Advertisement

Bantwal: ಯಜಮಾನರು-ಓಟಗಾರರಿಂದಲೇ ಹುಟ್ಟಿದ ಕಂಬಳ

12:06 AM Nov 30, 2024 | Team Udayavani |

ಬಂಟ್ವಾಳ: ನಮ್ಮೂರಿನಲ್ಲಿ ಕಂಬಳ ಕೋಣಗಳ ಯಜಮಾನರು- ಓಟಗಾರರು ಹೆಚ್ಚಿದ್ದು, ನಾವೇ ಒಂದು ಕಂಬಳ ಕೂಟ ಆಯೋಜಿಸೋಣ ಎಂದು ಕೆಲವು ಉತ್ಸಾಹಿಗಳು ಆರಂಭಿಸಿದ ಬಂಟ್ವಾಳ ತಾಲೂಕಿನ ಕಕ್ಯಪದವು ಸತ್ಯ- ಧರ್ಮ ಜೋಡುಕರೆ ಕಂಬಳವು ಪ್ರಸ್ತುತ ಅವಿಭಜಿತ ದ.ಕ.ಜಿಲ್ಲೆಯ ಪ್ರತಿಷ್ಠಿತ ಕಂಬಳವಾಗಿದೆ.

Advertisement

ಈ ಬಾರಿ 12ನೇ ವರ್ಷದ ಕಂಬಳವು ಉಳಿ ಗ್ರಾಮದ ಮೈರದ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ನೇತೃತ್ವದಲ್ಲಿ ನ. 30 ರಂದು ಕಕ್ಯಪದವಿನ ಬರ್ಕೆಜಾಲು ಎಂಬಲ್ಲಿ ನಡೆಯಲಿದೆ.

ಕಕ್ಯಪದವು ಪ್ರದೇಶವು ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಗಡಿಭಾಗ ದಲ್ಲಿದೆ. ಹಿಂದೊಮ್ಮೆ ಕಕ್ಯಪದವು ಬಳಿಯ ಸರಪಾಡಿಯಲ್ಲೂ ಸೂರ್ಯ-ಚಂದ್ರ ಕಂಬಳ ನಡೆದಿತ್ತು. ಇದುವೇ ಕಂಬಳ ಕೂಟದ ಆಯೋಜನೆಗೆ ಪ್ರೇರಣೆ.

22 ದಿನಗಳಲ್ಲಿ ಸನ್ನಿಧಿಯ ಅಭಿವೃದ್ಧಿ!
ಬರ್ಕೆಜಾಲಿನಲ್ಲಿ ಕಂಬಳ ಆಯೋ ಜಿಸಲು ಗೆಳೆಯರ ಬಳಗದ ಯುವಕರು, ಹಿರಿಯರು-ಪ್ರಗತಿಪರ ಕೃಷಿಕರು ಸೇರಿ ಕೊಂಡರು. ಆದರೆ ಯಶಸ್ಸಿನ ಬಗ್ಗೆ ಸಂಶಯ ಮೂಡಿ ಪ್ರಶ್ನಾಚಿಂತನೆ ನಡೆಸಲಾಯಿತು. ಆಗ ಮೈರದಲ್ಲಿರುವ ಶ್ರೀ ಮಹಾಕಾಳಿ ಸನ್ನಿಧಿಯನ್ನು ಜೀರ್ಣೋದ್ಧಾರ ಮಾಡಿದ ಬಳಿಕ ಕಂಬಳ ಯಶಸ್ಸಾಗುತ್ತದೆ ಎಂದು ಕಂಡು ಬಂದಿತು. ಯುವಕರು ಸನ್ನಿಧಿಯ ಅಭಿವೃದ್ಧಿಯನ್ನು ಮಾಡಿ, ಕೇವಲ 22 ದಿನಗಳಲ್ಲಿ ಬ್ರಹ್ಮಕಲಶವನ್ನೂ ನಡೆಸಿದ್ದರು. ಮಹಾಕಾಳಿಯ ಸನ್ನಿಧಿ ಬೆಳಗಿದಂತೆ ಕಂಬಳವೂ ಯಶಸ್ವಿಯಾಯಿತು.

