1 ಎಕರೆ ಪ್ರದೇಶದಲ್ಲಿ 45ಕ್ಕೂ ಹೆಚ್ಚು ವಿವಿಧ ಪ್ರಬೇಧದ ಬಣ್ಣ ಬಣ್ಣದ ಚಿಟ್ಟೆಗಳು; ಅವಸಾನದ ಹಂತ ತಲುಪುತ್ತಿರುವ ಚಿಟ್ಟೆ ಸಂರಕ್ಷಣೆಗೆ ಐಸಿಎಆರ್ ಕ್ರಮ
ಬೆಂಗಳೂರು: ಬೆಳೆ ಉತ್ಪಾದನೆಯಲ್ಲಿ ರೈತ ಸ್ನೇಹಿಯಾಗಿ ಪರಿಸರದ ಸಮತೋಲನದ ಭಾಗವಾಗಿರುವ ಚಿಟ್ಟೆಗಳು ಅವಸಾನದ ಅಂಚಿಗೆ ತಲುಪುತ್ತಿವೆ. ಜೀವ ವೈವಿಧ್ಯತೆ ಸಂರಕ್ಷಿಸಿ, ಪೋಷಣೆ ಮಾಡುವ ನಿಟ್ಟಿನಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ(ಐಸಿಎಆರ್) ಇದರ ಭಾಗವಾಗಿ ಯಲಹಂಕದಲ್ಲಿ ನೂತನವಾಗಿ ಚಿಟ್ಟೆ ಉದ್ಯಾನವನ ನಿರ್ಮಿಸಿದೆ.
ಕಲುಷಿತ ವಾತಾವರಣದಲ್ಲಿ ಚಿಟ್ಟೆಗಳ ಸಂತತಿ ಕ್ಷೀಣಿಸುತ್ತಿದ್ದು, ಅವುಗಳ ಪ್ರಬೇಧಗಳನ್ನು ಸಂರಕ್ಷಿಸಿ, ಸಂತಾನೋತ್ಪತ್ತಿ ವೃದ್ಧಿಸಲು ಸುಮಾರು 1 ಎಕರೆ ವಿಸ್ತೀರ್ಣದಲ್ಲಿ ವಿಶೇಷವಾಗಿ ಚಿಟ್ಟೆ ಉದ್ಯಾನ ವಿನ್ಯಾಸಗೊಳಿಸಿದೆ. ಇಲ್ಲಿ ಸ್ಥಳೀಯ ಪ್ರದೇಶ ಮಾತ್ರವಲ್ಲದೇ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಂಡು ಬರುವ ಐಡಿಯಾ ಮಲಬಾರಿಕಾ, ಕೈಸರ್ ಇ-ಹಿಂದ್ ಸೇರಿದಂತೆ 45ಕ್ಕೂ ಹೆಚ್ಚು ವಿವಿಧ ಪ್ರಬೇಧದ ಬಣ್ಣ ಬಣ್ಣದ ಚಿಟ್ಟೆಗಳಿವೆ. ಕಡಿಮೆ ಜೀವಿತಾವಧಿ ಇರುವ ಚಿಟ್ಟೆಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಪೂರಕವಾಗಿ ಉದ್ಯಾನದಲ್ಲಿ ಬಟರ್ ಫ್ಲೈ ಬುಷ್, ಮಿಲ್ಕ್ ವಿಡ್ ಸೇರಿದಂತೆ ವಿವಿಧ ಜಾತಿಯ ಮಕರಂದದ ಸಸ್ಯಗಳನ್ನು ಬೆಳೆಸಲಾಗಿದೆ. ಮುಖ್ಯವಾಗಿ ಸಂಶೋಧನೆ ಮತ್ತು ಶಿಕ್ಷಣ ಕೇಂದ್ರಿಕರಿಸಿಕೊಂಡು ನಿರ್ಮಿಸಿರುವ ಉದ್ಯಾನ ಸಂಶೋಧನಾ ವಿದ್ಯಾರ್ಥಿಗಳ ಜೊತೆಗೆ ನೋಡುಗರನ್ನು ಆಕರ್ಷಿಸುತ್ತಿದೆ.
ಚಿಟ್ಟೆಗಳು ಆರೋಗ್ಯಕರ ಪರಿಸರದ ಸೂಚಕ ಮಾತ್ರವಲ್ಲದೆ, ಬೆಳೆಗಳ ಪರಾಗಸ್ಪರ್ಶಕ್ಕೆ ರೈತ ಸ್ನೇಹಿಯಾಗಿ ಕೊಡುಗೆ ನೀಡುತ್ತಿವೆ. ಇದು ಬೆಳೆ ಉತ್ಪಾದನೆ ಮತ್ತು ಪರಿಸರ ವ್ಯವಸ್ಥೆಯ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಜೀವವೈವಿಧ್ಯ ಸಂರಕ್ಷಣೆಯಲ್ಲಿ ಚಿಟ್ಟೆ ಉದ್ಯಾನವನ ನಿರ್ಮಾಣ ಒಂದು ಮೈಲಿಗಲ್ಲು ಸಾಧಿಸಿದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪ ಮಹಾನಿರ್ದೇಶಕ (ಬೆಳೆ ವಿಜ್ಞಾನ) ಡಾ.ಟಿ.ಆರ್.ಶರ್ಮಾ ಹೇಳಿದರು.
