ಇನ್ನೋವೇಟಿವ್ ಫಿಲ್ಮ್ಸಿಟಿಯಲ್ಲಿ ಮೂರು ದಿನಗಳ ಕಾಲ ಇಂಟರ್‌ನ್ಯಾಷನಲ್ ಫಿಲ್ಮ್ಫೆಸ್ಟ್ ನಡೆಯುತ್ತಿದೆ. ಶನಿವಾರ ಸುದೀಪ್ “ಫಿಲ್ಮ್ಫೆಸ್ಟ್ -2018’ಗೆ ಚಾಲನೆ ನೀಡಿದರು. ಈ ವೇಳೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್‌ಬಾಬು, ನಿರ್ದೇಶಕ ಪವನ್ ಒಡೆಯರ್, ರಾಕ್‌ಲೈನ್ ವೆಂಕಟೇಶ್ ಇತರೆ ಗಣ್ಯರು ಹಾಜರಿದ್ದರು.
ಫಿಲ್ಮ್ಫೆಸ್ಟ್‌ಗೆ ಚಾಲನೆ ಕೊಟ್ಟ ಸುದೀಪ್, “ವಿದ್ಯಾರ್ಥಿಗಳಿಗೆ ಹಾಗು ಚಿತ್ರರಂಗದ ಬೆಳವಣಿಗೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಬೇಕು. ನನಗೆ “ಬಿಗ್‌ಬಾಸ್’ ಸೆಟ್ ನೋಡಿ ನೋಡಿ ಸಾಕಾಗಿತ್ತು. ಈಗ ನೊಡಿದರೆ, ಅದಕ್ಕಿಂತಲೂ ವಿಭಿನ್ನವಾದಂತಹ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ ಎಂಬುದನ್ನು ಕೇಳಿ ಸಂತಸವಾಗಿದೆ. ಬಿಗ್‌ಬಾಸ್ ನಡೆಯುವವರೆಗೂ ಇಂತಹ ಅನೇಕ ಒಳ್ಳೆಯ ಚಟುವಟಕೆಗಳು ನಡೆಯಬೇಕು.
ಯಾರೋ ಒಬ್ಬರು ಬೆಳೆಯಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಿಗೆ ಬೆಳೆಯಬೇಕು. ಅದಕ್ಕೆ ಪೂರಕವಾಗಿ ಹೊಸ ಪ್ರತಿಭೆಗಳಿಗೆ ಇಲ್ಲೊಂದು ವೇದಿಕೆ ಕಲ್ಪಿಸಿರುವುದು ವಿಶೇಷ ಎಂದರು. ರಾಕ್‌ಲೈನ್ ವೆಂಕಟೇಶ್, “ಈ ಫಿಲ್ಮ್ಸಿಟಿಗೆ ಒಂದು ದಶಕ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಒಂದೊಳ್ಳೆಯ ಕಾರ್ಯಕ್ರಮ ಮಾಡಬೇಕು. ಅದರಲ್ಲೂ ಚಿತ್ರರಂಗದಲ್ಲಿ ನೆನಪಲ್ಲುಳಿಯುವಂತಹ ಫಿಲ್ಮ್ಫೆಸ್ಟ್ ಮಾಡಬೇಕು ಎಂಬ ಆಸೆ ಇತ್ತು. ನನ್ನ ಆಸೆಗೆ ಬಹಳಷ್ಟು ಜನ ಕೈ ಜೋಡಿಸಿದ್ದಾರೆ.
ಅದರಲ್ಲಿ ಸುದೀಪ್ ಅವರದು ದೊಡ್ಡ ಕೈ. ಸುದೀಪ್ ಕೇವಲ ನಟರಷ್ಟೇ ಅಲ್ಲ, ಅವರೊಳಗೊಬ್ಬ ಆಟಗಾರನೂ ಇದ್ದಾನೆ. ಇಡೀ ಚಿತ್ರರಂಗವನ್ನು ಒಂದುಗೂಡಿಸಿಕೊಂಡು ಸಾಗುವ ನಾಯಕನಿದ್ದಾನೆ ಎಂದರು. ಇದೇ ವೇಳೆ “ನಟ ಸಾರ್ವಭೌಮ’ ಚಿತ್ರದ ಮೇಕಿಂಗ್ ಟೀಸರ್ ಬಿಡುಗಡೆ ಮಾಡಲಾಯಿತು. ನಿರ್ದೇಶಕ ಪವನ್, ಚಿತ್ರದ “ಮೇಕಿಂಗ್ ವಿಡಿಯೋ’ ಹಂಚಿಕೊಂಡಿದ್ದು ಖುಷಿ ಕೊಟ್ಟಿದೆ. ಕನ್ನಡದಲ್ಲಿ ನೂರಾರು ಒಳ್ಳೆಯ ಚಿತ್ರಗಳು ಬಂದಿವೆ.
ಆ ಸಾಲಿಗೆ “ನಟ ಸಾರ್ವಭೌಮ’ ಕೂಡ ಸೇರಲಿದೆ’ ಎಂಬುದು ಪವನ್‌ಮಾತು. ಇದೇ ಸಂದರ್ಭದಲ್ಲಿ “ಕುರುಕ್ಷೇತ್ರ’ ಚಿತ್ರದ ಮೇಕಿಂಗ್ ಟೀಸರ್ ಕೂಡ ಬಿಡುಗಡೆ ಮಾಡಲಾಯಿತು. ಮುನಿರತ್ನ ಅವರ ದೊಡ್ಡ ಕನಸಿನ ಚಿತ್ರವಿದು. ಕನ್ನಡ ಮಾರುಕಟ್ಟೆ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಮುನಿರತ್ನ, ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಅಲ್ಲಿದ್ದವರೆಲ್ಲರೂ ಗುಣಗಾನ ಮಾಡಿದರು.