Advertisement

Kundapura: ಪಾರಂಪರಿಕ ಆಚರಣೆಯ ತಲ್ಲೂರಿನ ಕಂಬಳ

12:49 AM Dec 04, 2024 | Team Udayavani |

ಕುಂದಾಪುರ: ತಲ್ಲೂರಿನ ದೊಡ್ಮನೆ ಕುಟುಂಬದವರು ಅನಾದಿ ಕಾಲದಿಂದಲೂ ತಲ್ಲೂರು ದೊಡ್ಮನೆ ಕಂಬಳವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇತಿಹಾಸ ಪ್ರಸಿದ್ಧ ತಲ್ಲೂರು ಕಂಬಳ ಈ ಬಾರಿ ಡಿ. 4ರಂದು ನಡೆಯಲಿದೆ. ತಲ್ಲೂರಿನ ದೊಡ್ಮನೆ ಕಂಬಳ್ಳೋತ್ಸವದಲ್ಲಿ ಇಂದಿಗೂ ವಿಶಿಷ್ಟ ಪಾರಂಪರಿಕ ಆಚರಣೆ, ಧಾರ್ಮಿಕ ವಿಧಿಗಳು ನಡೆಯುತ್ತಿದೆ. ಬೇರೆಲ್ಲೂ ಇರದಂತಹ ವಿಶಿಷ್ಟ ಆಚರಣೆಯೊಂದು ಇಲ್ಲಿದೆ. ಕಂಬಳದ ಮರುದಿನ ತಲ್ಲೂರಿನ ಗರಡಿಯಲ್ಲಿ “ಕಾಯ್ದ ಪೂಜೆ’ ನಡೆಯುವುದು ವಿಶೇಷ ಆಚರಣೆಯಾಗಿದೆ.

Advertisement

ಕಂಬಳದ ದಿನ ತಲ್ಲೂರಿನ ಶ್ರೀ ಬ್ರಹ್ಮಬೈದರ್ಕಳ, ಮುಡೂರು ಹಾçಗುಳಿ, ಕೋಟಿ -ಚೆನ್ನಯ್ಯರು, ಪರಿವಾರ ದೈವಗಳ ಸಹಿತ 47 ದೈವಗಳಿರುವ ಗರಡಿಯಿಂದ ದೊಡ್ಮನೆಗೆ ಹಾಗೂ ಮರು ದಿನ ದೊಡ್ಮನೆಯಿಂದ ಗರಡಿಗೆ ಎಳನೀರು ಹಾಗೂ ಕಬ್ಬಿನ ಜಲ್ಲೆಗಳನ್ನು ತೆಗೆದುಕೊಂಡು ಹೋಗುವ ವಿಶಿಷ್ಟ ಸಂಪ್ರದಾಯವಿದೆ.

ಏನಿದು ಕಾಯ್ದ ಪೂಜೆ ?
ವೃಶ್ಚಿಕ (ಕೊಡಿ ತಿಂಗಳು) ಸಂಕ್ರಮಣ ದಿನದಂದು ಪುರೋಹಿತರು ದೊಡ್ಮನೆಗೆ ಬಂದು ತಲ್ಲೂರು ಕಂಬಳದ ದಿನ ನಿಗದಿಪಡಿಸುತ್ತಾರೆ. ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವರ ತಾರಾನೂಕೂಲಕ್ಕೆ ಹೊಂದಿಕೊಂಡು ಕಂಬಳ ದಿನ ನಿಗದಿಯಾಗುತ್ತದೆ. ಕಂಬಳ ಆರಂಭದ ಮುಹೂರ್ತದ ಸಮಯವನ್ನು, ಮರುದಿನ ನಡೆಯುವ ಕಾಯ್ದ ಪೂಜೆಗೂ ಮುಹೂರ್ತ ನಿಗದಪಡಿಸಲಾಗುತ್ತದೆ. ದಿನ ನಿಗದಿಪಡಿಸಿದ ಮುಹೂರ್ತದಲ್ಲಿ ತುಳಸಿ ಕಟ್ಟೆ ವೃಂದಾವನ ಮಾಡಿ, ತುಳಸಿ ಪೂಜೆ ಮಾಡಲಾಗುತ್ತದೆ. ದೊಡ್ಮನೆ ಕುಟುಂಬದವರು ನೀಡಿರುವ ಹೊಸ ಭತ್ತದ ಅಕ್ಕಿಯಲ್ಲಿ ಸಸ್ಯಹಾರ ಅಡುಗೆ ತಯಾರಿಸಿ, ದೈವಗಳಿಗೆ ಅಗೆಲು ಸೇವೆಯನ್ನು ಮಾಡಿ, ಬಡಿಸಲಾಗುತ್ತದೆ. ಇದೇ “ಕಾಯ್ದ ಪೂಜೆ’. ಅದೇ ದಿನ ಪೂಜಾರಿಯವರು ಹೊಸ ಅಕ್ಕಿಯ ಊಟ ಮಾಡುತ್ತಾರೆ.

