ಕುರುಗೋಡು: ಸಿರಿಗೇರಿ ಗ್ರಾಮದ ಜನತಾ ಕಾಲೋನಿಯಲ್ಲಿ ಸಾರ್ವಜನಿಕರು ನಿತ್ಯ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಸಾರ್ವಜನಿಕರ ನಲ್ಲಿಗಳಿಗೆ ನಿತ್ಯ ನೀರು ಪೂರೈಸಲಾಗುತ್ತಿದೆ. ಆದರೆ ಸಂಪರ್ಕ ಹೊಂದಿರುವ ನಲ್ಲಿಗಳಲ್ಲಿ ನೀರಿನ ಸೆಲೆ ಕಡಿಮೆಯಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸರಿಯಾಗಿ ನೀರು ಸಿಗದೆ ನಿತ್ಯ ಸಮಸ್ಯೆಯಾಗಿದೆ.
ಈಗಾಗಲೇ ಗ್ರಾಮದಲ್ಲಿ ನಾಲ್ಕು ಬೋರ್‌ಗಳನ್ನು ಕೊರೆಸಿದ್ದರೂ ನೀರು ಬೀಳದೆ ತೊಂದರೆಯಾಗಿದೆ. ಗ್ರಾಮದ ಜನತಾ ಮತ್ತು ಆಚಾರಿ ಕಾಲೋನಿ ಜನರಿಗೆ ಅನುಕೂಲವಾಗುವಂತೆ ಹುಚ್ಚೇಶ್ವರ ನಗರ ಸೇರಿ ಶಾಸಕರ ಅನುದಾನದಡಿ ಈಗಾಗಲೇ 1 ಲಕ್ಷ ಲೀಟರ್ ಸಾಮಾರ್ಥ್ಯದ 2 ಒವರ್ ಟ್ಯಾಂಕ್ ಮಂಜೂರಾಗಿವೆ. ಹುಚ್ಚೇಶ್ವರ ನಗರದಲ್ಲಿ ಈಗಾಗಲೇ ಓವರ್ ಟ್ಯಾಂಕ್ ಕಾಮಗಾರಿ ಸಿದ್ಧಗೊಂಡು ಇನ್ನೇನು ನೀರು ಸಂಗ್ರಹಣೆ ಮಾಡಿ ಪೂರೈಸುವ ಹಂತ ತಲುಪಿದೆ.
ಜನತಾ ಕಾಲೋನಿಗೆ ಮಂಜೂರಾದ ಓವರ್ ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಸಮಸ್ಯೆ ಎದುರಾಗಿತ್ತು. ನಿಗದಿ ಮಾಡಿದ ಜಾಗದಲ್ಲಿ ಟ್ಯಾಂಕ್‌ನ ಬೆಡ್ ಕಾಂಕ್ರಿಟ್ ಹಾಕುವುದಕ್ಕೆ ಮುಂದಾಗಿ ಕಲ್ಲುಗಳು ಬರುತ್ತಿವೆ ಎಂದು ಕಾಮಗಾರಿ ವಿಳಂಬ ಮಾಡಿದ್ದಾರೆ. ಇನ್ನೂ ಜನತಾ ಕಾಲೋನಿ ನಿವಾಸಿಗಳು ಸುಮಾರು ಹತ್ತಾರು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತ ಬರುತ್ತಿದ್ದಾರೆ. ಈ ಸಮಸ್ಯೆಯಿಂದ ಮುಕ್ತಿ ಹೊಂದುವುದು ಯಾವಾಗ ಎಂಬುದು ಜನರ ಪ್ರಶ್ನೆಯಾಗಿದೆ. ಸಾರ್ವಜನಿಕರ ಕುಡಿಯುವ ನೀರಿನ ಕೆರೆಯಿಂದ ನಲ್ಲಿಗಳಿಗೆ ನೀರು ಪೂರೈಸಿದರೆ ಜನತಾ ಕಾಲೋನಿ ನಿವಾಸಿಗಳಿಗೆ ಸರಿಯಾಗಿ ತಲುಪುವುದಿಲ್ಲ. ಇದರಿಂದ ಜನ ಪರದಾಡುವಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಗ್ರಾಪಂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿ ನಲ್ಲಿಗಳಿಗೆ ಮೋಟರ್ ಅಳವಡಿಸುವುದನ್ನು ಕಡಿತಗೊಳ್ಳಿಸುವಂತೆ ತಿಳಿಸಿದರು. ಇಂದಿನವರೆಗೂ ಅತ್ತಕಡೆ ತಲೆ ಹಾಕಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಲಾದ್ರೂ ನಲ್ಲಿಗಳಿಗೆ ಮೋಟರ್ ಅಳವಡಿಸುವುದನ್ನು ಅಧಿಕಾರಿಗಳು ನಿಲ್ಲಿಸಿ ಸಾರ್ವಜನಿಕರಿಗೆ ಸರಿಯಾಗಿ ನೀರು ಪೂರೈಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಜನತಾ ಕಾಲೋನಿಯಲ್ಲಿ ಓವರ್ ಟ್ಯಾಂಕ್ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಅದು ವಿಳಂಬವಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣ ಸ್ಥಳೀಯ ಕಾಯಕರ್ತರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ಹತ್ತಿರ ಮಾತನಾಡಿ ವ್ಯವಸ್ಥೆ ಮಾಡಿಕೊಡಲಾಗುವುದು. ಈ ವರದಿ ಬಗ್ಗೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಮಾಡಿಸುತ್ತೇನೆ.
ಎಂ.ಎಸ್. ಸೋಮಲಿಂಗಪ್ಪ,
ಶಾಸಕರು ಸಿರುಗುಪ್ಪ
ಜನತಾ ಕಾಲೋನಿಯಲ್ಲಿ ನಿರ್ಮಾಣವಾಗಬೇಕಾದ ಓವರ್ ಟ್ಯಾಂಕ್ ಕಾಮಗಾರಿ ಅಲ್ಲಿ ಕಲ್ಲುಬಂಡೆಗಳು ಬಂದ ಕಾರಣ ಎಪಿಎಂಸಿ ಅವರಣದಲ್ಲಿ ಸ್ಥಾಪಿಸಲು ಎಲ್ಲ ಕಾರ್ಯ ನಡೆಯುತ್ತಿದೆ. ನಲ್ಲಿಗಳಿಗೆ ಮೋಟರ್ ಅಳವಡಿಸುವುದನ್ನು ತಕ್ಷಣವೇ ನಿಲ್ಲಿಸಿ ಎಲ್ಲ ನಿವಾಸಿಗಳಿಗೆ ನೀರು ಸರಬರಾಜು ಮಾಡುತ್ತೇವೆ.
ಯು.ರಾಮಪ್ಪ,
ಪಿಡಿಒ ಸಿರಿಗೇರಿ
ಸುಧಾಕರ್ ಮಣ್ಣೂರು