ಮೈರದಲ್ಲಿ ಶ್ರೀ ರಾಮಾಂಜನೇಯ ಭಜನ ಮಂದಿ ರವೂ ನಿರ್ಮಾಣ ಗೊಂಡಿದ್ದು, ಪ್ರತಿವರ್ಷ ಕಂಬಳದ ದಿನ ಶ್ರೀ ಮಹಾಕಾಳಿ ಮಂದಿರದಲ್ಲಿ ಪೂಜೆ ನಡೆದು ಪರಿವಾರ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ ಭಜನ ಮಂದಿರದಿಂದ ಮೆರವಣಿಗೆ ಬಂದು ಕಂಬಳ ಕೂಟಕ್ಕೆ ಚಾಲನೆ ನೀಡಲಾಗುತ್ತಿದೆ. ಕಳೆದ 6 ವರ್ಷಗಳಿಂದ ಜೋಡುಕರೆಯಲ್ಲಿ ಕಂಬಳ ಸ್ನೇಹಕೂಟವೂ ನಡೆಯುತ್ತಿದೆ.

Advertisement

ಸಾಕುವವರ ಸಂಖ್ಯೆ ಹೆಚ್ಚಳ
11 ವರ್ಷಗಳಲ್ಲಿ ಬರ್ಕೆಜಾಲು ತುಕ್ರಪ್ಪ ಗೌಡ ಬರ್ಕೆಜಾಲು ಅವರ ಜಾಗದಲ್ಲಿ ಕಂಬಳ ನಡೆಯುತ್ತಿದ್ದು, ಈ ಬಾರಿಯೂ ಅಲ್ಲೇ ನಡೆಯುತ್ತಿದೆ. ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಶಾಸಕರಾಗುವ ಮೊದಲೇ ಕಂಬಳದ ಗೌರವಾಧ್ಯಕ್ಷರಾಗಿದ್ದು, ಈಗಲೂ ಅವರೇ ಮುಂದುವರಿದಿದ್ದಾರೆ. ಎಂ. ತುಂಗಪ್ಪ ಬಂಗೇರ, ಹರಿಶ್ಚಂದ್ರ ಪೂಜಾರಿ ಕಜೆಕಾರು, ರವಿ ಕಕ್ಯಪದವು, ಕುಸುಮಾಧರ ಉರ್ಕಿ ಈ ತನಕ ಕಂಬಳ ಕೂಟದ ಅಧ್ಯಕ್ಷರಾಗಿದ್ದು, ಪ್ರಸ್ತುತ ಸುದರ್ಶನ್‌ ಬಜ ಅಧ್ಯಕ್ಷರಾಗಿದ್ದಾರೆ.

196.50 ಕೋಲು ಉದ್ದ
ಸತ್ಯ-ಧರ್ಮ ಜೋಡುಕರೆಯು 196.50 ಕೋಲು ಉದ್ದವಿದ್ದು, ಕಂಬಳ ಓಟಗಾರರಿಂದ ಸಾಕಷ್ಟು ದಾಖಲೆಗಳು ಕೂಡ ನಡೆದಿವೆ. ಜೋಡುಕರೆಯ ಸಮೀಪದಲ್ಲೇ ಸುಂದರವಾದ ಕೋಟಿ-ಚೆನ್ನಯ ವೃತ್ತವೂ ನಿರ್ಮಾಣಗೊಂಡಿದೆ.

ಕಂಬಳದ ಸಾಧಕ ಯಜಮಾನರು- ಓಟಗಾರರು ಹೆಚ್ಚಿದ್ದ ಹಿನ್ನೆಲೆಯಲ್ಲಿ ಕಂಬಳಾಭಿಮಾನಿಗಳೆಲ್ಲ ಸೇರಿ ಈ ಕೂಟವನ್ನು ಆರಂಭಿಸಿದ್ದು, ಯಶಸ್ವಿ ಯಾಗಿ ನಡೆಯುತ್ತಿದೆ. ಈ ಬಾರಿ 12ನೇ ವರ್ಷದ ಕಂಬಳ ಕೂಟದ ಆಯೋಜನೆಗೆ ಸಿದ್ಧತೆ ಭರದಿಂದ ನಡೆದಿದೆ.
– ಸುರೇಶ್‌ ಮೈರಾ
ಕಂಬಳ ಕೂಟದ ಪ್ರಮುಖರು.

Advertisement

Udayavani is now on Telegram. Click here to join our channel and stay updated with the latest news.

Next