ಹೊಸದಿಲ್ಲಿ: ತಮ್ಮ ಪೋಷಕರು ಉಡುಗೊರೆ ರೂಪದಲ್ಲಿ (ಗಿಫ್ಟ್ ಡೀಡ್) ನೀಡಿದ ಆಸ್ತಿಯನ್ನು ಅನುಭವಿಸುವ ಹಕ್ಕು ಹೆತ್ತವರನ್ನು ಅವಗಣಿಸಿ, ಅವರ ಯೋಗಕ್ಷೇಮ ನೋಡಿಕೊಳ್ಳದೆ ಬಿಟ್ಟುಬಿಡುವ ಮಕ್ಕಳಿಗೆ ಇರುವುದಿಲ್ಲ. ಮಕ್ಕಳಿಂದ ಅವಗಣಿಸಲ್ಪಟ್ಟರೆ ಹೆತ್ತವರು ಆ ಗಿಫ್ಟ್ ಡೀಡ್ಗಳನ್ನು ರದ್ದುಗೊಳಿಸಬಹುದು ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ.
ಡೀಡ್ನಲ್ಲಿ ಪೋಷಕರ ಜವಾಬ್ದಾರಿಯನ್ನು ಮಕ್ಕಳು ಹೊರಬೇಕೆಂಬ ವಿಷಯ ಪ್ರಸ್ತಾವಿಸದೆ ಹಾಗೆಯೇ ಡೀಡ್ ಮಾಡಿಕೊಂಡಿದ್ದರೆ, ಅಂಥ ಡೀಡ್ಗಳನ್ನು ಹೆತ್ತವರನ್ನು ನಿರ್ಲಕ್ಷಿಸಿದ ಕಾರಣಕ್ಕೆ ರದ್ದುಗೊಳಿಸಲಾಗದು ಎಂದು ಮಧ್ಯಪ್ರದೇಶ ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು.
ಆ ತೀರ್ಪನ್ನು ಈಗ ಸುಪ್ರೀಂ ಕೋರ್ಟ್ನ ನ್ಯಾ| ಸಿ.ಟಿ. ರವಿಕುಮಾರ್ ಹಾಗೂ ನ್ಯಾ| ಸಂಜಯ್ ಕುಮಾರ್ ನೇತೃತ್ವದ ನ್ಯಾಯಪೀಠ ವಜಾಗೊಳಿಸಿದೆ. ಈ ಮೂಲಕ ಅರ್ಜಿದಾರ ಮಹಿಳೆಯ ಪುತ್ರ ಆಕೆಯ ಕೊನೆಯ ಕಾಲದವರೆಗೂ ಆಕೆಯನ್ನು ನೋಡಿಕೊಳ್ಳಬೇಕು. ಇಲ್ಲದಿದ್ದರೆ ತಾಯಿಯು ಗಿಫ್ಟ್ ಡೀಡ್ ಹಿಂಪಡೆಯಲು ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಹೆತ್ತವರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ ಅನ್ವಯ ಮಕ್ಕಳು ಹೆತ್ತವರನ್ನು ನೋಡಿಕೊಳ್ಳಲು ವಿಫಲರಾದರೆ ಹೆತ್ತವರು ಸಹಿ ಮಾಡಿದ ಗಿಫ್ಟ್ ಡೀಡ್ಗಳನ್ನು ಅನೂರ್ಜಿತಗೊಳಿಸಬಹುದು. ಕಾಯ್ದೆಯ ಸೆಕ್ಷನ್ 23ರ ಅನ್ವಯ, “ಕಾಯ್ದೆ ಜಾರಿಯಾದ ಬಳಿಕ ಮಕ್ಕಳಿಗೆ ಗಿಫ್ಟ್ ಡೀಡ್ ಅಥವಾ ಯಾವುದೇ ರೂಪದಲ್ಲಿ ಆಸ್ತಿ ವರ್ಗಾವಣೆ ಮಾಡಿದ ಹೆತ್ತವರನ್ನು ಮಕ್ಕಳು ನೋಡಿಕೊಳ್ಳಬೇಕು. ಅವರಿಗೆ ಬೇಕಾಗಿರುವ ಸೌಕರ್ಯ ಒದಗಿಸಬೇಕು.
ಅದರಲ್ಲಿ ವಿಫಲವಾದರೆ ಆಸ್ತಿಯನ್ನು ಬಲವಂತವಾಗಿ, ವಂಚನೆಯಿಂದ ಬರೆಯಿಸಿಕೊಳ್ಳಲಾಗಿದೆ ಎಂದು ಪರಿಗಣಿಸಲಾಗುತ್ತದೆ’ ಎಂದೂ ನ್ಯಾಯಪೀಠ ಹೇಳಿದೆ.
ಒಂಟಿಯಾಗಿರುವ ಹಿರಿಯ ನಾಗರಿಕರಿಗೆ, ಮಕ್ಕಳಿಂದ ಕಡೆಗಣಿಸಲ್ಪಟ್ಟ ಹೆತ್ತವರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಈ ಕಾಯ್ದೆಯನ್ನು ತರಲಾಗಿದೆ. ಅದರ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅಲ್ಲ, ಉದಾರವಾಗಿ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿದೆ.