Advertisement

ರಾಜ್ಯದ ಮೂರು ರಾಜಕೀಯ ಪಕ್ಷಗಳಲ್ಲಿ ವಲಸೆ ಮಾತಿನ ಸಮರ

01:30 AM Jan 27, 2022 | Team Udayavani |

ಬೆಂಗಳೂರು: ರಾಜ್ಯದ ಮೂರು ರಾಜಕೀಯ ಪಕ್ಷಗಳಲ್ಲಿ ವಲಸೆ ಮಾತಿನ ಸಮರ ಮುಂದುವರಿದಿದೆ. ಕಾಂಗ್ರೆಸ್‌ ನಂಬಿ ಹೋಗುವವರಿಲ್ಲ ಎಂದು ಬಿಜೆಪಿಯವರು ಹೇಳಿದರೆ, ನಮ್ಮ ಪಕ್ಷಕ್ಕೂ ಅರ್ಜಿ ಹಾಕಿದ್ದಾರೆ ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷ ತೊರೆದವರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

Advertisement

ಈ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು, ವಲಸಿಗರು ಅಧಿಕಾರ ಅನುಭವಿಸಿ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ಹೇಳಿರುವುದು ಬಿಜೆಪಿಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಸದ್ಯ ಬಿಜೆಪಿಯಲ್ಲಿ ಯಾರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸಹಿತ ಪ್ರಮುಖರು ಹೇಳಿದ್ದಾರೆ.

ಸಿದ್ದು ಹೇಳಿಕೆ ದೊಡ್ಡ ಸುಳ್ಳು
ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಮಾತ ನಾಡಿ, ಸಿದ್ದರಾಮಯ್ಯ ಹೇಳಿರುವುದು ದೊಡ್ಡ ಸುಳ್ಳು. ಯಾರು ಬರುತ್ತಾರೆ ಎನ್ನುವ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಇದರಲ್ಲಿ ಸಿದ್ದು ಹಾಗೂ ಡಿಕೆಶಿ ನಡುವಿನ ಆಂತರಿಕ ಪೈಪೋಟಿ ಇದೆ. ಡಿ.ಕೆ. ಶಿವಕುಮಾರ್‌ ಯಾರಾದರೂ ಬರುತ್ತಾರೆ ಎಂದು ಹೇಳಿದ ತತ್‌ಕ್ಷಣ ಸಿದ್ದರಾಮಯ್ಯ ಅವರೂ ಅಭದ್ರತೆಯಿಂದ ಅದೇ ಮಾತು ಹೇಳುತ್ತಾರೆ. ಅವರಿಬ್ಬರ ತಿಕ್ಕಾಟದಿಂದ ಬಹಳ ಜನ ಕಾಂಗ್ರೆಸ್‌ ಬಿಡುತ್ತಾರೆ ಹೊರತು ಯಾರೂ ಆ ಪಕ್ಷಕ್ಕೆ ಸೇರುವುದಿಲ್ಲ ಎಂದು ಹೇಳಿದ್ದಾರೆ.

ರಮೇಶ್‌ ಜಾರಕಿಹೊಳಿ ಜತೆ ಯಾರು ಸಂಪರ್ಕ ದಲ್ಲಿದ್ದಾರೆ ಅನ್ನೋದನ್ನು ಅವರಿಂದ ಕೇಳಿ ತಿಳಿದು ಕೊಳ್ಳುತ್ತೇನೆ. ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಕಾಂಗ್ರೆಸ್‌ ನಾಯಕರಂತೆ ಬೇಜವಾಬ್ದಾರಿ ಹೇಳಿಕೆ ನೀಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಸ್ಪಷ್ಟನೆ
ಸಿದ್ದರಾಮಯ್ಯನವರು ತಮ್ಮ ಹೇಳಿಕೆಗೆ ಸಮಜಾ ಯಿಷಿ ನೀಡುವ ಪ್ರಯತ್ನ ಮಾಡಿದ್ದು, ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳುತ್ತೇನೆ ಎಂದು ನಾನು ಯಾವಾಗ ಹೇಳಿದ್ದೇನೆ? ಕಾಂಗ್ರೆಸ್‌ ಸಿದ್ಧಾಂತ ಒಪ್ಪಿ ಬಂದವರಿಗೆ ಸ್ವಾಗತ ಎಂದಷ್ಟೇ ಹೇಳಿದ್ದೇನೆ. ಕಾಂಗ್ರೆಸ್‌ ಬಿಟ್ಟವರನ್ನು ಸೇರಿಸಿಕೊಳ್ಳುವುದಿಲ್ಲ. ಇದನ್ನು ವಿಧಾನಸಭೆಯಲ್ಲೇ ಹೇಳಿದ್ದೆ. ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ನಾನಾಗಿ ಯಾರ ಜತೆಗೂ ಮಾತ ನಾಡುವುದಿಲ್ಲ. ಅವರಾಗಿಯೇ ಬಂದರೆ ಮಾತ ನಾಡುತ್ತೇನೆ. ಕುಮಾರಸ್ವಾಮಿ ಬಗ್ಗೆ ನಾನು ಮಾತ ನಾಡುವುದಿಲ್ಲ ಎಂದಿದ್ದಾರೆ.

