Advertisement

Ullal ಬೀಚ್‌ ಸುಂದರ, ಆದರೆ ಅವ್ಯವಸ್ಥೆಗಳ ಆಗರ!

01:09 PM Dec 17, 2024 | Team Udayavani |

ಉಳ್ಳಾಲ: ಹಲವು ಧಾರ್ಮಿಕ ಕ್ಷೇತ್ರಗಳನ್ನು ಒಡಲಲ್ಲಿ ಹೊತ್ತಿರುವ ಉಳ್ಳಾಲ ಬೀಚ್‌ ಪ್ರವಾಸೋದ್ಯಮಕ್ಕೂ ಪ್ರಸಿದ್ಧಿ ಪಡೆದಿದೆ. ಉಳ್ಳಾಲ ದರ್ಗಾ, ಅಬ್ಬಕ್ಕನ ಬಸದಿ, ಸೋಮನಾಥೇಶ್ವರ ದೇವಸ್ಥಾನಗಳನ್ನು ಹೊಂದಿದೆ. ಧಾರ್ಮಿಕ ನೆಲೆಯಲ್ಲಿ ಇಲ್ಲಿಗೆ ಬರುವ ಲಕ್ಷಾಂತರ ಭಕ್ತರಿಗೆ ಉಳ್ಳಾಲ ಬೀಚ್‌ ಒಂದು ಆಕರ್ಷಣೆಯ ಕೇಂದ್ರಬಿಂದು. ಈ ರೀತಿ ಧಾರ್ಮಿಕ ಮತ್ತು ಬೀಚ್‌ ಪ್ರವಾಸೋದ್ಯಮದ ಅವಳಿ ಅವಕಾಶಗಳಿರುವ ಕೆಲವೇ ಕೆಲವು ಕಡಲ ತೀರಗಳಲ್ಲಿ ಉಳ್ಳಾಲವೂ ಒಂದು.

Advertisement

ಆದರೆ, ದುರಂತವೆಂದರೆ, ಈ ಬೀಚ್‌ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿ ಮೂಲಸೌಕರ್ಯಗಳಿಲ್ಲ, ಸ್ವತ್ಛತೆಯಂತೂ ಇಲ್ಲವೇ ಇಲ್ಲ. ಮೂವತ್ತು ವರ್ಷಗಳ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಪ್ರವಾಸೋದ್ಯಮ ಇಲಾಖೆಯಂತೂ ಸಂಪೂರ್ಣವಾಗಿ ಕಡೆಗಣಿಸಿದೆ. ಪ್ರವಾಸೋದ್ಯಮಕ್ಕೆ ವಿಫ‌ುಲ ಅವಕಾಶಗಳಿದ್ದರೂ ಕೈಕಟ್ಟಿ ಕುಳಿತಿದೆ.

ಉಳ್ಳಾಲಕ್ಕೆ ರಾಜ್ಯ, ದೇಶದ ನಾನಾ ಭಾಗಗಳಿಂದ ಜನರು ಬರುತ್ತಾರೆ. ಅವರಲ್ಲಿ ಭಕ್ತರು ಇದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜು, ವಿಶ್ವವಿದ್ಯಾನಿಲಯಕ್ಕೆ ಬರುವವರೂ ಇದ್ದಾರೆ. ಆಸ್ಪತ್ರೆಗಳಿಗೆ ಬರುವವರಿದ್ದಾರೆ. ಹಲವಾರು ಸಾಫ್ಟ್ವೇರ್‌ ಕಂಪನಿಗಳ ಉದ್ಯೋಗಿಗಳೂ ಬರುತ್ತಾರೆ. ಉಳ್ಳಾಲ ಮೊಗವೀರಪಟ್ಣ ಬಳಿ ಇರುವ ಉಳ್ಳಾಲ ಬೀಚ್‌ ಗೆ ಬರುವ ಇವರಿಗೆ ಅಲ್ಲಿ ಕೊನೆಗೆ ನಿರಾಸೆಯೇ ಕಾಡುತ್ತದೆ. ಯಾಕೆಂದರೆ, ಇಲ್ಲಿ ಸಮುದ್ರವೊಂದೇ ಸುಂದರ. ಉಳಿದಂತೆ ಎಲ್ಲವೂ ಸಮಸ್ಯೆಗಳ ಆಗರ!

