Advertisement

Kundapura: ಮೊದಲ ಬಾರಿಗೆ ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ಹೊಸೂರು ಕಂಬಳ

03:37 PM Dec 12, 2024 | Team Udayavani |

ಕುಂದಾಪುರ: ಇದೇ ಮೊದಲ ಬಾರಿಗೆ ಹೊನಲು ಬೆಳಕಿನಲ್ಲಿ ಆಯೋಜಿಸಿದ ಇತಿಹಾಸ ಪ್ರಸಿದ್ಧ ಹೊಸೂರು ಮಲಗದ್ದೆ ಮನೆಯ ಸಾಂಪ್ರದಾಯಿಕ ಕಂಬಳ ಉತ್ಸವವು ಮಂಗಳವಾರ ತಡರಾತ್ರಿ ಯಶಸ್ವಿಯಾಗಿ ಸಂಪನ್ನಗೊಂಡಿತು.

Advertisement

ಹೊಸೂರಿನ ಮಲಗದ್ದೆ ಮನೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಈ ಕಂಬಳ ಉತ್ಸವ ನಡೆಯಿತು. ಬೆಳಗ್ಗೆ ಹೊಸೂರಿನ ಶ್ರೀ ಮಹಾಗಣಪತಿ ದೇವರಿಗೆ ಪೂಜೆ, ಆ ಬಳಿಕ ಕಂಬಳಗದ್ದೆಗೆ ಪೂಜೆ, ಮುಡೂರ ಹೈಗುಳಿ, ಶ್ರೀ ಸ್ವಾಮಿ ಪರಿವಾರ ದೈವಗಳಿಗೆ ಪೂಜೆ ಸಲ್ಲಿಸಲಾಯಿತು. ಮುಹೂರ್ತದ ಹೋರಿಯಾಗಿ ಸುಳಿ-ಕೆರೆ ಕುಟುಂಬಸ್ಥರ ಕೋಣಗಳನ್ನು ಗದ್ದೆಗೆ ಇಳಿಸಲಾಯಿತು.

ಬಳಿಕ ಚೆಂಡೆ, ಮಂಗಳ ವಾದ್ಯ ದೊಂದಿಗೆ 38 ಜೋಡಿ ಕೋಣಗಳನ್ನು ಕಂಬಳಗದ್ದೆಗೆ ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಯಿತು.

ಕೋಣಗಳಿಗೆ ಮೊದಲಿಗೆ ಶ್ರೀ ಸ್ವಾಮಿ ಪರಿವಾರ ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ನೀಡಿ, ಕಂಬಳಗದ್ದೆಗೆ ಇಳಿಸಲಾಯಿತು. ಹಗ್ಗ ಹಿರಿಯ, ಕಿರಿಯ ವಿಭಾಗ, ಹಲಗೆ ಕಿರಿಯ- ಹಿರಿಯ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಿತು. ಕೊನೆಯದಾಗಿ ಮಲಗದ್ದೆ ಮನೆಯ ಕೋಣಗಳನ್ನು ಇಳಿಸಿ, ಓಡಿಸುವುದ ರೊಂದಿಗೆ ಕಂಬಳ ಸಂಪನ್ನಗೊಂಡಿತು.

ಮಲಗದ್ದೆ ಮನೆ ಕುಟುಂಬಸ್ಥರು, ಊರ ಪ್ರಮುಖರು, ಗ್ರಾಮಸ್ಥರಿದ್ದರು.

Advertisement

ಸಾವಿರಾರು ಜನ ವೀಕ್ಷಣೆ
ಹೊಸೂರು ಕಂಬಳ ಸಂಜೆ ಆರಂಭಗೊಂಡು, ತಡರಾತ್ರಿ 12 ಗಂಟೆಯವರೆಗೂ ಕಂಬಳ ನಡೆಯಿತು. ಹಾಗಾಗಿ ಈ ಬಾರಿ ಜೋಡಿ ಕೋಣಗಳ ಸಂಖ್ಯೆಯೂ ಜಾಸ್ತಿಯಾಗಿದ್ದಲ್ಲದೆ, ಕಂಬಳ ನೋಡಲು ಬೇರೆ ಬೇರೆ ಕಡೆಗಳಿಂದ ಸುಮಾರು 4 ಸಾವಿರಕ್ಕೂ ಮಿಕ್ಕಿ ಜನ ಆಗಮಿಸಿದ್ದರು. ಬಂದವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next