ಫ್ರಾಂಕ್‌ಫರ್ಟ್ (ಜರ್ಮನಿ ): ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಮೂಲದ ಸಿಂಗಾಪುರದ ಮಹಿಳೆಯೊಬ್ಬರೊಂದಿಗೆ ಭದ್ರತಾ ಸಿಬಂದಿಗಳು ಕೀಳಾಗಿ ವರ್ತಿಸಿದ್ದು, ಮಗುವಿಗೆ ಹಾಲುಣಿಸುತ್ತಿರುವುದನ್ನು ಧೃಡೀಕರಿಸಲು ಬ್ಲೌಸ್ ಬಿಚ್ಚಿ ಸ್ತನಗಳಿಂದ ಹಾಲು ಹಿಂಡಿ ತೋರಿಸಲು ಹೇಳಿ ತೇಜೊವಧೆ ಮಾಡಿದ ಬಗ್ಗೆ ವರದಿಯಾಗಿದೆ.
ಬಿಬಿಸಿ ವರದಿಯಂತೆ ಸಿಂಗಾಪುರದಲ್ಲಿ ಟ್ರಾನ್ಸ್‌ಪೋರ್ಟ್ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿರುವ 33 ವರ್ಷ ಪ್ರಾಯದ ಗಾಯತ್ರಿ ಬೋಸ್ ಎನ್ನುವವರು ವಿಮಾನ ನಿಲ್ದಾಣದಲ್ಲಿ ತನ್ನನ್ನು ಕೀಳಾಗಿ ನಡೆಸಿಕೊಂಡ ಭದ್ರತಾ ಸಿಬಂದಿಗಳ ವಿರುದ್ದ ದೂರು ದಾಖಲಿಸಿದ್ದಾರೆ.
ಗಾಯತ್ರಿ ಬೋಸ್ ಅವರಿಗೆ 3 ವರ್ಷ ಮತ್ತು 7 ತಿಂಗಳ ಪ್ರಾಯದ ಮಕ್ಕಳಿದ್ದು, ಸಣ್ಣ ಮಗುವಿಗೆ ಈಗಲೂ ಹಾಲುಣಿಸುತ್ತಿದ್ದಾರೆ. ತನ್ನ ಪ್ಯಾರಿಸ್ ಪ್ರಯಾಣದ ವೇಳೆ ಮಗುವನ್ನು ಬಿಟ್ಟು ಹೋಗಿದ್ದು ಬ್ರೆಸ್ಟ್ ಪಂಪ್ (ಹಾಲು ಹಿಂಡುವ ಸಾಧನ) ಜೊತೆಯಲ್ಲಿ ಒಯ್ದಿದ್ದರು.
ಗಾಯತ್ರಿ ಅವರ ಭದ್ರತಾ ಪರಿಶೀಲನೆ ವೇಳೆ ಹ್ಯಾಂಡ್ ಬ್ಯಾಗ್‌ನಲ್ಲಿದ್ದ ಬ್ರೆಸ್ಟ್ ಪಂಪ್ ನೋಡಿದ ಭದ್ರತಾ ಸಿಬಂದಿ ‘ನೀನು ಮಗುವಿಗೆ ಹಾಲುಣಿಸುತ್ತಿರುವುದು ನಮಗೆ ಧೃಡಪಡಬೇಕಿದೆ? ಎಲ್ಲಿದೆ ನಿನ್ನ ಮಗು ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ. ಅಲ್ಲಿದ್ದ ಮಹಿಳಾ ಸಿಬಂದಿಗಳು ನನ್ನನ್ನು ಕೀಳು ಮಟ್ಟದಲ್ಲಿ ನಡೆಸಿಕೊಂಡಿದ್ದಾರೆ’ ಎಂದು ಗಾಯತ್ರಿ ವಿವರಿಸಿದ್ದಾರೆ.
ಬ್ಲೌಸ್ ಬಿಚ್ಚುವಂತೆ ಹೇಳಿ ಹಾಲು ಹಿಂಡಿ ತೋರಿಸಿದ ಬಳಿಕವಷ್ಟೇ ನನ್ನನ್ನು ಹೊರ ಬಿಟ್ಟಿದ್ದು, ಹೊರ ಬಂದ ಬಳಿಕ ನಾನು ಗಳಗಳನೆ ಅತ್ತು ಬಿಟ್ಟೆ. ಆ ಸಂದರ್ಭ ನಾನು ಅಸಹಾಯಕಳಾಗಿದ್ದೆ, ತೀವ್ರ ನೊಂದುಕೊಂಡೆ.ನನ್ನ ಪಾಸ್‌ಪೋರ್ಟನ್ನು ಅವರು ವಶಕ್ಕೆ ಪಡೆದಿದ್ದರು ಎಂದಿದ್ದಾರೆ.
ನೀವು ನಡೆದುಕೊಂಡಿರುವ ಕ್ರಮ ಸರಿಯಲ್ಲ ನೀವು ಏನು ಮಾಡಿದ್ದೀರೆಂದು ನಿಮಗೆ ಗೊತ್ತಿದೆಯೆ ಎಂದು ನಾನು ಪ್ರಶ್ನಿಸಿದೆ. ನನ್ನ ಪ್ರಶ್ನೆಗುತ್ತರವಾಗಿ ಆಯಿತಲ್ಲ ..ನೀನಿನ್ನು ಮುಂದುವರಿ.. ಎಂದು ಬೇಜವಾಬ್ದಾರಿ ತನದಲ್ಲಿ ಏನೂ ಆಗಿಲ್ಲ ಎನ್ನುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು ಎಂದು ಗಾಯತ್ರಿ ನೋವು ತೋಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜರ್ಮನ್ ಪೊಲೀಸರು ಭದ್ರತಾ ದೃಷ್ಟಿಯಿಂದ ಪರಿಶೀಲನೆ ನಡೆಸುವುದು ಅಗತ್ಯ ಆದರೆ ಈ ರೀತಿ ಪರಿಶೀಲನೆ ನಡೆಸುವ ವಾಡಿಕೆ ಇಲ್ಲ ಎಂದಿದ್ದಾರೆ.