Advertisement

ಕುಡಿವ ನೀರಿನ ಸಮಸ್ಯೆ ನಿವಾರಣೆ: ಹೂಲಗೇರಿ

03:41 PM Jul 06, 2020 | Naveen |

ಲಿಂಗಸುಗೂರು: ರಾಂಪುರ ಏತ ನೀರಾವರಿ ಯೋಜನೆಯಿಂದ ಕುಡಿವ ನೀರಿನ ಕೆರೆಗೆ ನೀರು ಹರಿಸಲಾಗುತ್ತಿದೆ. ಇದರಿಂದ ಪಟ್ಟಣದಲ್ಲಿನ ನೀರಿನ ಸಮಸ್ಯೆ ನಿವಾರಣೆ ಆಗಿದೆ ಎಂದು ಶಾಸಕ ಡಿ.ಎಸ್‌.ಹೂಲಗೇರಿ ಹೇಳಿದರು.

Advertisement

ಸ್ಥಳೀಯ ಪುರಸಭೆ ವ್ಯಾಪ್ತಿ ಪ್ರದೇಶಗಳಿಗೆ ಕುಡಿವ ನೀರು ಪೂರೈಸುವ ಕೆರೆಗೆ ಭೇಟಿ ನೀಡಿ ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಲದಂಡೆ ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿತ್ತು. ಹೀಗಾಗಿ ಕೆರೆಯಲ್ಲಿ ನೀರು ಸಂಗ್ರಹ ಕಡಿಮೆ ಆಗಿದ್ದರಿಂದ ಕುಡಿವ ನೀರಿನ ಸಮಸ್ಯೆ ಎದುರಾಗಿತ್ತು. ಈ ಕುರಿತು ನೀರಾವರಿ ಹಾಗೂ ಪುರಸಭೆ ಅಧಿಕಾರಿಗಳ ಜತೆ ಚರ್ಚಿಸಿ ರಾಂಪುರ ಏತ ನೀರಾವರಿ ಯೋಜನೆಯಿಂದ ಕುಡಿವ ನೀರಿನ ಕೆರೆ ತುಂಬಿಸಲು ತಿರ್ಮಾನಿಸಲಾಗಿದೆ. ನಂತರ ಪ್ರಾದೇಶಿಕ ಆಯುಕ್ತರು ಹಾಗೂ ಕೆಬಿಜೆಎನ್‌ಎಲ್‌ ಮುಖ್ಯ ಇಂಜಿನಿಯರ್‌ಗೆ ಸಮಸ್ಯೆ ಮನವರಿಕೆ ಮಾಡಿ ಜೂ.29ರಿಂದ ಕುಡಿವ ನೀರಿನ ಕೆರೆಗೆ ನೀರು ಹರಿಸಲಾಗುತ್ತಿದೆ. ಇನ್ನೂ ಒಂದೂವರೆ ತಿಂಗಳವರೆಗೆ ಪಟ್ಟಣದ ಜನತೆಗೆ ಎಂದಿನಂತೆ ನೀರು ಸರಬರಾಜು ಮಾಡಲಾಗುವುದು. ಅಗಸ್ಟ್‌ ತಿಂಗಳಲ್ಲಿ ಐಸಿಸಿ ಸಭೆ ನಂತರ ನಾಲೆಗೆ ನೀರು ಹರಿಸುವುದರಿಂದ ನೀರಿನ ಸಮಸ್ಯೆಯಾಗದು ಎಂದರು.

ಪಟ್ಟಣಕ್ಕೆ 24/7 ಕುಡಿವ ನೀರು ಯೋಜನೆ ಹಾಗೂ ಒಳಚರಂಡಿ ಯೋಜನೆ ಜಾರಿಗೊಳಿಸುವ ಬಗ್ಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅನುಮೋದನೆ ದೊರೆತಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಈ ಯೋಜನೆ ರದ್ದು ಮಾಡಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಆದರೂ ಯಾವುದಕ್ಕೂ ಹಿಂಜರಿಯುವ ಪ್ರಶ್ನೆಯೇ ಇಲ್ಲ, ಹೋರಾಟ ಮಾಡಿಯಾದರೂ ಯೋಜನೆ ತರುವೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೂಪನಗೌಡ ಕರಡಕಲ್‌, ಮುಖಂಡರಾದ ಪಾಮಯ್ಯ ಮುರಾರಿ, ಸೋಮಶೇಖರ ಐದನಾಳ, ಪುರಸಭೆ ಸದಸ್ಯರಾದ ಮಹ್ಮದ್‌ ರಫಿ, ಪ್ರಮೋದ ಕುಲಕರ್ಣಿ, ಮೌಲಾಸಾಬ್‌, ಕುಪ್ಪಣ್ಣ ಕೊಡ್ಲಿ, ಪರಶುರಾಮ ನಗನೂರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next