Advertisement

ಸಮಸ್ಯೆ ನೂರೆಂಟಿದ್ದರೂ ಓಟು ಬಿಡೆವು

02:39 PM May 07, 2018 | Team Udayavani |

ಉಡುಪಿ: ‘ಹಿಂದಿನ ಓಟ್ನಾಗ ನನ್‌ ಹೆಣ್ತೇ ನ್ನ ಕೊಂದಾಕವ್ರೆ …ವೋಟರ್‌ ಐಡಿ ಆದ್ಮ್ಯಾಕೆ ಆಕಿ ಓಟ್‌ ಮಾಡಿಲ್ಲ. ಯಾಕಂದ್ರೆ ಅವ್ರ್ ಚುನಾವಣಾ ದಾಖಲೆಯಾಗ ನನ್‌ ಹೆಣ್ತೆ  ಸತ್ತಾವ್ಳೆ ಅಂತ ತೆಗೆದ್‌ ಹಾಕ್ಯಾರೆ… ನಾನ್‌ ಬಿಟ್ಟಿಲ್ಲ ನೋಡ್ರಿ. ಆಮ್ಯಾಕೆ ವಕೀಲರ ಮೂಲಕ ಆಕಿ ಬದುಕಿರೋ ದಾಖಲೆ ಕೊಟ್ಟು ಮತ್ತೆ ವೋಟರ್‌ ಐಡಿ ಮಾಡ್ಸೀನಿ. ಹಾಗಾಗಿ ಈ ಬಾರಿ ಆಕಿ ಓಟ್‌ ಹಾಕೇ ಹಾಕ್ತಾಳ.’

Advertisement

ಪಡುಬಿದ್ರಿ, ಹೆಜಮಾಡಿ, ಉಚ್ಚಿಲ, ಶಿರ್ವ, ಮುದರಂಗಡಿ, ನಂದಿಕೂರು ಭಾಗದಲ್ಲಿ ‘ಉದಯವಾಣಿ’ ಸಂಚಾರ ನಡೆಸಿದಾಗ ಶಿರ್ವದಲ್ಲಿ ದೊಡ್ಲಗಿರಿ ಭಾಗದ ನಿವಾಸಿ ಗಂಗಾವತಿಯ ಮಾಣಿಕ್ಯ ಅವರು ಚುನಾವಣೆಗಾಗಿ ತಾನು ಅನುಭವಿಸಿದ ಪಾಡನ್ನು ವಿವರಿಸಿದರು.

ಪೇಟೆ ಭಾಗದ ಜನರಲ್ಲಿ ಕೇಳಿದಾಗ ಹಿಂದಿನ ಟ್ರೆಂಡ್‌ ಬೇರೆ ಇತ್ತು. ಈಗ ಬದಲಾಗುತ್ತಾ ಬರುತ್ತಿದೆ. ಪಕ್ಷಗಳ ನಾಯಕರು, ಕಾರ್ಯಕರ್ತರ ತಿರುಗಾಟ ಹೆಚ್ಚಿದೆ ಎನ್ನುತ್ತಾರೆ. ‘ನನ್ನ ವ್ಯವಹಾರದ್ದೇ ಟೆನ್ಶನ್‌ ಮುಗಿಯೋದಿಲ್ಲ. ಇನ್ನು ಓಟಿನ ಚಿಂತೆ ನಾನೇಕೆ ಮಾಡೋದು. ಆದ್ರೆ ಓಟ್‌ ಮಾತ್ರ ಮಾಡ್ತೇನೆ’ ಎಂದು ಶಿರ್ವದ ಪಾನ್‌ಬೀಡಾ ಅಂಗಡಿಯ ಸೀನಣ್ಣ ಹೇಳಿದರು.

