Advertisement

Bengaluru: ಇಬ್ಬರು ಮಕ್ಕಳ ಕೊಂದು ಅಮ್ಮನೂ ಆತ್ಮಹತ್ಯೆ!

01:02 PM Dec 13, 2024 | Team Udayavani |

ಚಾರ್ಟರ್ಡ್‌ ಅಕೌಂಟೆಂಟ್‌ ಆಗಿದ್ದ ದಂಪತಿ, ಇತ್ತೀಚೆಗೆ ಕೆಲಸ ಬಿಟ್ಟಿದ್ದ ಹೆಂಡತಿ ; ಕೊಡಿಗೇಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ

Advertisement

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಪತಿ ಜತೆ ಜಗಳ ಮಾಡಿಕೊಂಡು ಕೊಪಗೊಂಡಿದ್ದ ಪತ್ನಿ, ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆಗೈದು, ಬಳಿಕ ಡೆತ್‌ ನೋಟ್‌ ಬರೆದಿಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕೊಡಿಗೇಹಳ್ಳಿಯಲ್ಲಿ ನಡೆದಿದೆ.

ಬಾಲಾಜಿನಗರ ನಿವಾಸಿ ಕುಸುಮಾ (35) ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮೊದಲು ತಮ್ಮ ಪುತ್ರ ಶ್ರೇಯಸ್‌ (6) ಮತ್ತು ಪುತ್ರಿ ಚಾರ್ವಿ(1 ವರ್ಷ 9 ತಿಂಗಳು) ಅವರನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾಳೆ.

ಈ ಸಂಬಂಧ ಪತಿ ಸುರೇಶ್‌ ನೀಡಿದ ದೂರಿನ ಮೇರೆಗೆ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ತುಮಕೂರಿನ ಮಧುಗಿರಿ ಮೂಲದ ಸುರೇಶ್‌ (40) ಕುಸಮಾರನ್ನು 9 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದರು. ದಂಪತಿ ಕುಟುಂಬ ಸಮೇತ ಕೊಡಿಗೇಹಳ್ಳಿಯ ಬಾಲಾಜಿನಗರದ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ವೊಂದರಲ್ಲಿ ವಾಸವಾಗಿದ್ದರು. ವೈಟ್‌ ಫೀಲ್ಡ್‌ನ ಖಾಸಗಿ ಕಂಪನಿಯಲ್ಲಿ ಇಬ್ಬರು ಚಾರ್ಟೆಡ್‌ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಚಿಕ್ಕ ಮಕ್ಕಳಿದ್ದ ಕಾರಣ ಕುಸುಮಾ ಕೆಲಸ ಬಿಟ್ಟು ಮನೆಯಲ್ಲೇ ಇರುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಸುರೇಶ್‌ ಬುಧವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಮಕ್ಕಳನ್ನು ಕೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸುರೇಶ್‌ ಅವರೇ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ.

Advertisement

ಇಗೋ ಸಮಸ್ಯೆ: ಪತಿ ಸುರೇಶ್‌, ತಾನು ಹೇಳಿದಂತೆಯೇ ಕೇಳಬೇಕೆಂದು ಒತ್ತಾಯಿಸುತ್ತಿದ್ದರು. ಆದರೆ, ಕುಸುಮಾ ಅದನ್ನು ತಿರಸ್ಕರಿಸುತ್ತಿದ್ದರು ಎಂದು ಹೇಳಲಾಗಿದೆ. ಹೀಗೆ ದಂಪತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಪದೇ ಪದೆ ಗಲಾಟೆ ನಡೆಯುತ್ತಿತ್ತು ಎಂಬುದು ಸ್ಥಳೀಯರಿಂದ ಗೊತ್ತಾಗಿದೆ. ಎರಡು ದಿನಗಳ ಹಿಂದೆಯೂ ದಂಪತಿ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಿಂದ ಕುಸುಮಾ ನೊಂದುಕೊಂಡಿದ್ದರು. ಇದೇ ವಿಚಾರಕ್ಕೆ ಮಕ್ಕಳನ್ನು ಕೊಲೆ ಮಾಡಿ, ಕುಸುಮಾ ಅವರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಮೂಲಗಳು ಹೇಳಿವೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸುರೇಶ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಧನ್ಯವಾದ, ನಿನ್ನ ಗರ್ವ ಗೆದ್ದಿದೆ: ಪತ್ನಿ ಡೆತ್‌ನೋಟ್‌! ಇನ್ನು ಘಟನಾ ಸ್ಥಳದಲ್ಲಿ ಪತ್ತೆಯಾದ ಡೆತ್‌ನೋಟ್‌ನಲ್ಲಿ “ನನ್ನ ಸಾವಿಗೆ ನಾನೇ ಕಾರಣ. ಕಂಗ್ರ್ಯಾಟ್ಸ್‌ ಯುವರ್‌ ಇಗೋ ವಿನ್‌'(ಧನ್ಯವಾದಗಳು, ನಿನ್ನ ಗರ್ವ ಗೆದ್ದಿದೆ) ಎಂದು ಬರೆದಿದ್ದಾರೆ. ಜತೆಗೆ ಇದೇ ದಿನ ನಿಮ್ಮ ತಾಯಿ ಮೃತಪಟ್ಟಿದ್ದರು. ಇಂದು ನಾನು ಮತ್ತು ನನ್ನ ಮಕ್ಕಳು ಸಾಯುತ್ತಿದ್ದೇವೆ. ಈ ಘಟನೆಗಳು ನಿಮಗೆ ಶಾಶ್ವತವಾಗಿ ನೆನಪಿರಬೇಕು ಎಂಬುದು ಸೇರಿ ಇನ್ನು ಕೆಲ ವಿಚಾರಗಳನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ್ದಾರೆ ಎಂದು ಹೇಳಲಾಗಿದೆ. ಮರಣ ಪತ್ರದ ನೈಜತೆ ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್ಎಸ್‌ಎಲ್‌) ಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next