ಉಡುಪಿ: ಆಧ್ಯಾತ್ಮ, ವಿಶ್ವಶಾಂತಿ ಹಾಗೂ ಮನುಲದ ಶಾಂತಿಗೆ ಭಗವದ್ಗೀತೆಯೇ ಮೂಲ ಗ್ರಂಥವಾಗಿದೆ. ಧ್ಯಾನ ದಿನವೂ ಆದ ಡಿ.21ರಂದು ಲಂಡನ್ನ ಚರ್ಚ್ ಇದ್ದ ಜಾಗದಲ್ಲೇ ಶ್ರೀ ಕೃಷ್ಣನ ಮಂದಿರ ಸ್ಥಾಪಿಸಿ ಪ್ರವೇಶವಾಗಿದ್ದು ಈ ದಿನದ ವಿಶೇಷತೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಶ್ರೀಕೃಷ್ಣ ಮಠ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಬೃಹತ್ ಗೀತೋತ್ಸವದ ಪ್ರಯುಕ್ತ ಶನಿವಾರ ಜರಗಿದ ಕಾರ್ಯ ಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಗೊ.ಮಧುಸೂದನ್ “ಶ್ರೀ ಭಗವಾನುವಾಚ ಪುಸ್ತಕ’ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ವಿಶ್ವದಲ್ಲಿ ತುಮುಲ ಹೆಚ್ಚುತ್ತಿದೆ. ಭೌತಿಕ ಅಭಿವೃದ್ಧಿ ಆಗುತ್ತಿದ್ದರೂ ಆಂತರಿಕ ಮನಸ್ಥಿತಿ ಕುಸಿಯುತ್ತಿದೆ. ಶಾಂತಿ, ಸಮಾಧಾನ, ಸಾಮರಸ್ಯ, ರಾಷ್ಟ್ರೀಯ ಚಿಂತನೆ ಮರು ಸ್ಥಾಪಿಸಲು ಭಗವದ್ಗೀತೆ ಮೂಲವಾಗಿದೆ ಎಂದ ಶ್ರೀಗಳು, ಶ್ರೀಕೃಷ್ಣ ಜಯಂತಿಗೆ ರಜೆ ಘೋಷಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಡಾ| ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಪುತ್ತಿಗೆ ಜಗತ್ತಿಗೆ ಆಧ್ಯಾತ್ಮದ ಹಸಿವೆಯಿಂದ. ಮುತ್ತಿಗೆ ಹಾಕಿದೆ. ಶ್ರೀ ಮಠವು ಧಾರ್ಮಿಕ, ಸಾಂಸ್ಕೃತಿಕ, ಸಂಸ್ಕೃತಿ ಪ್ರಜ್ಞೆಯನ್ನು ಸಪ್ತಸಾಗರದಾಚೆ ದಾಟಿಸಿದೆ ಎಂದು ಹೇಳಿದರಲ್ಲದೆ, ಕೃಷ್ಣನ ಸಂದೇಶವನ್ನು ಗೊ. ಮಧುಸೂದನ ಶ್ರೀ ಭಗವಾನುವಾಚ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ ಎಂದರು.
ಮೈಸೂರು ಪ್ರಾಚ್ಯವಿದ್ಯಾ ಸಂಶೋಧನಾಲಯ ನಿವೃತ್ತ ಉಪನಿರ್ದೇಶಕ ಡಾ.ಟಿ. ವಿ. ಸತ್ಯನಾರಾಯಣ ಅವರು ಗ್ರಂಥ ಪರಿಚಯಿಸಿದರು. ಪ್ರಸಿದ್ಧ ಚಿತ್ರಕಲಾವಿದ ಗಂಜೀಫಾ ರಘುಪತಿ ಭಟ್ ಮೈಸೂರು, ಗ್ರಂಥ ಪ್ರಕಾಶಕ ಕೆ. ರಾಕೇಶ್ ರಾಜೇ ಅರಸ್ ಮೈಸೂರು, ಗ್ರಂಥ ಮುದ್ರಕ ಜೆ. ಬಿ. ಪಟ್ಟಾಭಿ ಮೈಸೂರು, ಪತ್ರಿಕಾ ಅಂಕಣಕಾರ ಡಾ| ವಿ. ರಂಗನಾಥ್ ಮೈಸೂರು ಉಪಸ್ಥಿತರಿದ್ದರು. ದಾನಿ ವಿಶ್ವನಾಥ ಪಾದೂರು, ಆರೂರು ಕಿಶೋರ್ ರಾವ್ ದಂಪತಿಯನ್ನು ಸಮ್ಮಾನಿಸಲಾಯಿತು. ಗೊ. ಮಧುಸೂದನ ಪ್ರಸ್ತಾವಿಸಿ, ಸ್ವಾಗತಿಸಿದರು. ಅನಿಲ್ ರಾವ್ ನಿರೂ ಪಿಸಿ, ವಿಶ್ವಾಸ್ ನಾಡಿಗ ವಂದಿಸಿದರು. ಶ್ರುತಿ ಆಧ್ಯಾ ಸಹಕರಿಸಿದರು
ಇಂದು ಯುವ ಗೀತೋತ್ಸವ
ರಾಜಾಂಗಣದಲ್ಲಿ ಡಿ.22ರ ಬೆಳಗ್ಗೆ 9.30ರಿಂದ ಸಂಜೆ 5ರ ತನಕ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕುರಿತು ಒಂದು ದಿನದ ಕಾರ್ಯಾ ಗಾರ “ಯುವ ಗೀತೋತ್ಸವ’ ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಆಶೀರ್ವಚನ ನೀಡುವರು.