ಚಿಟ್ಟೆ ಉದ್ಯಾನವು ಶೈಕ್ಷಣಿಕ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಕೇಂದ್ರವಾಗಲಿದೆ. ಆವಸಾನದ ಹಂತ ತಲುಪುತ್ತಿರುವ ಚಿಟ್ಟೆಗಳನ್ನು ಸಂರಕ್ಷಣೆ ಮಾಡಿ ಉಳಿಸಿ ಪರಿಸರ ಸಮತೋಲನ ಕಾಪಾಡಬೇಕಿದೆ. ಆ ನಿಟ್ಟಿನಲ್ಲಿ ಚಿಟ್ಟೆಗಳ ಸಂತಾನೋತ್ಪತ್ತಿ ಹೆಚ್ಚಬೇಕು ಎಂದರು.
ಚಿಟ್ಟೆ ಸಂತಾನೋತ್ಪತ್ತಿ ವೃದ್ಧಿಸಲು ಯೋಜನೆ
ಬನ್ನೇರುಘಟ್ಟದಲ್ಲಿರುವ ಚಿಟ್ಟೆ ಉದ್ಯಾನ ಪ್ರವಾಸಿಗರನ್ನು ಕೇಂದ್ರಿಕರಿಸಿ ನಿರ್ಮಿಸಲಾಗಿದೆ. ಆದರೆ, ಯಲಹಂಕದಲ್ಲಿ ವಿನ್ಯಾಸಗೊಳಿಸಿರುವ ಉದ್ಯಾನ ಸಂಶೋಧನೆ ಮೂಲಕ ಚಿಟ್ಟೆಗಳ ಸಂತಾನೋತ್ಪತ್ತಿ ವೃದ್ಧಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಬೇರೆ ಬೇರೆ ಕಡೆಗಳಿಂದ ಚಿಟ್ಟೆಗಳನ್ನು ಹಿಡಿದು ತಂದು ಅವುಗಳಿಗೆ ಬೇಕಾದ ವಾತಾವರಣ ರೂಪಿಸಿ ಮಕರಂದದ ಸಸ್ಯಗಳನ್ನು ಆಕರ್ಷಿಸುವಂತೆ ಮಾಡಲಾಗಿದೆ. ಚಿಟ್ಟೆ ಜಾತಿಗಳ ಸಂತಾನೋತ್ಪತ್ತಿ ಹೆಚ್ಚಾದಲ್ಲಿ ಪರಾಗಸ್ಪರ್ಶದ ಮೂಲಕ ಆಹಾರ ಬೆಳೆ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ. ಭವಿಷ್ಯದ ಪೀಳಿಗೆಗೆ ಚಿಟ್ಟೆಗಳ ಸಂರಕ್ಷಣೆ ಮಾಡಬೇಕಿದೆ ಎಂದು ಕೀಟತಜ್ಞ ಹಾಗೂ ಚಿಟ್ಟೆ ಉದ್ಯಾನ ನೋಡೆಲ್ ಅಧಿಕಾರಿ. ಡಾ. ಗುಂಡಪ್ಪ ಮಾಹಿತಿ ನೀಡಿದರು.
ಚಿಟ್ಟೆಗಳ ಆವಾಸ ಸ್ಥಾನಗಳನ್ನು ಸಂರಕ್ಷಿಸಿ ಪರಿಸರದಲ್ಲಿ ರೈತ ಸ್ನೇಹಿ ಯಾದ ಚಿಟ್ಟೆಗಳ ಸಂರಕ್ಷಣೆ, ಮಹತ್ವ ತಿಳಿಸುವ ನಿಟ್ಟಿನಲ್ಲಿ ರೈತರು, ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯವಿದೆ. ಈ ಉದ್ಯಾನವು ಸಮುದಾಯ ವನ್ನು ಸೆಳೆಯಲಿದೆ.
●ಡಾ.ಮಹೇಶ್ ಯಂಡಿಗೆರೆ, ರಾಷ್ಟ್ರೀಯ ಕೀಟ ಸಂಪನ್ಮೂಲ ಬ್ಯೂರೋದ ಪ್ರಧಾನ ವಿಜ್ಞಾನಿ.
-ರಘು ಕೆ.ಜಿ