Advertisement

Belman ಪೇಟೆಯಲ್ಲಿ ಬಾಯ್ದೆರೆದ ಚರಂಡಿಗಳು!

02:47 PM Jan 01, 2025 | Team Udayavani |

ಬೆಳ್ಮಣ್‌: ಇಲ್ಲಿನ ಮುಖ್ಯ ರಸ್ತೆಯ ಪಕ್ಕದ ಚರಂಡಿಗೆ ಹಾಕಲಾದ ಹಾಸುಕಲ್ಲುಗಳೇ ಜನರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳು ಬಾಯ್ದೆರೆದಿವೆ. ಹಾಸುಗಲ್ಲುಗಳು ಒಂದೇ ರೀತಿ ಇಲ್ಲದೆ ಇರುವುದರಿಂದ ಕಾಲಿಟ್ಟಾಗ ಅಲುಗಾಡುತ್ತವೆ, ಕೆಲವು ಬಾಯ್ಬಿಟ್ಟಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಚರಂಡಿಗೇ ಬೀಳುವ ಸ್ಥಿತಿ ಇದೆ.

Advertisement

ಬೆಳ್ಮಣ್‌ ಜಂಕ್ಷನ್‌ನಿಂದ ಶಿರ್ವ ಸಾಗುವ ರಾಜ್ಯ ಹೆದ್ದಾರಿಯ ಎರಡೂ ಬದಿಯಲ್ಲಿ ರಸ್ತೆಯ ಇಕ್ಕೆಲದಲ್ಲಿ ಜಾಗವಿಲ್ಲ. ಹೀಗಾಗಿ ದಾರಿಹೋಕರು ಚರಂಡಿಯ ಮೇಲೇ ಸಾಗಬೇಕು. ಕೆಲವು ಕಡೆ ಚರಂಡಿಗೆ ಹಾಸುಗಲ್ಲು ಇದ್ದರೆ ಇನ್ನು ಕೆಲವು ಕಡೆ ಇಲ್ಲ!

ಪೇಟೆ ಪ್ರದೇಶದಿಂದ ಸ್ವಲ್ಪ ದೂರದ ವರೆಗೆ ಹಾಸುಕಲ್ಲುಗಳನ್ನು ಹಾಕಿ ಹಲವು ವರ್ಷಗಳು ಕಳೆದಿವೆ. ಇದೀಗ ಕಲ್ಲುಗಳು ಎಲ್ಲವೂ ಚೆಲ್ಲಾಪಿಲ್ಲಿಯಾಗಿ ರಸ್ತೆಯ ಪಕ್ಕದಲ್ಲಿ ನಡೆದಾಡುವ ಮಂದಿಗೂ ಸಂಕಟವನ್ನು ತರಿಸುವಂತಿದೆ. ಚರಂಡಿಯ ಪಕ್ಕದಲ್ಲೇ ರಸ್ತೆಯಿದ್ದು ರಸ್ತೆಯು ದಿನೇ ದಿನೇ ಕುಸಿದು ಅಪಾಯಕ್ಕೆ ಆಹ್ವಾನವನ್ನು ನೀಡುವಂತಿದೆ.

ಪಾದಚಾರಿಗಳಿಗೂ ಸಮಸ್ಯೆ
ಶಿರ್ವ ಭಾಗದಿಂದ ವಾಹನಗಳು ಬೆಳ್ಮಣ್‌ ಭಾಗಕ್ಕೆ ಬರುವ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿ ಓಡಾಡುವ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈಗಾಗಲೇ ಹಲವು ಮಂದಿ ರಸ್ತೆುಂದ ಕೆಳಗೆ ಇಳಿಯಲು ಜಾಗವಿಲ್ಲದೆ ಚರಂಡಿಯಲ್ಲಿ ಎದ್ದು ಬಿದ್ದದ್ದೂ ಆಗಿದೆ. ಅಲ್ಲದೆ ವಾಹನ ಸವಾರರು ಸ್ವಲ್ಪ ಎಡವಿದರೂ ಅಪಘಾತಕ್ಕೆ ಕಾರಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸ್ಥಳೀಯ ಪಂಚಾಯತ್‌ ಮತ್ತು ಲೋಕೋಪಯೋಗಿ ಇಲಾಖೆ ತತ್‌ಕ್ಷಣ ಕ್ರಮ ಕೈಗೊಳ್ಳಲು ಜನರು ಆಗ್ರಹಿಸುತ್ತಿದ್ದಾರೆ.

ಗಬ್ಬೆದ್ದು ನಾರುತ್ತಿದೆ ಚರಂಡಿ ನೀರು
ಇಲ್ಲಿನ ರಸ್ತೆ ಎರಡೂ ಬದಿಯಲ್ಲಿ ಮಳೆಯ ನೀರು ಹರಿದುಹೋಗಲು ಇರುವ ಚರಂಡಿ ಇದ್ದರೂ ಸಮರ್ಪಕವಾಗಿಲ್ಲ. ಹೋಟೆಲ್‌ ಹಾಗೂ ಅಂಗಡಿಗಳ ತ್ಯಾಜ್ಯ ನೀರು ಕೂಡ ತೆರೆದ ಚರಂಡಿಯಲ್ಲಿ ಹರಿಯುತ್ತಿದ್ದು ಸ್ಥಳೀಯ ನಿವಾಸಿಗಳು ಹಾಗೂ ದಾರಿಹೋಕರು ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ.

Advertisement

ಇಲಾಖೆಗೆ ತಿಳಿಸಿದೆ
ಜಲಜೀವನ್‌ ಮಿಶನ್‌ ನ ಪೈಪ್‌ ಲೈನ್‌ ಅಳವಡಿಕೆಯಿಂದಾಗಿ ಇದು ನಡೆದಿದ್ದು ಈಗಾಗಲೇ ಗುತ್ತಿಗೆದಾರರಿಗೆ, ಇಲಾಖೆಗೆ ತಿಳಿಸಲಾಗಿದೆ.
-ಮಮತಾ ಶೆಟ್ಟಿ, ಪಿಡಿಒ,ಬೆಳ್ಮಣ್‌ ಪಂಚಾಯತ್‌

-ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next