ಕೊಪ್ಪಳ: ತಾಲೂಕಿನಲ್ಲಿ ಕಳೆದ ತಿಂಗಳ ಹಿಂದಷ್ಟೇ ಸುರಿದ ಮಳೆಯಿಂದ ನಗರ ಸೇರಿ ಗ್ರಾಮೀಣ ಭಾಗದ ಬಹುಪಾಲು ರಸ್ತೆಗಳು ಹಾಳಾಗಿ ಹೋಗಿವೆ. ಜನತೆ ಜೀವದ ಹಂಗು ತೊರೆದು ನಿತ್ಯ ಪ್ರಯಾಣಿಸುವಂತಹ ಪರಿಸ್ಥಿತಿ ಎದುರಾಗಿದೆ. ಜನರ ಕಣ್ಣಲ್ಲಿ ರಸ್ತೆಗಳಲ್ಲಿ ನಿತ್ಯ ನರಕ ದರ್ಶನವೇ ಕಾಣಿಸುತ್ತಿದೆ.
Advertisement
ಹೌದು. ಇದಕ್ಕೆ ಸಾಕ್ಷಿ ಎಂಬಂತೆ ಕೊಪ್ಪಳ-ಅಳವಂಡಿ ರಸ್ತೆ, ಹಲಗೇರಿ-ಹಿರೇ ಸಿಂದೋಗಿ ರಸ್ತೆ, ಕೊಪ್ಪಳ-ಕಿನ್ನಾಳ ರಸ್ತೆ,ಗಿಣಗೇರಿ-ಬಗನಾಳ ರಸ್ತೆ ಹೀಗೆ ಹಲವಾರು ರಸ್ತೆಗಳು ಹದಗೆಟ್ಟು ಹಳ್ಳ ಹಿಡಿದಿವೆ. ರಸ್ತೆಗಳ ಅದ್ವಾನ ಸ್ಥಿತಿ ನೋಡಿದ ಜನತೆ ಏನಪ್ಪಾ ಇದು ಎಂಥಾ ಪರಿಸ್ಥಿತಿ ಬಂತು ನಮಗೆ ಎಂದು ವೇದನೆ ಪಡುವಂತಾಗಿದೆ.
Related Articles
Advertisement
ಕೇವಲ ಈ ರಸ್ತೆಗಳು ಮಾತ್ರವಲ್ಲ ಗ್ರಾಮೀಣ ಭಾಗದ ಬಹುಪಾಲು ರಸ್ತೆಗಳು ಹಾಳಾಗಿ ಹೋಗಿವೆ. ಹಲವು ಪ್ರಯಾಣಿಕರು ನಿತ್ಯವೂ ತಗ್ಗು ದಿನ್ನೆಗಳು ಇರುವ ರಸ್ತೆಗಳಲ್ಲಿ ಜೀವಭಯದಲ್ಲೇ ಸಂಚರಿಸುವ ಸ್ಥಿತಿ ಬಂದೊದಗಿದೆ. ಅದೆಷ್ಟೋ ಜನರು ಹದಗೆಟ್ಟ ರಸ್ತೆಗಳಲ್ಲಿ ಬಿದ್ದು ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ ನಿದರ್ಶನಗಳು ನಡೆದಿವೆ.
ಹೊದ್ದು ಮಲಗಿದ ಪಿಡಬ್ಯ್ಲೂಡಿ: ತಾಲೂಕಿನ ಗ್ರಾಮೀಣ ಭಾಗದ ಮುಖ್ಯ ರಸ್ತೆಗಳ ನಿರ್ಮಾಣದ ಹೊಣೆ ಪಿಡಬ್ಯ್ಲೂಡಿ ಅವರದ್ದಾಗಿದೆ. ಪಿಆರ್‌ಇಡಿ ಅವರು ಕೇವಲ ದುರಸ್ತಿ ಕಾರ್ಯ ಮಾತ್ರ ನಡೆಸುತ್ತಾರೆ. ಆದರೆ ಈ ಎಲ್ಲ ಅಧಿಕಾರಿಗಳು ರಸ್ತೆಗಳ ಜವಬ್ದಾರಿ ಹೊತ್ತಿದ್ದರೂ ಹೊದ್ದು ಮಲಗಿದ್ದಾರೆ. ಇವರಿಗೆ ಗ್ರಾಮಗಳ ರಸ್ತೆಗಳ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ಇಲ್ಲಿ ಯಾರಿಗೆ ಯಾರ ಭಯವೂ ಇಲ್ಲದಂತಾದ ಪರಿಣಾಮ ಕೊಪ್ಪಳದ ರಸ್ತೆಗಳು ನರಕಕ್ಕೆ ದಾರಿಗಳು ಎಂದೆನ್ನುವ ಸ್ಥಿತಿಗೆ ಬಂದೊದಗಿದೆ.
