Advertisement
ಯಾರಿಗೆಲ್ಲ ಈ ಸಮಸ್ಯೆ?ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರು ಸಮಯ ಮೀರಬಾರದು ಎಂಬ ಕಾರಣಕ್ಕಾಗಿ ಸ್ವಲ್ಪ ಬೇಗನೆ ಮನೆಯಿಂದ ಹೊರಟು ಕೆಂಜಾರಿಗೆ ಬರುತ್ತಾರೆ. ಕೆಲವೊಮ್ಮೆ ಒಂದು ಗಂಟೆ ಮೊದಲೇ ತಲುಪುತ್ತಾರೆ. ಹಾಗೆ ಕಾರಿನಲ್ಲಿ ಬಂದವರು ನೇರವಾಗಿ ವಿಮಾನ ನಿಲ್ದಾಣಕ್ಕೆ ಹೋದರೆ ಅಲ್ಲಿ ಕುಳಿತು ಮಾತನಾಡಲೂ ಅವಕಾಶ ಸಿಗುವುದಿಲ್ಲ. ಜತೆಗೆ ದುಬಾರಿ ಪಾರ್ಕಿಂಗ್ ಶುಲ್ಕವನ್ನೂ ಕೊಡಬೇಕು ಎಂಬ ಕಾರಣಕ್ಕಾಗಿ ಆಗಮನ-ನಿರ್ಗಮನ ದ್ವಾರದ ಬಳಿ ಕಾರು ನಿಲ್ಲಿಸಿ ವಿರಮಿಸುತ್ತಾರೆ. ಇದೇ ವೇಳೆ, ವಿಮಾನದಲ್ಲಿ ಬರುವ ಪ್ರಯಾಣಿಕರನ್ನು ಕರೆದೊಯ್ಯಲು ಬರುವ ವಾಹನಿಗರೂ ಇದೇ ಜಾಗದಲ್ಲಿ ಕಾದು ವಿಮಾನ ಬಂದಾಗ ನಿಲ್ದಾಣಕ್ಕೆ ಹೋಗಿ ಕರೆದುಕೊಂಡು ಬರುತ್ತಾರೆ. ಇಂಥ ನೂರಾರು ವಾಹನಗಳು ಇಲ್ಲಿ ಕಾಯುತ್ತಿರುತ್ತವೆ. ಅವರಿಗೆಲ್ಲ ಶೌಚಾಲಯ ಸೇರಿದಂತೆ ಮೂಲಭೂತ ಸಮಸ್ಯೆಗಳು ಕಾಡುತ್ತಿವೆ. ಕೆಲವೊಮ್ಮೆ ಮಹಿಳೆಯರೂ ಬಯಲು ಶೌಚಾಲಯ ಬಳಸುವ ಪ್ರಮೇಯ ಎದುರಾಗುತ್ತದೆ.
ಈ ಹಿಂದೆ ಕೆಂಜಾರಿನ ಅಟಲ್‌ಜೀ ರಿಕ್ಷಾ ಪಾರ್ಕ್ ಬಳಿ ಆಗಮನ ದ್ವಾರದ ಬಳಿ ಸಾರ್ವಜನಿಕ ಶೌಚಾಲಯವಿತ್ತು. ರಾಜ್ಯ ಹೆದ್ದಾರಿ ಕಾಮಗಾರಿಯ ವೇಳೆ ಅದನ್ನು ಕೆಡವಿ ನೆಲಸಮಗೊಳಿಸಲಾಗಿದೆ. ಈಗ ಅದರ ಕಾಂಕ್ರೀಟ್ ಛಾವಣಿ ಮಾತ್ರ ಉಳಿದಿದೆ. ದ್ವಾರದ ಬಳಿ ಶೌಚಾಲಯ ಬೇಕು
ಇಲ್ಲಿನ ರಿಕ್ಷಾ ಪಾರ್ಕ್ ನಲ್ಲಿ ರಿಕ್ಷಾ ಇಟ್ಟು ಕಾಯುವವರು, ಕಾರಿನಲ್ಲಿ ಬಂದು ಕಾಯುವ ನೂರಾರು ಮಂದಿಯ ಪ್ರಮುಖ ಬೇಡಿಕೆಯೆಂದರೆ ಶೌಚಾಲಯ ಬೇಕು ಎನ್ನುವುದು.