ಇಲ್ಲಿಗೆ ಉತ್ತಮ ರಸ್ತೆ ಸಂಪರ್ಕವಿದೆ. ಆದರೆ, ಅದನ್ನು ನಂಬಿ ಬೀಚ್‌ಗೆ ಬಂದರೆ ನಿರ್ವಹಣೆ ಕೊರತೆಯಿಂದ ಯಾಕಪ್ಪಾ ಬಂದೆವೋ ಎನ್ನುವ ಭಾವವೊಂದು ಮೂಡುತ್ತದೆ. ಈ ಬೀಚ್‌ ಅಪಾಯಕಾರಿ ಎಂಬ ಹಣೆಪಟ್ಟಿ ಹಿಂದೆ ಇತ್ತು. ಆದರೆ, ಅದನ್ನು ಕಳಚುವ ಪ್ರಯತ್ನವಾಗಲೀ, ಎಚ್ಚರಿಕೆ ಫ‌ಲಕಗಳಾಗಲೀ ಇಲ್ಲಿ ಕಾಣುವುದಿಲ್ಲ.

ತುರ್ತು ಆಗಬೇಕಾದದ್ದು ಏನು?
-ಪಣಂಬೂರು ಸೇರಿದಂತೆ ಉಳಿದ ಬೀಚ್‌ಗಳ ಬಗ್ಗೆ ತೋರುವ ಆಸಕ್ತಿಯ ಒಂದು ಭಾಗವಾದರೂ ಇಲ್ಲಿ ತೋರಿಸಬೇಕು.
-ಸಾವಿರಾರು ಜನರು ಬರುವ ಬೀಚ್‌ಗೆ ಮೂಲ ಸೌಕರ್ಯ ಒದಗಿಸಬೇಕು. ಹಳೆಯ ವ್ಯವಸ್ಥೆಗೇ ಜೋತು ಬೀಳಬಾರದು.
-ಇಲ್ಲಿನ ಅಪಾಯದ ಅರಿವು ಮೂಡಿಸಬೇಕು, ಜೀವರಕ್ಷಕರ ನೇಮಕ ಮಾಡಬೇಕು.
-ಸ್ವತ್ಛತೆ, ಪಾರ್ಕಿಂಗ್‌ ವ್ಯವಸ್ಥೆಗೆ ಆದ್ಯತೆ ನೀಡಬೇಕು. ಅಂಗಡಿಗಳ ಏಲಂ ಪ್ರಕ್ರಿಯೆ ನಡೆಸಿದರೆ ಲಾಭ ಸಿಗಬಹುದು.
-ಶೌಚಾಲಯ, ಸಮುದ್ರ ಸ್ನಾನದ ಬಳಿಕ ಬಟ್ಟೆ ಬದಲಾಯಿಸಲು ವ್ಯವಸ್ಥೆಗಳು ಬೇಕಾಗಿವೆ.
-ಉಳಿದ ಬೀಚ್‌ಗಳಲ್ಲಿ ಇರುವಂತೆ ಸಾಹಸ ಕ್ರೀಡೆಗಳಿಗೆ ಇಲ್ಲಿಯೂ ಅವಕಾಶ ಒದಗಿಸಬೇಕು.
-ಪ್ರವಾಸೋದ್ಯಮ ಇಲಾಖೆ ಮತ್ತು ಉಳ್ಳಾಲ ನಗರಸಭೆ ಜಂಟಿಯಾಗಿ ಯೋಜನೆ ಹಾಕಿಕೊಳ್ಳಬೇಕು.

