Advertisement

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

06:33 PM Dec 25, 2024 | Team Udayavani |

ಬೆಂಗಳೂರು: ರಾಜರಾಜೇಶ್ವರಿ ನಗರ (R.R.Nagara) ಬಿಜೆಪಿ ಶಾಸಕ ಮುನಿರತ್ನ ಮೇಲೆ ನಗರದ ನಂದಿನಿ ಲೇಔಟ್​​ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಮೊಟ್ಟೆ ಎಸೆದಿದ್ದಾರೆ.

Advertisement

ಲಕ್ಷ್ಮೀದೇವಿ ನಗರ ವಾರ್ಡ್​ನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ, ಕಂಠೀರವ ಸ್ಟುಡಿಯೋ ಬಳಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮೇಲೆ ಮೊಟ್ಟೆ ಎಸೆದು ಹಲ್ಲೆ ಮುಂದಾಗಿದ್ದಾರೆ ಹಾಗೂ ಕಾರಿನ ಮೇಲೂ ಮೊಟ್ಟೆ ಎಸೆದಿದ್ದಾರೆ ಬಿಜೆಪಿ ಶಾಸಕ ಮುನಿರತ್ನ ಆರೋಪಿಸಿದ್ದಾರೆ. ಸ್ಥಳಕ್ಕೆ ನಂದಿನಿ ಲೇಔಟ್ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಂತರ ರಸ್ತೆಯಲ್ಲೇ ಕುಳಿತು ಶಾಸಕ ಮುನಿರತ್ನ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಈತನ್ಮಧ್ಯೆ, ಮುನಿರತ್ನ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಕೂಡ ಆರೋಪ ಮಾಡಿದ್ದಾರೆ. ಸ್ಥಳದಿಂದ ಬಿಜೆಪಿ ಶಾಸಕ ಮುನಿರತ್ನ ತೆರಳಿದ ಬಳಿಕ ಕಾಂಗ್ರೆಸ್​ ಕಾರ್ಯಕರ್ತರು, ಮುನಿರತ್ನ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು, 2-3 ಕಾರುಗಳು ಜಖಂಗೊಂಡಿವೆ. ಹಲವರು ಗಾಯಗೊಂಡಿದ್ದಾರೆ.

ನನ್ನ ಕೊಲೆಗೆ ಡಿಕೆಶಿ, ಸುರೇಶ್ ಯತ್ನ, ಕೊಲೆ ಬೆದರಿಕೆ ಇದ್ದರೂ ಗನ್ ಮ್ಯಾನ್ ನೀಡಿಲ್ಲ:
ಈ ಘಟನೆಗೆ ಕಾಂಗ್ರೆಸ್ ಮುಖಂಡರಾದ ಕುಸುಮಾ ಹಾಗೂ ಹನುಮಂತರಾಯಪ್ಪ ಕಾರಣ ಎಂದು ಆರೋಪಿಸಿರುವ ಮುನಿರತ್ನ, ನನ್ನನ್ನು ಕೊಲೆ ಮಾಡಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದು ನನ್ನನ್ನು ಕೊಲ್ಲುವ ಪ್ರಯತ್ನವಾಗಿದೆ. ನನ್ನನ್ನು ಮುಗಿಸಲು ಸುಮಾರು 150 ಜನರ ಕರೆಸಿದ್ದಾರೆ. ನನ್ನ ಬೆಂಬಲಿಗರು ಮತ್ತು ಪೊಲೀಸರು ಇಲ್ಲದಿದ್ದರೆ ನನ್ನ ಹತ್ಯೆ ಮಾಡುತ್ತಿದ್ದರು, ಕೊಲೆ ಬೆದರಿಕೆ ಹಿನ್ನೆಲೆ ಗನ್​ಮ್ಯಾನ್​ ಕೇಳಿದ್ದೆ, ಆದರೂ ಕೊಡಲಿಲ್ಲ ಎಂದು ಮುನಿರತ್ನ ಆರೋಪಿಸಿದ್ದಾರೆ. ಕೊಲೆಗೆ ಯತ್ನ ನಡೆಯುತ್ತದೆ ಎಂದು ಪೊಲೀಸರು ನನಗೆ ಹೇಳಿದ್ದರು. ಅದಾದ ತಕ್ಷಣವೇ ಈ ಘಟನೆ ಸಂಭವಿಸಿದೆ.  ಬೆದರಿಕೆ ಬಗ್ಗೆ ಪೊಲೀಸರು, ರಾಜ್ಯಪಾಲರು, ಪ್ರಧಾನಿ ಕಚೇರಿಗೆ ಪತ್ರದ ಮೂಲಕ ದೂರು ನೀಡಿದ್ದೇನೆ ಎಂದು ತಿಳಿಸಿದರು.

ಮುನಿರತ್ನ ನಾಯ್ಡು ವ್ಯಕ್ತಿತ್ವ ಏನು ಎಂಬುದು ಗೊತ್ತಿದೆ: ಡಿ.ಕೆ.ಸುರೇಶ್ ತಿರುಗೇಟು
ಮೊಟ್ಟೆ ಎಸೆತ ಪ್ರಕರಣ ಸಂಬಂಧ ಬೆಳಗಾವಿಯಲ್ಲಿ ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದು, ನನ್ನ ಮೇಲೆ ಸುಳ್ಳು ಆರೋಪ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಮುನಿರತ್ನ ನಾಯ್ಡು ವ್ಯಕ್ತಿತ್ವ ಏನು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಮುನಿರತ್ನ ತಾವೇ ಗೂಂಡಾಗಳನ್ನು ಬಿಟ್ಟು ಹೀಗೆ ಮಾಡಿಸಿಕೊಂಡಿದ್ದಾರೆ. ಕಾಂಗ್ರೆಸ್​ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಬೇರೆಯವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮುನಿರತ್ನ ಕಾಂಗ್ರೆಸ್​ ಕಾರ್ಯಕರ್ತರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಡಿ.ಕೆ.ಸುರೇಶ್ ಹೇಳಿದರು.

Advertisement

ಮೂವರು ಪೊಲೀಸ್ ವಶಕ್ಕೆ
ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ನಂದಿನಿ ಲೇಔಟ್​ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.


ಬಿಜೆಪಿ ನಾಯಕರಿಂದ ಖಂಡನೆ: 
ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಖಂಡಿಸಿದ್ದಾರೆ. ಇಂತಹ ದಾಳಿ ಮುನಿರತ್ನಗೆ ಅವಮಾನಿಸಿದ್ದು ಮಾತ್ರವಲ್ಲ, ಇಡೀ ಆ ಕ್ಷೇತ್ರದ ಮಾಡಿದ ಅವಮಾನ. ಕಾಂಗ್ರೆಸ್ ಅಧಿಕಾರದಲ್ಲಿದೆ ಜನಪ್ರತಿನಿಧಿ ಮೇಲೆ ದಾಳಿ, ದಬ್ಬಾಳಿಕೆ ನಡೆದಿರುವುದು ಖಂಡನೀಯ ಎಂದು ವಿಜಯೇಂದ್ರ ಹೇಳಿದರು. ಘಟನೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಸಿ.ಟಿ.ರವಿ ಕೂಡ ಘಟನೆಯನ್ನು ಖಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next