ಗದಗ: ಜಗಳ ಬಿಡಿಸಲು ಬಂದ ಯುವಕನ ಕುತ್ತಿಗೆಗೆ ಸ್ಕ್ರೂ ಡ್ರೈವರ್ ಚುಚ್ಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಗದಗ ನಗರದ ಜುಮ್ಮಾ ಮಸೀದಿ ಬಳಿ ಗುರುವಾರ (ಡಿ.26) ರಾತ್ರಿ ನಡೆದಿದೆ.
ಘಟನೆಯಲ್ಲಿ ಅನಿಲ್ ಮುಳ್ಳಾಳ್ (27) ಸೇರಿದಂತೆ ಆರು ಯುವಕರಿಗೆ ಗಾಯವಾಗಿದೆ. ಸ್ಕ್ರೂ ಡ್ರೈವರ್ ನಿಂದ ಇರಿತಕ್ಕೊಳಗಾಗಿರುವ ಅನಿಲ್ ಎಂಬಾತನನ್ನು ಧಾರವಾಡ ಎಸ್ ಡಿಎಂ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಐವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಅನಿಲ್, ಚೇತನ್ ಮುಳ್ಳಾಳ, ವಿನಾಯಕ್ ಮುಳ್ಳಾಳ, ಅಭಿಷೇಕ್ ಹರ್ಲಾಪುರ, ಕಿರಣ್ ಸಾಲಿಮಠ, ಶಾರುಖ್ ಮುಲ್ಲಾ ಎಂಬ ಯುವಕರಿಗೆ ಗಾಯಗಳಾಗಿವೆ.
ಘಟನೆಗೆ ನಿಖರವಾಗಿ ಕಾರಣ ತಿಳಿದು ಬಂದಿಲ್ಲ. ವೈಯಕ್ತಿಕ ದ್ವೇಷದ ಹಿನ್ನೆಲೆ ಈ ಹಲ್ಲೆ ನಡೆದಿರಬಹುದು ಎನ್ನಲಾಗಿದೆ. ಅನಿಲ್ ಎನ್ನುವ ಯುವಕ ಶ್ರೀರಾಮ ಸೇನೆಯ ಸಕ್ರಿಯ ಕಾರ್ಯಕರ್ತನಾಗಿದ್ದು, ಈತನನ್ನೇ ಟಾರ್ಗೆಟ್ ಮಾಡಿ ಹಲ್ಲೆ ನಡೆದಿರುವ ಬಗ್ಗೆ ಕುಟುಂಬಸ್ಥರು ಆರೋಪ ವ್ಯಕ್ತಪಡಿಸಿದ್ದಾರೆ.
ಧಾರವಾಡ ಎಸ್ ಡಿಎಂ ಆಸ್ಪತ್ರೆಗೆ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಭೇಟಿ ನೀಡಿ, ಅನಿಲ್ ನ ಆರೋಗ್ಯದ ಕುರಿತು ವಿಚಾರಿಸಿದ್ದಾರೆ.
ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.