ್ಟಣೆ ನಿಯಂತ್ರಿಸಲು ಕಷ್ಟಸಾಧ್ಯ ಆಗಬಹುದೆಂದು ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.