ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವರಿಷ್ಠರಲ್ಲಿ ಒಬ್ಬರಾದ ಸುರೇಶ್ ಭಯ್ಯಾಜಿ ಜೋಷಿ ಅವರು ಶುಕ್ರವಾರ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರದರ್ಶನ ಪಡೆದ ಬಳಿಕ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಆಶೀರ್ವಾದ ಪಡೆದುಕೊಂಡರು.
ದೇಶಾದ್ಯಂತ ನಡೆಯುತ್ತಿರುವ ಕೆಲವು ಅಚ್ಚರಿಯ ಘಟನೆಗಳು, ಬಾಂಗ್ಲಾ ದೇಶೀಯರ ಅಕ್ರಮ ನುಸುಳುಕೋರರ ಸಮಸ್ಯೆ, ಮಣಿಪುರದಲ್ಲಿ ಶಾಂತಿ ಸುರಕ್ಷೆ, ವಕ್ಫ್ ಬೋರ್ಡ್ ಅವಾಂತರಗಳು ತರುತ್ತಿರುವ ಆತಂಕ, ಕಾಶ್ಮೀರದ ಭಯೋತ್ಪಾದನೆ ಸಹಿತ ಹಲವು ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.
ಇಂತಹ ಸಮಸ್ಯೆಗಳ ಪರಿಹಾರಕ್ಕೆ ಸಂಘದ ನಿಲುವು, ಸಂಘದ ಶತಾಬ್ದಿಯ ಕಾರ್ಯಕ್ರಮಗಳು, ಮುಂದಿನ ದಿನಗಳಲ್ಲಿ ಸನಾತನ ಧರ್ಮ ಮತ್ತು ರಾಷ್ಟ್ರದ ಹಿತರಕ್ಷಣೆಯ ಕೆಲಸಗಳಲ್ಲಿ ಸಾಧುಸಂತರು, ಮಠಾಧೀಶರು ವಹಿಸಬೇಕಾದ ಮಹತ್ವದ ಭೂಮಿಕೆಯ ಕುರಿತು ಭಯ್ಯಾಜಿಯವರು ವಿಚಾರ ವಿನಿಮಯ ನಡೆಸಿದರು.
ಪುತ್ತಿಗೆ ಶ್ರೀಪಾದರು ಹಮ್ಮಿಕೊಂಡಿರುವ ಕೋಟಿ ಗೀತಾ ಲೇಖನ ಯಜ್ಞದಂಥಹ ಅಭಿಯಾನಗಳು ಸಮಾಜದಲ್ಲಿ ಉದಾತ್ತಮೌಲ್ಯಗಳ ಸ್ಥಿರೀಕರಣಕ್ಕೆ ನೆರವಾಗಬಹುದೆಂದು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಭಯ್ಯಾಜಿಯವರಿಗೆ ಶ್ರೀಪಾದರು ಕೋಟಿಗೀತಾ ಲೇಖನ ಯಜ್ಞ ದೀಕ್ಷೆಯೊಂದಿಗೆ ಸಮ್ಮಾನಿಸಿ, ಅನುಗ್ರಹಿಸಿದರು. ಸಂಘದ ಹಿರಿಯರಾದ ಭಾರತಪರಿಕ್ರಮ ಯಾತ್ರೆಗೈದ ಸೀತಾರಾಮ ಕೆದ್ಲಾಯ, ಸುಧೀರ್, ಹಿರಿಯರಾದ ಗುರುನಾಥ್ ಮತ್ತು ಶ್ರೀಮಠದ ದಿವಾನರಾದ ನಾಗರಾಜಾಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.