Advertisement

ಕಾಂಗ್ರೆಸ್‌ನ 16 ಶಾಸಕರು ತಮ್ಮ ಸಂಪರ್ಕದಲ್ಲಿ ದ್ದಾರೆಂಬ ರಮೇಶ್‌ ಜಾರಕಿಹೊಳಿಗೆ ಹೇಳಿಕೆಗೆ, ನಿಮಾನ್ಸ್‌ಗೆ ಸೇರುವವರ ಬಗ್ಗೆ ನಾನು ಮಾತನಾಡು ವುದಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಎಚ್‌ಡಿಕೆ ತಿರುಗೇಟು
ಮಾಜಿ ಸಿಎಂ ಎಚ್‌ಡಿಕೆ, ಎರಡೂ ರಾಜಕೀಯ ಪಕ್ಷಗಳ ನಾಯಕರಿಗೆ ತಿರುಗೇಟು ನೀಡಿದ್ದು, ಕಾಂಗ್ರೆಸ್‌, ಬಿಜೆಪಿ ಸೇರುವವರು ಯಾರ್ಯಾರಿದ್ದಾರೆ ಎಂದು ಹೇಳಲಿ. ಯಾರು ವಲಸೆ ಹೋಗಬಹುದು ಎಂಬ ಮಾಹಿತಿ ನಮಗೂ ಗೊತ್ತಿದೆ. ಅದರಿಂದ ನಮಗೇನೂ ಗಾಬರಿಯಿಲ್ಲ. ನಮ್ಮ ಪಕ್ಷಕ್ಕೂ ಕೆಲವರು ಅರ್ಜಿ ಹಾಕಿಕೊಂಡಿದ್ದಾರೆ. ನಮ್ಮ ಪಕ್ಷಕ್ಕೆ ಬರುವವರು ಸಣ್ಣ ಮುಖಂಡರು. ರಾಜೀವ್‌ ಗಾಂಧಿಯನ್ನು ತೆಗೆದವರು ಎಂದು ಹೇಳಿದ್ದ ಕಾಂಗ್ರೆಸ್‌ನವರು ಅವರ ಜತೆಯೇ ಸರಕಾರ ರಚನೆ ಮಾಡಿದ್ದಾರೆ. ಯಾರಿಗೂ ಸಿದ್ದಾಂತವಿಲ್ಲ ಎಂದು ವಾಗ್ಧಾಳಿ ನಡೆಸಿದ್ದಾರೆ.
ವಲಸೆ ವಿಚಾರದಲ್ಲಿ ವಲಸಿಗ ಸಚಿವರ ಮೇಲೆಯೇ ಹೆಚ್ಚಿನ ಅನುಮಾನ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಾವು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ತಮಗೆ ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ ಎನ್ನುವುದನ್ನು ಪುನರುಚ್ಚರಿಸಿದ್ದಾರೆ.

ಬಿಜೆಪಿ ನಾಯಕರ ವಾಗ್ಧಾಳಿ
ವಲಸೆ ವಿಚಾರವಾಗಿ ಮೂಲ ಬಿಜೆಪಿ ನಾಯಕರಾಗಿರುವ ಸಿ.ಟಿ.ರವಿ, ಕೆ.ಎಸ್‌.ಈಶ್ವರಪ್ಪ, ಕಂದಾಯ ಸಚಿವ ಆರ್‌. ಅಶೋಕ್‌, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಜವಳಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ್ದು, ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದು, ಮುಂದಿನ ಮುಖ್ಯಮಂತ್ರಿ ಯಾರು ಎಂದು ಘೋಷಣೆ ಮಾಡಿದರೆ ಕಾಂಗ್ರೆಸ್‌ನಿಂದ ಎಷ್ಟು ಜನ ಹೊರಗೆ ಹೋಗುತ್ತಾರೆ ಎನ್ನುವುದು ಗೊತ್ತಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನೇರವಾಗಿಯೇ ಇಬ್ಬರು ನಾಯಕರಿಗೆ ಟಾಂಗ್‌ ನೀಡಿದ್ದಾರೆ.

ನಮ್ಮ ಯಾವ ಸಚಿವರೂ, ಶಾಸಕರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಸೂರ್ಯ ಚಂದ್ರ ಇರೋವರೆಗೂ 17 ಜನರನ್ನು ಸೇರಿಸಿಕೊಳ್ಳಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದರು. ಅವರಿಗೆ ಸೋಲುವ ಭಯ ಕಾಡುತ್ತಿದೆ. ಹೀಗಾಗಿ ಈ ಥರದ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
-ಆರ್‌. ಅಶೋಕ್‌, ಕಂದಾಯ ಸಚಿವ.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್‌ ಇಬ್ಬರಲ್ಲಿ ಒಬ್ಬರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದರೆ, ಒಬ್ಬರು ಹೊರಗೆ ಬರುತ್ತಾರೆ. ಇವರಿಬ್ಬರ ಮೇಲಿನ ಸೇಡಿಗೆ ಪರಮೇಶ್ವರ್‌ ಹೊರಗೆ ಬರಬಹುದು.
-ಸಿ.ಟಿ. ರವಿ,
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ.

 

Advertisement

Udayavani is now on Telegram. Click here to join our channel and stay updated with the latest news.

Next