Advertisement

ಬೇಕಾ ಬಿಟ್ಟಿ ಅಂಗಡಿಗಳು
ಪ್ರವೇಶ ದ್ವಾರದಲ್ಲೇ 20ಕ್ಕೂ ಅಧಿಕ ಅಂಗಡಿಗಳು ತುಂಬಿಕೊಂಡಿವೆ. ಇವೆಲ್ಲವೂ ಅನಧಿಕೃತ ಮತ್ತು ಸ್ವಚ್ಛತೆಯನ್ನು ಪಾಲಿಸಲಾಗುತ್ತಿಲ್ಲ. ಈ ಅಂಗಡಿಗಳಲ್ಲಿ ಸ್ಥಳೀಯರದ್ದು ಕಡಿಮೆ. ಹೊರಗಿನಿಂದ ಬಂದವರು ಬೇಕಾಬಿಟ್ಟಿ ಅಂಗಡಿ ನಡೆಸುತ್ತಿದ್ದಾರೆ. ಉಳ್ಳಾಲ ನಗರಸಬೆ ಸಿಬಂದಿ ಸ್ವತ್ಛ ಮಾಡುವ ಸ್ಥಿತಿ ಇಲ್ಲಿಯದು.

ಶೌಚಾಲಯ ವ್ಯವಸ್ಥೆ ಶೋಚನೀಯ
ಬೀಚ್‌ನಲ್ಲಿ ಸರಿಯಾದ ಶೌಚಾಲಯ ಇಲ್ಲದೆ ದಶಕಗಳೇ ಕಳೆದಿದೆ. ಮೂರು ದಶಕಗಳ ಹಿಂದೆ ನಿರ್ಮಾಣವಾಗಿದ್ದ ಶೌಚಾಲಯ ಸಂಪೂರ್ಣ ಹಾಳಾಗಿದೆ. ಇಲ್ಲಿ ಹೊಸ ಶೌಚಾಲಯ ಕಟ್ಟುವ ಬದಲು ಹಳೆಯದನ್ನೇ ದುರಸ್ತಿ ಮಾಡುವ ಪ್ರಯತ್ನ ನಡೆಯುತ್ತಿದೆ.

ಶೌಚಾಲಯದ ಬದಿಯಲ್ಲೇ ತ್ಯಾಜ್ಯ ವಿಲೇವಾರಿ ನಡೆಯುವುದರಿಂದ ದುರ್ವಾಸನೆಯೋ ದುರ್ವಾಸನೆ.

ಜೀವರಕ್ಷಕರು ಅಗತ್ಯ ಬೇಕು
ಉಳ್ಳಾಲ ಸಮುದ್ರ ತೀರದ ಸನಿಹದಲ್ಲೇ ಆಳ ಇರುವ ಕಾರಣಕ್ಕೆ ಅಪಾಯಕಾರಿ ಎಂಬ ಹಣೆಪಟ್ಟಿ ಇದೆ. ಆದರೆ, ಇದರ ಬಗ್ಗೆ ಮಾಹಿತಿ ಕೊಡುವವರು ಯಾರೂ ಇಲ್ಲ. ಹಲವಾರು ಮಂದಿ ಇಲ್ಲಿನ ವಾಸ್ತವ ಸ್ಥಿತಿ ತಿಳಿಯದೆ ನೀರುಪಾಲಾಗಿದ್ದಾರೆ. ನೂರಾರು ಜನರನ್ನು ಇಲ್ಲಿನ ಮೀನುಗಾರರು ಮತ್ತು ಜೀವ ರಕ್ಷಕ ಸಂಘದ ಸದಸ್ಯರು ರಕ್ಷಿಸಿದ್ದಾರೆ. ಅವರಿಲ್ಲದೆ ಹೋದರೆ ಇಲ್ಲಿ ರಕ್ಷಣೆಗೆ ಯಾರೂ ಇಲ್ಲ. ಇಲ್ಲಿ ಅಪಾಯದ ಮುನ್ಸೂಚನೆ ನೀಡುವ ವ್ಯವಸ್ಥೆ, ದುರಂತ ನಡೆದರೆ ರಕ್ಷಿಸಲು ಜೀವರಕ್ಷಕರ ಶಾಶ್ವತ ನೇಮಕ ಆಗಬೇಕಾಗಿದೆ.

