Advertisement

ಮನೆ ಆರೈಕೆ ನೆರವಿಗೆ ಕುಶಲ ಆ್ಯಪ್‌

12:34 PM Sep 01, 2020 | Suhan S |

ಬೆಂಗಳೂರು: ಕೋವಿಡ್ ಸೋಂಕು ದೃಢಪಟ್ಟು, ಹೋಂ ಐಸೋಲೇಷನ್‌ಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇವರಿಗೆ ಸಹಾಯ ಮಾಡಲು ಸ್ವಸ್ಥ್ ಎಂಬ ಸಂಸ್ಥೆಯು ಕುಶಲ ಎಂಬ ಆ್ಯಪ್‌ ಪರಿಚಯ ಮಾಡಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

Advertisement

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿ, ಹೋಂ ಐಸೋಲೇಷನ್‌ಗೆ ಒಳಗಾಗುವವರ ಮನೆ ವ್ಯವಸ್ಥೆಯನ್ನು ಪಾಲಿಕೆಯ ಅಧಿಕಾರಿಗಳು ಭೇಟಿ ನೀಡಿ ಹೋಂ ಐಸೋಲೇಷನ್‌ಗೆ ಒಳಗಾಗಲು ಸಮರ್ಪಕವಾಗಿದ್ದರೆ ಅನುವು ಮಾಡಿಕೊಡಲಿದ್ದಾರೆ. ಈ ರೀತಿ ಹೋಂಐಸೋಲೇಷನ್‌ ಆಗುವವರ ಆರೋಗ್ಯ ಪರೀಕ್ಷೆ ಮಾಡಲು ಸಹಕಾರ ನೀಡಲು ಸ್ವಸ್ಥ್ ಎಂಬ ಸಂಸ್ಥೆ ಮುಂದೆ ಬಂದಿದ್ದು, ಕುಶಲ ಎಂಬ ಆ್ಯಪ್‌ ಅನ್ನು ಪರಿಚಯಿಸಿದೆ ಎಂದರು.

ಈ ಆ್ಯಪ್‌ನ ಮೂಲಕ ವೈದ್ಯರು ಪ್ರತಿದಿನ ಮೂರು ಬಾರಿ ಫೋನ್‌ ಮಾಡಿ ರೋಗಿಗಳ ಆರೋಗ್ಯ ವಿಚಾರಿಸಿಕೊಳ್ಳುತ್ತಾರೆ. ಹೋಂ ಐಸೋಲೇಷನ್‌ನಲ್ಲಿರುವವರು ತೊಂದರೆಗೆ ಒಳಗಾದರೆ ಕೂಡಲೇ ಪಾಲಿಕೆಗೆ ಮಾಹಿತಿ ಲಭ್ಯವಾಗಲಿದೆ. ಇದರ ಆಧಾರದ ಮೇಲೆ ತೊಂದರೆಗೆ ಒಳಗಾಗುವವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುತ್ತೇವೆ ಎಂದರು. ಹೋಂ ಐಸೋಲೇಷನ್‌ನಲ್ಲಿದ್ದು, ಆಕ್ಸಿಮೀಟರ್‌ ಹಾಗೂ ಔಷಧಿ ಅಗತ್ಯ ಇರುವವರಿಗೆ ಇದನ್ನು ಪೂರೈಸಲು ಕ್ರಮ ವಹಿಸಲಾಗುವುದು. ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸ್ವಸ್‌§ ಸಂಸ್ಥೆಯೂ ಸಹಕಾರ ನೀಡುತ್ತಿದೆ ಎಂದರು.

ಇನ್ನು ಸೋಂಕು ದೃಢಪಟ್ಟು, ಪಾಲಿಕೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾದರೆ, ಸೋಂಕಿತರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಪಾಲಿಕೆಯಿಂದಾಗಲೀ ಅಥವಾ ಆಸ್ಪತ್ರೆಯಿಂದಾಗಲಿ ಯಾರು ಈ ಸೇವೆಗೆ ಹಣ ಕೇಳುವಂತಿಲ್ಲ. ಹಣ ಕೇಳುವ ಆರೋಪ ಸಾಬೀತಾದರೆ ಸಂಬಂಧ ಪಟ್ಟ ಅಧಿಕಾರಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ನಡೆಸುತ್ತಿರುವ ಸೋಂಕು ಪರೀಕ್ಷೆ, ಕೋವಿಡ್‌ ಆರೈಕೆ ಕೇಂದ್ರ ಸೇರಿಸಲು ಹಾಗೂ ಖಾಸಗಿ ಆಸ್ಪತ್ರೆಗೆ ಸೇರಿಸಲು ಯಾವುದೇ ಶುಲ್ಕಯಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

……………………………………………………………………………………………………………………………………………………

Advertisement

90 ಸಾವಿರ ದಾಟಿದ ಬಿಡುಗಡೆ ಪಮಾಣ : ಬೆಂಗಳೂರು: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲೇ ಇದ್ದ ಕೋವಿಡ್ ಸೋಂಕಿತ ಸಂಖ್ಯೆ ಪ್ರಮಾಣ ಇಳಿಕೆಯಾಗಿದೆ. ಸೋಮವಾರ 1,862 ಸೋಂಕಿತ ಪ್ರಕರಣಗಳು ಕಂಡುಬಂದಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 1,27,336 ಕ್ಕೆ ಏರಿಕೆಯಾಗಿದೆ. ಹೊಸದಾಗಿ 2,422 ಮಂದಿ ಬಿಡುಗಡೆಯಾಗಿದ್ದು ಒಟ್ಟು ಬಿಡುಗಡೆ ಪ್ರಮಾಣ 90,043ಕ್ಕೆ ಏರಿದೆ. ನಗರದಲ್ಲಿ 37,116 ಸಕ್ರಿಯ ಪ್ರಕರಣಗಳಿದ್ದು, 284 ಮಂದಿ ತೀವ್ರ ನಿಗಾಘಟಕದಲ್ಲಿದ್ದಾರೆ.

ಸೋಮವಾರ 27 ಮಂದಿ ಕೋವಿಡ್‌ಗೆ ಬಲಿಯಾಗಿದ್ದು ಒಟ್ಟಾರೆ ಈ ಸಂಖ್ಯೆ 1,966ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ ಶೇ. 1.52 ರಷ್ಟಿದೆ. ನಗರದಲ್ಲಿ ಈವರೆಗೂ ಚೇತರಿಕೆ ಪ್ರಮಾಣ ಶೇ.69,73ರಷ್ಟಿದೆ.

8,55,534 ಮಂದಿಗೆ ಪರೀಕ್ಷೆ : ನಗರದಲ್ಲೀಗ ಒಟ್ಟು ಪಾಸಿಟಿವ್‌ ರೇಟ್‌ ಶೇ.15.19 ರಷ್ಟಿದ್ದು, ಆಕ್ಟೀವ್‌ ರೇಟ್‌ ಶೇ.28.74 ರಷ್ಟಿದೆ. ಅಲ್ಲದೆ ನಿನ್ನೆ 13,157 ಜನರನ್ನು ಪರೀಕ್ಷೆ ಗೆ ಒಳಪಡಿಸಲಾಗಿದ್ದು ಇದುವರೆಗೂ 8,55,434 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಹಾಗೆಯೇ ಒಟ್ಟು 40,563 ಕಂಟೈನ್ಮೆಂಟ್‌ ವಲಯವಿದ್ದು ಇದರಲ್ಲಿ 15,723 ಸಕ್ರಿಯ ಕಂಟೈನ್ಮೆಂಟ್‌ ವಲಯಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next