Related Articles
Advertisement
ಈ ಹಿಂದೆ ಇದ್ದ ಶೌಚಾಲಯ ಕೆಡವಲಾಗಿದ್ದು, ಈಗ ಗೋಡೆ ಮಾತ್ರ ಉಳಿದಿದೆ.ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರನ್ನು ಕರೆದೊಯ್ಯಲು ಬರುವ ಖಾಸಗಿ ಮತ್ತು ಬಾಡಿಗೆ ಕಾರುಗಳು ಕೂಡಾ ವಿಮಾನ ನಿಲ್ದಾಣದ ಕೆಳಗಡೆ ಕೆಂಜಾರಿನಲ್ಲಿ ಸಾಲಾಗಿ ನಿಲ್ಲುತ್ತವೆ. ಇದಕ್ಕೆ ಮುಖ್ಯ ಕಾರಣ, ವಿಮಾನ ನಿಲ್ದಾಣದ ದುಬಾರಿ ಪಾರ್ಕಿಂಗ್ ಶುಲ್ಕ. ವಿಮಾನ ನಿಲ್ದಾಣಕ್ಕೆ ದ್ವಿಚಕ್ರ ವಾಹನದಲ್ಲಿ ಹೋದರೆ ಮೊದಲ 30 ನಿಮಿಷಕ್ಕೆ 20 ರೂ. ಕೊಡಬೇಕು, ಬಳಿಕ ಎರಡು ಗಂಟೆವರೆಗೆ 40 ರೂ. ಶುಲ್ಕ ವಿಧಿಸಲಾಗುತ್ತದೆ. ಕಾರುಗಳಿಗೆ 30 ನಿಮಿಷಕ್ಕೇ 100 ರೂ. ವಸೂಲಿ ಮಾಡಲಾಗುತ್ತದೆ, ಬಳಿಕ ಅದು 150 ರೂ.ಗೆ ಜಿಗಿಯುತ್ತದೆ. ಈಗೀಗ ವಿಮಾನಗಳ ಆಗಮನ ಸಮಯ ವ್ಯತ್ಯಯವಾಗುತ್ತಿದೆ. ಹೀಗಾಗಿ ಮೊದಲೇ ಹೋಗಿ ವಿಮಾನ ನಿಲ್ದಾಣದಲ್ಲಿ ಕಾಯುವುದು ವಾಹನ ಚಾಲಕರಿಗೆ ದುಬಾರಿಯಾಗುತ್ತಿದೆ. ಹೀಗಾಗಿ ಅವರು ನಿಲ್ದಾಣದಲ್ಲಿ ಕಾಯುವ ಬದಲು ಕೆಂಜಾರು ಗೇಟಿನಲ್ಲೇ ಕಾಯುತ್ತಾರೆ. ವಿಮಾನ ಬಂದು ಪ್ರಯಾಣಿಕರು ಹೊರಬಂದು ಫೋನ್ ಮಾಡಿದ ಮೇಲೆಯೇ ನಿಲ್ದಾಣಕ್ಕೆ ಹೋಗಿ ಕರೆದುಕೊಂಡು ಬರುತ್ತಾರೆ. ಹೀಗೆ ಕಾಯುವ ವೇಳೆ ಅವರಿಗೆ ಶೌಚಾಲಯವೂ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಕಾಡುತ್ತದೆ. ಸಂಜೆಯ ಹೊತ್ತಿಗೆ ಸುಮಾರು 50ರಿಂದ 100 ಕಾರುಗಳು ಇಲ್ಲಿ ನಿಲ್ಲುತ್ತದೆ. ರಿಕ್ಷಾ ಚಾಲಕರಿಗೆ ಭಾರೀ ಸಮಸ್ಯೆ
ಎಲ್ಲೆಡೆ ರಿಕ್ಷಾ ಪಾರ್ಕ್ ಇದೆ. ಅದರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಿಕ್ಷಾ ಪಾರ್ಕ್ ಇಲ್ಲ! ಈಗೀಗ ವಿಮಾನ ಸಂಚಾರ ಹೆಚ್ಚಾಗಿರುವುದರಿಂದ ಪ್ರತಿ ಬಾರಿಯೂ ದುಬಾರಿ ಕಾರುಗಳಿಗೆ ಹೋಗುವ ಬದಲು ಹೆಚ್ಚಿನವರು ರಿಕ್ಷಾವನ್ನು ಬಯಸುತ್ತಿದ್ದಾರೆ. ಆದರೆ, ಅಲ್ಲಿ ಅವರಿಗೆ ರಿಕ್ಷಾ ಸಿಗುವುದಿಲ್ಲ. ಅವರು ಯಾವುದಾದರೂ ರಿಕ್ಷಾಕ್ಕೆ ಕರೆ ಮಾಡಿದರೆ ಅವರು ಕೆಂಜಾರಿನ ಆಗಮನ ನಿರ್ಗಮನ ದ್ವಾರದಿಂದಲೇ ಹೋಗಿ ಕರೆದುಕೊಂಡು ಬರಬೇಕು. ಇಲ್ಲಿ ಒಂದು ನಿಯಮವಿದೆ. ಒಮ್ಮೆ ನಿಲ್ದಾಣ ಪ್ರವೇಶಿಸಿದ ಅಟೋ ರಿಕ್ಷಾ ಹತ್ತೇ ನಿಮಿಷದಲ್ಲಿ ಗೇಟ್‌ನಿಂದ ಹೊರಗೆ ಬರಬೇಕು. ಇಲ್ಲದಿದ್ದಲ್ಲಿ 100 ರೂ. ಶುಲ್ಕ ಪಾವತಿಸಬೇಕು. ನಿಜವೆಂದರೆ, ಕೆಂಜಾರಿನಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರನ್ನು ಕರೆದೊಯ್ಯುವ ರಿಕ್ಷಾದವರು 50 ರೂ. ಚಾರ್ಜ್ ಮಾಡುತ್ತಾರೆ. ಎಲ್ಲವೂ ಸರಿಯಾಗಿದ್ದರೆ ಸಮಸ್ಯೆ ಇಲ್ಲ. ಒಂದು ವೇಳೆ ವಾಹನಗಳ ಒತ್ತಡದಿಂದ ವಿಮಾನ ನಿಲ್ದಾಣದ ಕ್ಯೂನಲ್ಲಿ ಸಿಕ್ಕಿ ಹಾಕಿಕೊಂಡರೆ ಅವರೇ 100 ರೂ. ಪಾವತಿ ಮಾಡಬೇಕಾಗುತ್ತದೆ. ಅಂದರೆ ಬಾಡಿಗೆಗಿಂತಲೂ ಹೆಚ್ಚು ಹಣ ನೀಡಬೇಕು ಎನ್ನುತ್ತಾರೆ ಇಲ್ಲಿನ ರಿಕ್ಷಾ ಚಾಲಕರು. -ಸುಬ್ರಾಯ ನಾಯಕ್ ಎಕ್ಕಾರು