ಪಾರ್ಕಿಂಗ್‌ ಜಾಗದ ಪಕ್ಕ ಕೆಸರು
ಇಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇದೆ. ಆದರೆ, ವ್ಯವಸ್ಥಿತವಾಗಿಲ್ಲ. ಮಳೆ ಬಂದರೆ ಕೆಸರಿನಲ್ಲೇ ವಾಹನ ನಿಲ್ಲಿಸಿ ಸರ್ಕಸ್‌ ಮಾಡಿ ಬೀಚ್‌ ತಲುಪುವ ಸ್ಥಿತಿ ಇಲ್ಲಿಯದು. ಕೆಲವೊಮ್ಮೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದೂ ಇದೆ.

ಪ್ರವೇಶ ದ್ವಾರದಲ್ಲೇ ದುರ್ವಾಸನೆ
ಉಳ್ಳಾಲ ಬೀಚ್‌ನ ಪ್ರವೇಶ ದ್ವಾರದಲ್ಲೇ ಕಸ ವಿಲೇವಾರಿಯ ವಾಹನಗಳು ದೊಡ್ಡ ವಾಹನಕ್ಕೆ ಕಸ ವರ್ಗಾಯಿಸುವ ಕಾರ್ಯ ಮಾಡುತ್ತಿರುತ್ತವೆ.
ಹಿಂದೆ ಇಲ್ಲಿ ರಾಶಿ ರಾಶಿ ತ್ಯಾಜ್ಯ ಹಾಕಲಾಗುತ್ತಿತ್ತು. ಹಲವು ಹೋರಾಟಗಳ ಬಳಿಕ ಅದು ಕಡಿಮೆಯಾಗಿದೆ. ಆದರೆ ತ್ಯಾಜ್ಯ ವರ್ಗಾವಣೆ ನಿಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಲ್ಲಿ ಬರುವ ಪ್ರವಾಸಿಗರು ದುರ್ನಾತವನ್ನು ದಾಟಿಕೊಂಡೇ ಮುಂದೆ ಹೋಗಬೇಕು.

ಮೂಲಸೌಕರ್ಯ ಬೇಕು
ಪಣಂಬೂರು ಮಾದರಿಯಲ್ಲಿ ಬೀಚ್‌ ಅಭಿವೃದ್ಧಿಯಾಗಬೇಕು. ಪ್ರವಾಸಿಗರ ರಕ್ಷಣೆಗೆ ಜೀವರಕ್ಷಕರ ನಿಯೋಜನೆಗೆ ಸಂಬಂಧಪಟ್ಟ ಇಲಾಖೆ ಮತ್ತು ನಗರಸಭೆ ಗಮನ ನೀಡಬೇಕು.ಮೂಲಸೌಕರ್ಯ ನೀಡಿದರೆ ಬೀಚ್‌ ಪ್ರವಾಸೋದ್ಯಮ ಇಲ್ಲಿ ಬೆಳೆಯಲು ಸಾಧ್ಯ.
-ಯಶವಂತ ಎ. ಅಮೀನ್‌, ಮೊಗವೀರ ಮುಖಂಡರು

ಉರೂಸ್‌ಗೆ ಮುನ್ನ ಅಭಿವೃದ್ಧಿ
ಬೇರೆ ಪ್ರದೇಶಗಳಿಂದ ಬರುವ ಪ್ರವಾಸಿಗರಿಗೆ ಇಲ್ಲಿನ ಮಾಹಿತಿಯನ್ನು ನೀಡುವ ಕಾರ್ಯ ಆಗಬೇಕು, ಸದ್ಯದಲ್ಲೇ ಇತಿಹಾಸ ಪ್ರಸಿದ್ಧ ಉಳ್ಳಾಲ ಉರೂಸ್‌ ಪ್ರಾರಂಭಕ್ಕೆ ಮೊದಲು ಇಲ್ಲಿನ ಬೀಚ್‌ನ ಮೂಲಸೌಕರ್ಯ ಅಭಿವೃದ್ಧಿಯಾಗಬೇಕು.
-ಇಬ್ರಾಹಿಂ, ಸ್ಥಳೀಯ ನಿವಾಸಿ

ವಸಂತ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next