Advertisement

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

01:15 AM Nov 29, 2024 | Team Udayavani |

ಕುಂದಾಪುರ: ಸಾಂಪ್ರದಾಯಿಕ ಕಂಬಳಗಳಲ್ಲಿ ಇತಿಹಾಸ ಪ್ರಸಿದ್ಧವಾಗಿರುವ ಕೆರಾಡಿ ಕಂಬಳ ನ. 29ರಂದು ನಡೆಯಲಿದೆ.

Advertisement

ಈ ಕಂಬಳಕ್ಕೆ 200 ವರ್ಷಗಳಷ್ಟು ಇತಿಹಾಸವಿದೆ. ವಂಡಾರಿನಂತೆ ಕೆರಾಡಿಯ 12 ಎಕ್ರೆ ವಿಸ್ತೀರ್ಣದ ಕಂಬಳಗದ್ದೆಯನ್ನು ಕೂಡ ಪಾಂಡವರು ರಾತ್ರಿ ವೇಳೆ ನಿರ್ಮಿಸಿ, ಬಳಿಕ ಮೂಡುಗಲ್ಲಿನ ಗುಹಾಂತರ ದೇಗುಲದಲ್ಲಿ ಅದೃಶ್ಯರಾದರು ಎಂಬ ನಂಬಿಕೆ ಇದೆ. ಊರಿನ ಜಾನುವಾರುಗಳಿಗೆ ರೋಗ – ರುಜಿನಗಳು ಬಂದರೆ ಕಂಬಳ ನಡೆಯುವ ದಿನ ಕಂಬಳಗದ್ದೆಗೆ ಇಳಿಸುವುದು ಇಲ್ಲಿನ ವಿಶೇಷ ಹರಕೆಗಳಲ್ಲಿ ಒಂದಾಗಿದೆ.

ಈ ಕಂಬಳವನ್ನು ಕೆರಾಡಿಯ ಬೀಡಿನಮನೆ ಕುಟುಂಬಸ್ಥರು ನಡೆಸುತ್ತಿದ್ದಾರೆ. ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಇದೇ ಮನೆತನದವರು. ಸಿಂಗಾರಿ ಶೆಡ್ತಿ ಮನೆಯ ಹಿರಿಯರಾಗಿದ್ದು, ನಾರಾಯಣ ಶೆಟ್ಟರ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ ಕಂಬಳ ಆಯೋಜಿಸಲಾಗುತ್ತಿದೆ.

ಮಲಯಾಳಿ ಬೊಬ್ಬರ್ಯಗೆ ಪೂಜೆ
ಕಂಬಳ ದಿನ ಮೊದಲಿಗೆ ಕುಲದೈವ ಮಲಯಾಳಿ ಬೊಬ್ಬರ್ಯ ಹಾಗೂ ಸಪರಿವಾರ ದೈವಗಳಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ವಾದ್ಯ ಘೋಷಗಳೊಂದಿಗೆ ಕಂಬಳಗದ್ದೆಗೆ ಪೂಜೆ ನೆರವೇರಿಸಲಾಗುತ್ತದೆ. ಬಳಿಕ ರೋಗ ಬಾರದಂತೆ ಕಂಬಳ ಗದ್ದೆಯ ಸುತ್ತ ಸುತ್ತಿ ಬಿಕ್ಕುತ್ತಾ ಬರುವುದು ವಾಡಿಕೆ. ಬಳಿಕ ಹರಕೆ ಹೊತ್ತವರು ಜಾನುವಾರುಗಳನ್ನು ಕಂಬಳ ಗದ್ದೆಗೆ ಇಳಿಸುತ್ತಾರೆ. ಅನಂತರ ಮುಹೂರ್ತದ ಕೋಣಗಳಾದ ಕೆರಾಡಿ ಬಡಾಬೆಟ್ಟು ಸೀತಾರಾಮ ಶೆಟ್ಟರ ಕೋಣಗಳನ್ನು ಇಳಿಸುವ ಮೂಲಕ ಚಾಲನೆ ನೀಡಲಾಗುವುದು. ಹಿರಿಯ, ಕಿರಿಯ ಹಗ್ಗದ ಓಟ, ಹಲಗೆ ಓಟ, ಸಬ್‌ ಜೂನಿಯರ್‌ ವಿಭಾಗದ ಸ್ಪರ್ಧೆಗಳೆಲ್ಲ ಮುಗಿದ ಬಳಿಕ ಕೊನೆಯದಾಗಿ ಬೀಡಿನಮನೆಯವರ ಕೋಣಗಳನ್ನು ದೊಂದಿ ಬೆಳಕಿನಲ್ಲಿ ಗದ್ದೆಗೆ ಇಳಿಸಿ, ಓಡಿಸುವುದರೊಂದಿಗೆ ಕಂಬಳ ಸಮಾಪ್ತಿಯಾಗುತ್ತದೆ.

ಕಾಂತಾರ ಚಿತ್ರೀಕರಣ
ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದ ರಿಷಬ್‌ ಶೆಟ್ಟರ ಕಾಂತಾರ ಚಿತ್ರದಲ್ಲಿ ಬರುವ ಕಂಬಳ ಉತ್ಸವದ ಚಿತ್ರೀಕರಣವು ಇದೇ ಕೆರಾಡಿಯ ಕಂಬಳ ಗದ್ದೆಯಲ್ಲಿ ನಡೆದಿತ್ತು. 8 ದಿನಗಳ ಕಾಲ ಇಲ್ಲಿನ ಕಂಬಳ ಗದ್ದೆ, ಜಾತ್ರೆಯ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಈ ಕಂಬಳದ ಕೋಣಗಳನ್ನು ಓಡಿಸಲೆಂದೇ ರಿಷಬ್‌ 4 ವಾರಗಳ ತರಬೇತಿ ಪಡೆದಿದ್ದರು. ಈ ಸಿನೆಮಾದ ಮೂಲಕ ಕಂಬಳವು ಈಗ ದೇಶವ್ಯಾಪಿ ಪ್ರಸಿದ್ಧಿ ಪಡೆದಿದೆ.

Advertisement

ಕಂಬಳ ಈ ನೆಲದ ಸಂಸ್ಕೃತಿ. ಅನಾದಿ ಕಾಲದಿಂದಲೂ ನಮ್ಮ ಬೀಡಿನಮನೆ ಕುಟುಂಬಸ್ಥರು ಕೆರಾಡಿ ಕಂಬಳವನ್ನು ನಡೆಸುತ್ತಿದ್ದೇವೆ. ಊರವರೆಲ್ಲರೂ ಹಬ್ಬದಂತೆ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.
– ರಿಷಬ್‌ ಶೆಟ್ಟಿ, ನಟ,
ಬೀಡಿನಮನೆ ಕುಟುಂಬಸ್ಥರು

Advertisement

Udayavani is now on Telegram. Click here to join our channel and stay updated with the latest news.

Next