Advertisement

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

04:00 PM Dec 28, 2024 | Team Udayavani |

ಮಂಡ್ಯ/ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಯಲ್ಲಿ ಕೆಲ ತಿಂಗಳಿನಿಂದ ಸ್ತಬ್ದವಾಗಿದ್ದ ದರೋಡೆಕೋರರು ಮತ್ತೆ ಆ್ಯಕ್ಟೀವ್‌ ಆಗಿದ್ದಾರೆ. ಹಿಂದೆ ಒಂಟಿ ಕಾರು, ಬೈಕ್‌ಗಳನ್ನು ಟಾರ್ಗೆಟ್‌ ಮಾಡಿ ದರೋಡೆ ನಡೆಸಲಾಗುತ್ತಿತ್ತು. ಇದೀಗ ಕಾರಿನ ಮೇಲೆ ಮೊಟ್ಟೆ ಎಸೆದು ದರೋಡೆ ಮಾಡುವ ಗ್ಯಾಂಗ್‌ ಹುಟ್ಟಿಕೊಂಡಿದೆ.

Advertisement

ಸೋಮವಾರ ರಾತ್ರಿ ಬೂದನೂರು ಗ್ರಾಮದ ಹೆದ್ದಾರಿಯ ಸರ್ವೀಸ್‌ ರಸ್ತೆಯಲ್ಲಿ ಮಂಡ್ಯ ನಗರದ ಗುತ್ತಲು ನಿವಾಸಿ ಬೆಲ್ಲದ ವ್ಯಾಪಾರಿ ವಿನೋದ್‌, ಮದ್ದೂರಿನಿಂದ ಮಂಡ್ಯಕ್ಕೆ ಬರುತ್ತಿದ್ದಾಗ ಬೂದನೂರು ಬಳಿ ಮೂರು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು, ಕಾರಿನ ಗಾಜಿನ ಮೇಲೆ ಮೊಟ್ಟೆ ಎಸೆದಿದ್ದಾರೆ. ಕೂಡಲೇ ವಿನೋದ್‌ ವೈಪರ್‌ ಆನ್‌ ಮಾಡಿದಾಗ ಇಡೀ ಗಾಜು ಮಸುಕಾಗಿದ್ದು, ಕಾರು ನಿಲ್ಲಿಸಿ ಗಾಜು ಸ್ವಚ್ಛ ಮಾಡಲು ಮುಂದಾದಾಗ ಹಿಂದಿನಿಂದ ಬಂದ ದುಷ್ಕರ್ಮಿಗಳು ವಿನೋದ್‌ ಕಣ್ಣಿಗೆ ಖಾರದಪುಡಿ ಎರಚಿ, ಹಲ್ಲೆ ನಡೆಸಿ 55 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು.

ಮಂಡ್ಯ ವ್ಯಾಪ್ತಿಯಲ್ಲಿ 14 ಕೇಸ್‌

ಹಿಂದೆಯೂ ಬೆಂಗಳೂರು-ಮೈಸೂರು ಹೆದ್ದಾರಿ ವ್ಯಾಪ್ತಿಯ ರಾಮನಗರ ಹಾಗೂ ಮಂಡ್ಯ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣಗಳು ನಡೆದಿದ್ದವು. ಮಂಡ್ಯ ವ್ಯಾಪ್ತಿಯಲ್ಲಿಯೇ ದಾಖಲಾದ ಸುಮಾರು 14 ಕೇಸ್‌ನಲ್ಲಿ 9 ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು. ಅದಾದ ಬಳಿಕ ದರೋಡೆ ಪ್ರಕರಣಗಳು ಕಡಿಮೆಯಾಗಿದ್ದವು.

ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ 12ರಲ್ಲಿ 11 ಪ್ರಕರಣಗಳನ್ನು ಬೇಧಿಸಲಾಗಿದ್ದು, ಆರೋಪಿಗಳ ಬಂಧಿಸಿದ ನಂತರ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ. ಆದರೆ, ಡಿ.23ರ ಸೋಮವಾರ ರಾತ್ರಿ ನಡೆದ ಘಟನೆ ಗಮನಿಸಿದರೆ ಹಳೇ ದರೋಡೆಕೋರರ ಜೊತೆಗೆ “ಮೊಟ್ಟೆ ಗ್ಯಾಂಗ್‌’ ಹುಟ್ಟಿಕೊಂಡಿದೆ ಎನ್ನಲಾಗುತ್ತಿದೆ.

Advertisement

ಎಕ್ಸ್‌ ಪ್ರೆಸ್‌ವೇ ಸರ್ವೀಸ್‌ ರಸ್ತೆಗಳಿಗಿಲ್ಲ ವಿದ್ಯುತ್‌ ದೀಪ

ಹೆದ್ದಾರಿಯಲ್ಲಿ ಕನಿಷ್ಠ ಪಕ್ಷ ಶೌಚಾಲಯಗಳನ್ನು ನಿರ್ಮಿಸಿಲ್ಲ. ಇದು ದರೋಡೆಗೆ ಅನುಕೂಲ ಮಾಡಿಕೊಡುತ್ತಿದೆ. ಶೌಚಾಲಯಕ್ಕೆಂದು ವಾಹನ ಸವಾರರು ನಿಲ್ಲಿಸಿದಾಗ ಏಕಾಏಕಿ ದರೋಡೆಕೋರರು ದಾಳಿ ಮಾಡುವ ಘಟನೆಗಳು ನಡೆದಿವೆ. ಹೆದ್ದಾರಿಯ ಹಾಗೂ ಸರ್ವೀಸ್‌ ರಸ್ತೆಯ ಬಹುತೇಕ ಕಡೆ ವಿದ್ಯುತ್‌ ದೀಪಗಳ ಅಳವಡಿಸದೆ ಇರುವುದರಿಂದ ಕತ್ತಲು ಆವರಿಸಿದೆ. ಅಂಡರ್‌ ಪಾಸ್‌ಗಳಲ್ಲೂ ವಿದ್ಯುತ್‌ ದೀಪಗಳಿಲ್ಲ. ಕತ್ತಲು ಇರುವ ಕಡೆಯಲ್ಲೇ ದರೋಡೆಕೋರರು ಅಡಗಿ ಕುಳಿತು ಕಾರು, ಬೈಕ್‌ಗಳನ್ನು ಟಾರ್ಗೆಟ್‌ ಮಾಡಿಕೊಂಡು ದಾಳಿ ಮಾಡಿ ದರೋಡೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next