Advertisement

ಮಳೆ ಅವಾಂತರ: ಪರಣೆ- ಬಂಬಿಲ ಬೈಲು ಸಂಪರ್ಕ ಕಡಿತ

02:15 AM Jun 20, 2018 | Team Udayavani |

ಸವಣೂರು: ಮತ್ತೆ ಮಳೆ ಸುರಿಯುತ್ತಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರ ಆತಂಕ ಇಮ್ಮಡಿಯಾಗಿದೆ. ಹಲವೆಡೆ ಅಸಮರ್ಪಕ ಚರಂಡಿಯಿಂದಾಗಿ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಕಳೆದ 10 ದಿನಗಳ ಅಂತರದಲ್ಲಿ 3ನೇ ಬಾರಿಗೆ ಪಾಲ್ತಾಡಿ ಗ್ರಾಮದ ಪರಣೆಯಿಂದ ಮೀನಕೊಳೆಂಜಿ, ಜಾರಿಗೆತ್ತಡಿ, ಚಾಕೋಟೆತ್ತಡಿ ಸಹಿತ ಬಂಬಿಲಬೈಲು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಆ ಭಾಗದ ಜನತೆಯ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆಯ ಸಮಸ್ಯೆಯ ಕುರಿತು ಈ ಹಿಂದೆ ಹಲವು ಬಾರಿ ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಿಸಿ ಸಂಬಂಧಿಸಿದವರನ್ನು ಎಚ್ಚರಿಸಲಾಗಿತ್ತು. ಆದರೆ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಯಾರೂ ಪ್ರಯತ್ನಿಸಿಲ್ಲ ಹಾಗೂ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

ಎ.ಸಿ.ಗೆ ಮನವಿ
ಈ ರಸ್ತೆಯ ಅವ್ಯವಸ್ಥೆ ಕುರಿತು ಎಲ್ಲ ಜನಪ್ರತಿನಿಧಿಗಳಿಗೂ ತಿಳಿದಿದೆ. ಆದರೂ ಕನಿಷ್ಠ ಪಕ್ಷ ಬೇಟಿ ನೀಡುವ ಸೌಜನ್ಯವನ್ನೂ ತೋರಿಸಿಲ್ಲ.ಈ ಕುರಿತು ಪುತ್ತೂರು ಉಪ ವಿಭಾಗದ ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೂ ಸಮಸ್ಯೆ ಪರಿಹರಿಸುವಂತೆ ದೂರವಾಣಿ ಮೂಲಕ ಕೇಳಿಕೊಳ್ಳಲಾಗಿದೆ. ಈ ಕುರಿತು ಸಂಬಂಧಪಟ್ಟವರಿಗೆ ಅಗತ್ಯ ಕ್ರಮಕ್ಕಾಗಿ ನಿರ್ದೇಶನ ನೀಡುವು ದಾಗಿ ತಿಳಿಸಿದ್ದಾರೆ ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದ್ದಾರೆ.

ಈ ರಸ್ತೆಯ ಮೂಲಕ 50ಕ್ಕೂ ಅಧಿಕ ಕುಟುಂಬಗಳಿಗೆ ಸಂಪರ್ಕವಿದ್ದು, ಮನೆ ತಲುಪಲು ಹರಸಾಹಸ ಪಡಬೇಕಾದ ಸ್ಥಿತಿ. ಈ ರಸ್ತೆಯನ್ನು ದಾಟಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳುತ್ತಿದ್ದು, ಸಣ್ಣ ಮಕ್ಕಳನ್ನು ಹೆತ್ತವರು ಭಯದಲ್ಲೇ ಕಳುಹಿಸಬೇಕಾದ ಸ್ಥಿತಿ ಇದೆ. ವಿಪರೀತ ಮಳೆಯಿಂದಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಬಿಡಿ ನಡೆದುಕೊಂಡಲೂ ಹೋಗದಂತಹ ಸ್ಥಿತಿ ಇದೆ. ಕೂಡಲೇ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಆಡಳಿತ ವರ್ಗ ಗಮನ ಹರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next