Advertisement

Mangalore University: ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಹೊರೆ!

03:57 AM Nov 13, 2024 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ- ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಸಹಿತ ಎಲ್ಲ ರೀತಿಯ ಶುಲ್ಕ ಗಣನೀಯ ವಾಗಿ ಏರಿಕೆಯಾಗಿದೆ.

Advertisement

ಮಂಗಳೂರು ವಿ.ವಿ.ಯು ಆರ್ಥಿಕ ಸಂಕಷ್ಟದಿಂದ ಪಾರಾಗಲು ವಿವಿಧ ಸೂತ್ರಗಳನ್ನು ಪಾಲಿಸಿಕೊಂಡು ಬಂದಿದ್ದು, ಇದರಂತೆ ಶುಲ್ಕ ಏರಿಸುವ ಮೂಲಕ ವಿ.ವಿ. ಆರ್ಥಿಕ ಬಲ ಹೆಚ್ಚಿಸುವ ಯೋಚನೆಯಲ್ಲಿದೆ. ಆದರೆ ಪರೀಕ್ಷಾ ಶುಲ್ಕದ ಪ್ರಮಾಣ ಸುಮಾರು ಶೇ. 50ರಷ್ಟು ಏರಿಕೆ ಆಗಿರುವುದರಿಂದ ವಿದ್ಯಾರ್ಥಿಗಳನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದಂತಾಗಿದೆ.

ಕಳೆದ ವರ್ಷ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕದ ಹೆಸರಿನಲ್ಲಿ 670 ರೂ. ವಸೂಲಿ ಮಾಡಲಾಗಿದ್ದರೂ ಇದು ವರೆಗೆ ವಿಶ್ವವಿದ್ಯಾನಿಲಯವು ಅಂಕ ಪಟ್ಟಿ ನೀಡಿಲ್ಲ. ಈ ವರ್ಷ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕದ ಹೆಸರಿನಲ್ಲಿ 1,200 ರೂ. ವಸೂಲಾತಿ ಮಾಡುತ್ತಿದ್ದಾರೆ. ಇದು ವಿದ್ಯಾರ್ಥಿಗಳನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ’ ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಯೋರ್ವರು “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಈಗ ಏರಿಕೆ ಮಾಡಿರುವ ಪರೀಕ್ಷಾ ಶುಲ್ಕದಲ್ಲಿ 500 ರೂ.ಗಳನ್ನು “ಅಂಕಪಟ್ಟಿ ಶುಲ್ಕದ ಬಾಬ್ತು’ ಎಂದು ಪಡೆಯಲಾಗುತ್ತಿದೆ. ಅಂಕಪಟ್ಟಿ ನೀಡುವ ಪದ್ಧತಿ ಈಗ ಇಲ್ಲ. ಆದರೂ ಶುಲ್ಕ ಪಡೆಯುವುದು ಯಾವ ನ್ಯಾಯ ಎಂಬುದು ವಿದ್ಯಾರ್ಥಿಗಳ ವಾದ. ವಿ.ವಿ.ಯ ಆರ್ಥಿಕ ಸಂಕಷ್ಟ ಸರಿಪಡಿಸಲು ಮಕ್ಕಳ ಮೇಲೆ ಹೊರೆ ಹೊರಿಸುವುದು ಸಮಂಜಸವಲ್ಲ ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ವರ್ಷ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿತ ಶುಲ್ಕ, ಪರೀಕ್ಷಾ ಶುಲ್ಕ, ಮರುಮೌಲ್ಯಮಾಪನ ಶುಲ್ಕಗಳ ಏರಿಕೆ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದೆ. ಪ್ರಸಕ್ತ ಸಾಲಿನ ಶುಲ್ಕದಲ್ಲಿ ಶೇ. 50ರಿಂದ 60ರಷ್ಟು ಏರಿಕೆ ಮಾಡಿರುವುದು ವಿ.ವಿ.ಯ ವಿದ್ಯಾರ್ಥಿ ವಿರೋಧಿ ನೀತಿಯನ್ನು ತೋರಿಸುವಂತಿದೆ ಎಂದು ಎಬಿವಿಪಿ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದು, ವಿ.ವಿ. ಕುಲಪತಿಗೆ ಮನವಿ ಸಲ್ಲಿಸಿದೆ.

Advertisement

“ಸರಕಾರದ ಏಕರೂಪದ ಶುಲ್ಕದ ಇತಿಮಿತಿಯೊಳಗೆ ಶುಲ್ಕದಲ್ಲಿ ಕೊಂಚ ಪರಿಷ್ಕರಣೆ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿ ಪರಾಮರ್ಶೆ ನಡೆಸಿದ ಅನಂತರವೇ ಪರಿಷ್ಕರಣೆ ಮಾಡಲಾಗಿದೆ. ಸರಕಾರದ ಆದೇಶದಂತೆ ಪ್ರತೀ ವರ್ಷ ಶೇ. 10ರಷ್ಟು ಶುಲ್ಕ ಏರಿಕೆ ಮಾಡಬಹುದು ಎಂಬ ನಿಯಮ ಇದೆ. ಜತೆಗೆ ಕೊರೊನಾ ಅನಂತರ ಮಂಗಳೂರು ವಿ.ವಿ.ಯಲ್ಲಿ ಯಾವುದೇ ಶುಲ್ಕ ಪರಿಷ್ಕರಣೆ ಮಾಡಿಲ್ಲ. ಹೀಗಾಗಿ ಈಗ ಏರಿಕೆ ಮಾಡುವ ಅನಿವಾರ್ಯ ಬಂದಿದೆ’ ಎನ್ನುತ್ತಾರೆ ಪರೀಕ್ಷಾಂಗ ಕುಲಸಚಿವ ಪ್ರೊ| ದೇವೇಂದ್ರಪ್ಪ.

ಶುಲ್ಕ ಪರಿಷ್ಕರಣೆ ಅನಿವಾರ್ಯ
“ವಿ.ವಿ.ಯ ಖರ್ಚು ವೆಚ್ಚ, ಯುಯುಸಿಎಂಎಸ್‌ನಿಂದ ಖರ್ಚು ವೆಚ್ಚಗಳು ಅಧಿಕವಾಗಿದೆ. ಸರಕಾರದ ಅನುದಾನ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಹಕಾರವನ್ನು ಪಡೆಯುವ ನೆಲೆಯಿಂದ ಶುಲ್ಕ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ. ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ನಮ್ಮ ಶುಲ್ಕದ ಪ್ರಮಾಣ ಕಡಿಮೆ ಇದೆ. ಸರಕಾರ ಈಗಾಗಲೇ ಯುಯುಸಿಎಂಎಸ್‌ನಲ್ಲಿ ಶುಲ್ಕ ನಿಗದಿ ಮಾಡಿದೆ. ಆದರೆ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ನಮ್ಮ ಶುಲ್ಕವಿದೆ. ಮುಂದಿನ ವರ್ಷದಿಂದ ಸರಕಾರವೇ ಏಕರೂಪದ ಪ್ರವೇಶ ಹಾಗೂ ಏಕರೂಪದ ಶುಲ್ಕ ನಿಯಮ ಜಾರಿಗೆ ತರಲಿದೆ.” – ಪ್ರೊ| ಪಿ.ಎಲ್‌. ಧರ್ಮ, ಕುಲಪತಿ, ಮಂಗಳೂರು ವಿ.ವಿ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next