ಕಂಬಳದ ದಿನ ಬೆಳಗ್ಗೆ ಮನೆ ದೇವರು, ದೈವಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಕಂಬಳ ಗದ್ದೆಗೆ ಮೆರವಣಿಗೆಯಲ್ಲಿ ಬಂದು, ನಿಗದಿಪಡಿಸಿದ ಮುಹೂರ್ತದಲ್ಲಿ ಗದ್ದೆಗಳಿಗೆ ಕೋಣ (ಮುಹೂರ್ತದ ಹೋರಿ) ಗಳನ್ನು ಇಳಿಸಲಾಗುತ್ತದೆ. ಸಂಜೆ ಕಂಬಳ ಕೊನೆಯದಾಗಿ ದೊಡ್ಮನೆಯ ಕೋಣಗಳನ್ನು ಗದ್ದೆಗೆ ಇಳಿಸಿ, ಓಡಿಸಿದ ಬಳಿಕ ಬೆನ್ನುಗಾಯಿ ಒಡೆಯುವುದರೊಂದಿಗೆ ಕಂಬಳ ಸಮಾಪ್ತಿಯಾಗುತ್ತದೆ.

ಫಲ, ತಾಂಬೂಲ ಕೊಡುವ ಪದ್ದತಿ
ಕಂಬಳದ ದಿನ ದೊಡ್ಮನೆಗೆ ಹಾಗೂ ಮರು ದಿನ ದೊಡ್ಮನೆಯಿಂದ ಗರಡಿಗೆ ಎಳನೀರು ಹಾಗೂ ಕಬ್ಬಿನ ಜಲ್ಲೆಗಳನ್ನು ತೆಗೆದುಕೊಂಡು ಹೋಗುವ ಸಂಪ್ರದಾಯ, ಕೋಣಗಳಿಗೆ ಎಳನೀರು, ಕಬ್ಬಿನ ಜಲ್ಲೆ, ತಾಂಬೂಲ ಕೊಡುವ ಪದ್ಧತಿಯಿದೆ. ಮರು ದಿನ ಕಾಯ್ದ ಪೂಜೆ ನಡೆಯುತ್ತದೆ. ಈ ರೀತಿಯ ವಿಶಿಷ್ಟ ಆಚರಣೆಗಳು ಬೇರೆಲ್ಲೂ ಇಲ್ಲ.
– ವಸಂತ ಆರ್‌. ಹೆಗ್ಡೆ,
ತಲ್ಲೂರು ಗರಡಿಯ ಬಲ್ಲಾಳ ಶೆಟ್ರಾ

Advertisement

ಮೂಡ್ಲಕಟ್ಟೆ ದೊಡ್ಮನೆ ಕಂಬಳಕ್ಕೆ 150 ವರ್ಷಗಳ ಇತಿಹಾಸ!
ಬಸ್ರೂರು: ಮೂಡ್ಲಕಟ್ಟೆ ದೊಡ್ಮನೆಯ ಕಂಬಳಕ್ಕೆ ಸರಿಯಾಗಿ 150 ವರ್ಷಗಳ ಸುದೀರ್ಘ‌ ಇತಿಹಾಸವಿದೆ. ಮೊದಲು ಈ ಕಂಬಳವನ್ನು ದೊಡ್ಮನೆಯ ಯಜಮಾನ ಮಹಾಬಲ ಶೆಟ್ಟರು ನಡೆಸುತ್ತಿದ್ದರು. ಕಳೆದ 57 ವರ್ಷಗಳಿಂದ ದೊಡ್ಮನೆಯ ಯಜಮಾನ ಡಾ| ಜಿ.ಪಿ.ಶೆಟ್ಟಿ ಕಂಬಳದ ಜವಾಬ್ದಾರಿ ಹೊತ್ತು ಮುನ್ನಡೆಸುತ್ತಿದ್ದಾರೆ.

ಮೂಡ್ಲಕಟ್ಟೆ ದೊಡ್ಮನೆಯಲ್ಲಿ ಕಂಬಳ ಡಿ. 4ರಂದು ನಡೆಯಲಿದೆ. ಮೊದಲಾಗಿ ಬೊಬ್ಬರ್ಯ ಮತ್ತು ನಾಗದೇವರಿಗೆ ವಿಶೇಷ ಪೂಜೆ ಸಲ್ಲುತ್ತದೆ. ಮೇರ್ಡಿಯ ನಂದಿಕೇಶ್ವರ ದೇವರಿಗೂ ಪೂಜೆ ಸಲ್ಲಿಸಿದ ಬಳಿಕ ಮನೆಯ ಕೋಣಗಳನ್ನು ಗದ್ದೆಗೆ ಇಳಿಸಲಾಗುತ್ತದೆ. ಕೋಣ ತಂದ ಪ್ರತಿಯೊಬ್ಬರಿಗೂ 2500 ರೂ. ಹಣ ನೀಡುವ ಪರಿಪಾಠವಿದೆ.

ಓಟದ ಕೋಣಗಳ ಸ್ಪರ್ಧೆ ಮುಗಿದ ಅನಂತರ ಮನೆಯ ಕೋಣಗಳನ್ನು ಸೂಡಿ ಹಿಡಿದು ಕತ್ತಲೆಯಲ್ಲಿ ಗದ್ದೆಯಲ್ಲಿ ಓಡಿಸುವ ಕ್ರಮವಿದೆ. ಕೊನೆಯಲ್ಲಿ ಕೆಸರುಗದ್ದೆ ಓಟವನ್ನೂ ಆಯೋಜಿಸಲಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next