Advertisement
ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ 7 ಮೀಸಲು ಕ್ಷೇತ್ರಗಳಿದ್ದು ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಈ ಏಳೂ ಮೀಸಲು ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಆಗ ಆಡಳಿತದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಶೂನ್ಯ ಸಂಪಾದನೆ ಸಿಕ್ಕಿತ್ತು. ಮೀಸಲು ಕ್ಷೇತ್ರಗಳಲ್ಲೂ ವಿಜಯ ಪತಾಕೆ ಹಾರಿಸುವ ಮೂಲಕ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಹಾಗೂ ಕ್ಷೇತ್ರಗಳನ್ನು ಬಿಜೆಪಿ ಕಬಳಿಸಿತ್ತು.
Related Articles
ವಿಜಯಪುರ: ಹಾಲಿ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ವಿರುದ್ಧ ಕಾಂಗ್ರೆಸ್‌ನ ರಾಜು ಅಲಗೂರು ಕಣದಲ್ಲಿದ್ದಾರೆ. ಜಿಗಜಿಣಗಿ ಹ್ಯಾಟ್ರಿಕ್ ಸಾಧಿಸಿ 4ನೇ ಬಾರಿಗೆ ಸ್ಪರ್ಧೆಯಲ್ಲಿದ್ದಾರೆ. ಕಳೆದ ಸಲ ಈ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್‌ನ ಡಾ| ಸುನೀತಾ ದೇವಾನಂದ ಚೌಹಾØಣ್ ಸ್ಪರ್ಧಿಸಿದ್ದರು. ಈಗ ಚಿತ್ರಣ ಬದಲಾಗಿದ್ದು ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ. ಎಂ.ಬಿ. ಪಾಟೀಲ್ ಮತ್ತು ಶಿವಾನಂದ ಪಾಟೀಲ್ ಕ್ಷೇತ್ರದ ಸಚಿವದ್ವಯರು ಜತೆಗೆ ಬಿಜೆಪಿಯ ಫೈರ್‌ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಕ್ಷೇತ್ರದಲ್ಲಿರುವ ಪ್ರಮುಖ ನಾಯಕ.
Advertisement
ಕಲಬುರಗಿ: ಹಾಲಿ ಬಿಜೆಪಿ ಸಂಸದ ಡಾ| ಉಮೇಶ್ ಜಾಧವ್ 2ನೇ ಬಾರಿಗೆ ಕಣದಲ್ಲಿದ್ದು ಅವರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ಚುನಾವಣೆ ಎದುರಿಸುತ್ತಿದ್ದಾರೆ. ಕಳೆದ ಚುನಾವಣೆಯನ್ನು ಖರ್ಗೆ ಅವರನ್ನು ಜಾಧವ್ ಅವರು 95 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.ರಾಯಚೂರು: ಬಿಜೆಪಿ ಸಂಸದ ರಾಜ ಅಮರೇಶ್ವರ ನಾಯಕ 2ನೇ ಬಾರಿಗೆ ಕಣದಲ್ಲಿದ್ದು ಅವರ ವಿರುದ್ಧ ನಿವೃತ್ತ ಐಎಎಸ್ ಅಧಿಕಾರಿ ಕುಮಾರ ನಾಯಕ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಇಲ್ಲಿ ಮಾಜಿ ಸಂಸದ ಬಿ.ವಿ. ನಾಯಕ್ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರ ಅಸಮಾಧಾನದ ಬಿಸಿ ಬಿಜೆಪಿಗೆ ತಟ್ಟಿದೆ. ಬಳ್ಳಾರಿ: ಸೋನಿಯಾಗಾಂಧಿ ಹಾಗೂ ಸುಷ್ಮಾ ಸ್ವರಾಜ್ ನಡುವಿನ ಸ್ಪರ್ಧೆಯಿಂದ ಇಡೀ ದೇಶದ ಗಮನ ಸೆಳೆದಿದ್ದ ಬಳ್ಳಾರಿ ಕ್ಷೇತ್ರ ಮರುವಿಂಗಡಣೆ ಬಳಿಕ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. 2014ರಲ್ಲಿ ಸಂಸದರಾಗಿದ್ದ ಬಿ.ಶ್ರೀರಾಮುಲು ಈಗ ಮತ್ತೆ ಬಿಜೆಪಿ ಅಭ್ಯರ್ಥಿ. ಅವರ ವಿರುದ್ಧ ಮಾಜಿ ಸಚಿವ ಹಾಗೂ ಸಂಡೂರು ಶಾಸಕ ತುಕರಾಂ ಕಾಂಗ್ರೆಸ್ ಅಭ್ಯರ್ಥಿ. ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಮರಳಿರುವುದು ಶ್ರೀರಾಮುಲುಗೆ ಬಲಬಂದಂತೆ ಆಗಿದೆ. ಚಿತ್ರದುರ್ಗ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬದಲಿಗೆ ಈ ಸಲ ಮಾಜಿ ಸಚಿವ ಗೋವಿಂದ ಕಾರಜೋಳ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಹೊಳಲ್ಕೆರೆ ಶಾಸಕ ಚಂದ್ರಪ್ಪ ಪುತ್ರನನ್ನು ಸಮಾಧಾನಪಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಕೋಲಾರ: ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ ಕ್ಷೇತ್ರ ಕಳೆದುಕೊಂಡಿದ್ದು ಜೆಡಿಎಸ್‌ನ ಮಲ್ಲೇಶ ಬಾಬು ಮೈತ್ರಿ ಅಭ್ಯರ್ಥಿ. ಇಬ್ಬರ ಜಗಳದಿಂದ ಮೂರನೇಯವರಿಗೆ ಲಾಭ ಎಂಬಂತೆ ಗೌತಮ್ ಕಾಂಗ್ರೆಸ್ ಅಭ್ಯರ್ಥಿ. 7 ಸಲ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕೆ.ಎಚ್.ಮುನಿಯಪ್ಪ ಅಳಿಯನಿಗೆ ಟಿಕೆಟ್ ನಿರೀಕ್ಷಿಸಿದ್ದರು. ಆದರೆ ಕೊನೆಗೂ ಟಿಕೆಟ್ ಸಿಗಲಿಲ್ಲ, ಅಸಮಾಧಾನದ ಎಫೆಕ್ಟ್ ಇದ್ದೇ ಇರುತ್ತದೆ. ಚಾಮರಾಜನಗರ: ಹಾಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಬಾಲರಾಜ್ ಬಿಜೆಪಿ ಅಭ್ಯರ್ಥಿ. ಸಚಿವ ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್‌ಬೋಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಚುನಾವಣೆ. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮೀಸಲು ಕ್ಷೇತ್ರಗಳು ಯಾವುವು?
ಪರಿಶಿಷ್ಟ ಪಂಗಡ
ಬಳ್ಳಾರಿ
ರಾಯಚೂರು
ಪರಿಶಿಷ್ಟ ಜಾತಿ
ಚಾಮರಾಜನಗರ,
ಕೋಲಾರ
ಚಿತ್ರದುರ್ಗ
ವಿಜಯಪುರ
ಕಲಬುರಗಿ -ಎಂ.ಎನ್. ಗುರುಮೂರ್ತಿ