Advertisement

“ಲಿಂಗಾಯತ ಸ್ವತಂತ್ರ ಧರ್ಮ’

03:14 PM Jul 20, 2017 | |

ಬೀದರ: ಲಿಂಗಾಯತ ಮತ್ತು ವೀರಶೈವ ಎರಡು ಪದಗಳು ಬೇರೆ. ಲಿಂಗಾಯತ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನಿಂದ ಹುಟ್ಟಿದ ಸ್ವತಂತ್ರ ಧರ್ಮ. ಈ ಕುರಿತು ಯಾರೇ ಸ್ವಾಮೀಜಿ, ಸಂಶೋಧಕರು ವೇದಿಕೆ ಏರ್ಪಡಿಸಿದರೆ ಸಾಬೀತು ಮಾಡಿ ತೋರಿಸುತ್ತೇನೆ ಎಂದು ಕೂಡಲಸಂಗಮದ ಶ್ರೀ ಮಾತೆ ಮಹಾದೇವಿ ಸವಾಲು ಹಾಕಿದರು.

Advertisement

ನಗರದಲ್ಲಿ ಬುಧವಾರ ನಡೆದ ಲಿಂಗಾಯತ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಲಿಂಗಾಯತ ಒಂದು ಜಾತಿ, ಪಂಥವಲ್ಲ, ಅದು ಸ್ವತಂತ್ರ ಧರ್ಮ. ಲಿಂಗಾಯತ ಜತೆಗೆ ವೀರಶೈವ ಪದ ಸೇರಿಸುವುದು ಅಪರಾಧ. ಹಿರಿಯ ಚಿಂತಕ ಚಿದಾನಂದ ಮೂರ್ತಿ ವೀರಶೈವ ಪದವೇ ಸತ್ಯ ಎಂದು ವಾದಿಸುತ್ತಿದ್ದರೆ ನಮ್ಮದು ತಕರಾರಿಲ್ಲ. ಒಂದೇ ಮನೆಯಲ್ಲಿ ಇಬ್ಬರು ಜಗಳ ಆಡುವುದು
ಬೇಡ. ನೀವು (ವೀರಶೈವರು) ಪಕ್ಕದ ಮನೆಯವರಾಗಿಯೇ ಇರಿ. ಲಿಂಗಾಯತ ಧರ್ಮದಲ್ಲಿ ಬಂದು ಕಲುಷಿತ ಮಾಡಬೇಡಿ
ಎಂದು ಹೇಳಿದರು. 

ಅಜ್ಞಾನದಿಂದಾಗಿ ಲಿಂಗಾಯತವು ಹಿಂದು ಧರ್ಮದಲ್ಲಿ ಒಂದು ಜಾತಿ ಆಗಿದೆ. 1851ರಲ್ಲಿ ಬ್ರಿಟಿಷರು ನಡೆಸಿದ್ದ ಮೊದಲ ಜನಗಣತಿ ವೇಳೆಯೇ ಲಿಂಗಾಯತಕ್ಕೂ ಜೈನ, ಬುದ್ಧ, ಸಿಖ್‌ರಂತೆ ಸ್ವತಂತ್ರ ಧರ್ಮ ಮಾನ್ಯತೆ ಸಿಗುತ್ತಿತ್ತು. ಆದರೆ, ಮೈಸೂರಿನ ಕೆಲವು ಜಾತಿವಾದಿಗಳು ಅಡ್ಡಿಪಡಿಸಿದ್ದರಿಂದ ಈಗ ಸ್ವತಂತ್ರ ಧರ್ಮ ಆಗಿರಬೇಕಾಗಿದ್ದ ಲಿಂಗಾಯತ ಪರಾವಲಂಬಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ವೀರಶೈವ ಮಹಾಸಭಾದ ಸಮಾರಂಭದಲ್ಲಿ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಒಮ್ಮತದಿಂದ ಒಂದು ಹೆಸರು ಸೂಚಿಸಿದರೆ, ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆ ವೇಳೆ ಮಹಾಸಭೆ ಪ್ರಧಾನ ಕಾರ್ಯದರ್ಶಿಯೂ ಆದ ಸಚಿವ ಈಶ್ವರ ಖಂಡ್ರೆ ವೀರಶೈವ ಲಿಂಗಾಯತ ಎಂಬ ಹೆಸರು ಪ್ರಸ್ತಾಪಿಸಿದ್ದಾರೆ. ಹಾಗಾಗಿ ಲಿಂಗಾಯತ ಒಂದೇ ಪದ ಸೇರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ. ಅದಕ್ಕಾಗಿ ಬೀದರನಿಂದ ರ್ಯಾಲಿ ಶುರು ಮಾಡಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗೆ ಸ್ವಾಮೀಜಿಗಳು ಮತ್ತು ಚುನಾಯಿತ ಪ್ರತಿನಿಧಿ ಗಳ ನಿಯೋಗದ ಮೂಲಕ ಮನವರಿಕೆ ಮಾಡಿಕೊಡುವ
ಅಗತ್ಯವಿದ್ದು, ಅದಕ್ಕಾಗಿ ಶೀಘ್ರದಲ್ಲಿ ದಿನಾಂಕ ನಿಗದಿಪಡಿಸಲಾಗುವುದು. ಬರುವ ದಿನಗಳಲ್ಲಿ ಬೆಳಗಾವಿ, ಲಾತೂರ, ಹೈದ್ರಾಬಾದನಲ್ಲಿಯೂ ರ್ಯಾಲಿ ನಡೆಸಲಾಗುವುದು. ಬೆಂಗಳೂರು, ದೆಹಲಿಯಲ್ಲಿ ಸಮಾವೇಶ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದು. ಜತಗೆ ಎಲ್ಲ ರಾಜ್ಯಗಳ ಸಿಎಂಗಳಿಂದ ಶಿಫಾರಸ್ಸು ಪತ್ರ ಪಡೆದು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಮಾತಾಜಿ ಹೇಳಿದರು. 

Advertisement

ವಿಜಯಪುರ ವಿವಿಗೆ ಅಕ್ಕ ಮಹಾದೇವಿ ಹೆಸರು ಇಟ್ಟಿರುವುದು, ಸರ್ಕಾರಿ ಕಚೇರಿಗಳಲ್ಲಿ ಬಸವ ಭಾವಚಿತ್ರ ಅಳವಡಿಕೆಗೆ ರಾಜ್ಯ ಸರ್ಕಾರ ಆದೇಶಿಸಿ ಗಟ್ಟಿ ನಿರ್ಧಾರ ಕೈಗೊಂಡಿದ್ದು, ಈ ಕಲಬುರಗಿ ವಿವಿಗೆ ಬಸವೇಶ್ವರ ಹೆಸರು ಇಡುವುದಕ್ಕೂ ಮುಂದಾಗಿದೆ. ಇದರ ಹಿಂದೆ ರಾಜಕೀಯ ಅಥವಾ ಯಾವುದೇ ಉದ್ದೇಶ ಇರಲಿ, ಮಹತ್ತರವಾದ ನಿರ್ಧಾರಕ್ಕೆ ಎಲ್ಲರೂ ಮೆಚ್ಚಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next