ರಸ್ತೆಗಳ ಬಗ್ಗೆ ಸಿಎಂಗೂ ಪ್ರಶ್ನೆ: ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಮಂತ್ರಿ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರೂ ಅವರು ಬರಿ ಎಲ್ಲ ರಸ್ತೆಗಳ ಅಭಿವೃದ್ಧಿ ಮಾಡಲಿದ್ದೇವೆ ಎಂದೆನ್ನುವ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ. ಆದರೆ ಮಾತಿಗೆ ತಕ್ಕಂತೆ ಕೃತಿ ಕೆಲಸ ಮಾಡುತ್ತಿಲ್ಲ. ಈಚೆಗೆ ಕವಲೂರು ಗ್ರಾಮದ ಜನರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಜನ ಸಂಚಾರಕ್ಕೆ ರಸ್ತೆ ಹದಗೆಟ್ಟಿದೆ ದುರಸ್ತಿಮಾಡಿ ಕೊಡಿ ಎಂದು ಪ್ರತಿಭಟನೆ ನಡೆಸಿದರೆ, ಅಲ್ಲಿನ 14 ಜನರ ಮೇಲೆ ಪ್ರಕರಣ ದಾಖಲಾದ ನಿದರ್ಶನವೂ ಇದೆ. ಕೊಪ್ಪಳದ ಪರಿಸ್ಥಿತಿ ಎಲ್ಲಿಗೆ ಬಂತು ಎಂದು ಜನರೇ ಜನಪ್ರತಿನಿಧಿಗಳು, ಅಧಿಕಾರಿಗಳ ವೈಖರಿ ಬಗ್ಗೆ ಆಕ್ರೋಶದ ಮಾತು ವ್ಯಕ್ತಪಡಿಸುವ ಸಂದರ್ಭ ಎದುರಾಗಿವೆ. ತಾಲೂಕಿನ ಅಳವಂಡಿ ರಸ್ತೆಯ ಸ್ಥಿತಿ ಹೇಳತೀರದಾಗಿದೆ. ಈ ರಸ್ತೆ ನಿರ್ಮಿಸುವೆವು ಎಂದು ಭಾಷಣ ಮಾಡುತ್ತಾರೆ. ಆದರೆ ಕಾಮಗಾರಿ ಆರಂಭ ಮಾಡುತ್ತಿಲ್ಲ. ನಾವೇ ಜೀವ ಕೈಯಲ್ಲಿಡಿದು ಸಂಚರಿಸುವ ಸ್ಥಿತಿ ಬಂದಿದೆ. ಯಾರೂ ಹೇಳೋರಿಲ್ಲ.. ಕೇಳೋರಿಲ್ಲ ಎನ್ನುವ ಪರಿಸ್ಥಿತಿ ಬಂದಿದೆ.
*ಸಂಗಮೇಶ ಅಳವಂಡಿ, ಗ್ರಾಮಸ್ಥ ಕೊಪ್ಪಳ-ಕಿನ್ನಾಳ ರಸ್ತೆ ಬಗ್ಗೆ ಹಲವು ಬಾರಿ ಹೋರಾಟ ಮಾಡಿದೆ. ನಾವೇ ರಸ್ತೆಗೆ ಮರಂ ಹಾಕಿ ದುರಸ್ತಿ ಮಾಡಿದ್ದೇವೆ. ಆದರೂ
ನಮ್ಮೂರು ರಸ್ತೆಯ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ. ರಸ್ತೆ ನಿರ್ಮಿಸುವೆವು ಎಂದು ಕುಂಟು ನೆಪ ಹೇಳುತ್ತಲೇ ಇದ್ದಾರೆ. ಆದರೆ ರಸ್ತೆ ನಿರ್ಮಾಣ ಬಗ್ಗೆ ಕಾಳಜಿ ವಹಿಸುತ್ತಿಲ್ಲ.
ಮೌನೇಶ ಕಿನ್ನಾಳ, ಗ್ರಾಮದ ಯುವಕ *ದತ್ತು ಕಮ್ಮಾರ