ಹೆದ್ದಾರಿ ನಿಧಾನ, ಆಗದ ಕೊಳಚೆ ನಿರ್ವಹಣೆ
ಪಡುಬಿದ್ರಿ ಭಾಗದ ಬಹುತೇಕ ಜನರು ಅಲ್ಲಿನ ರಾ.ಹೆ. 66ರ ಕಳೆದೆಂಟು ವರ್ಷದ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ. ಇನ್ನೂ ಮುಗಿಯದ ಪಡುಬಿದ್ರಿ ಹೆದ್ದಾರಿ ಕಾಮಗಾರಿ, ಹೊಟೇಲುಗಳ ತ್ಯಾಜ್ಯ ಹರಿದು ಹೋಗಲು ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಆಗಿಲ್ಲ. ಇಲ್ಲಿನ ಜನಪ್ರತಿನಿಧಿಗಳಿಗೆ ಏನೇನೂ ಕಾಳಜಿಯೇ ಇಲ್ಲವೇ ಎಂದೆನಿಸುತ್ತದೆ ಎಂದರು.

ಒಗ್ಗಿಕೊಂಡರೇ ಜನರು…
ನಂದಿಕೂರಿನಲ್ಲಿ ಕೈಗಾರಿಕೆಗಳಿಂದ ಬಹಳಷ್ಟು ತೊಂದರೆ ಅನುಭವಿಸಿದ ಜನರು ಈ ಬಾರಿ ಅಷ್ಟಾಗಿ ವಿರೋಧವನ್ನು ವ್ಯಕ್ತಪಡಿಸದೆ ವ್ಯವಸ್ಥೆಗೆ ಒಗ್ಗಿ ಹೋಗಿದ್ದಾರೆ ಎಂದೆನಿಸುತ್ತದೆ. ಆದರೂ ಕೆಲವು ಜನರು ಈಗಲೂ ಕೈಗಾರಿಕೆಗಳಿಗೆ ವಿರೋಧವಾಗಿ ಮಾತನಾಡಿದ್ದಾರೆ. ಸಮಸ್ಯೆಗಳು ಬಗೆಹರಿದಿಲ್ಲ. ಸ್ಥಳೀಯರಿಗೆ ಸೂಕ್ತವಾಗಿ ಉದ್ಯೋಗ ಸೃಷ್ಟಿಯಾಗಿಲ್ಲ ಎಂದಿದ್ದಾರೆ. 

Advertisement

ಯೋಜನಾ ಪ್ರಾಧಿಕಾರದಿಂದ ಮುಳುವು
ಕಾಪು ತಾಲೂಕಾದ ಬಳಿಕ ಕಾಪು ಯೋಜನಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಇದರಡಿ ಉಚ್ಚಿಲ ಗ್ರಾಮವನ್ನೂ ಸೇರಿಸಲಾಗಿದೆ. ಇದರಿಂದ ಬಡಜನರಿಗೆ ಮುಳುವಾಗಿದೆ. ಒಂದು ಸೂರು ಕಟ್ಟಿಕೊಳ್ಳಲೂ ಅಡ್ಡಿಯಾಗುತ್ತಿದೆ. ಇಂತಹ ಅಭಿವೃದ್ಧಿ ನಮಗೆ ಬೇಡ. 
– ವಸಂತ್‌ ಉಚ್ಚಿಲ 

ಓಟು ಹಾಕದೆ ಯಾವ ಚುನಾವಣೆಯೂ ಬಿಟ್ಟಿಲ್ಲ
 ‘ಸರಕಾರಿ ಭೂಮಿಯಲ್ಲಿ ಕುಳಿತು 30 ವರ್ಷದಿಂದ ಹಕ್ಕುಪತ್ರಕ್ಕಾಗಿ ಒದ್ದಾಡಿ ನನಗೀಗ 85 ವರ್ಷವಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಈ ವ್ಯವಸ್ಥೆಯಿಂದ ಬಸವಳಿದೆ. ಇನ್ನು ನಾನು ಹೋಗೋ ಕಾಲವಾಯ್ತು. ಆದ್ರೆ ಓಟ್‌ ಹಾಕದೆ ಮಾತ್ರ ಯಾವ ಚುನಾವಣೆಯನ್ನೂ ಬಿಟ್ಟಿಲ್ಲ. ಬದುಕಿದ್ರೆ ಈ ಬಾರಿಯೂ ಓಟ್‌ ಮಾಡ್ತೇನೆ’.
ಮಹಾಬಲ ಕೋಟ್ಯಾನ್‌,
ಮುದರಂಗಡಿ ಕುತ್ಯಾರು

„ಚೇತನ್‌ ಪಡುಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next