Advertisement

ಕೆ.ಆರ್‌.ಪುರದಲ್ಲಿ ಕುಡಿಯುವ ನೀರಿಗೆ ಪರದಾಟ

12:40 AM Apr 30, 2019 | Lakshmi GovindaRaju |

ಕೆ.ಆರ್‌.ಪುರ: ಬಿಸಿಲ ತಾಪ ಹೆಚ್ಚಾದಂತೆ ಕೆ.ಆರ್‌.ಪುರ ವಿಧಾನಸಭೆ ಕ್ಷೇತ್ರದ ಬಹುತೇಕ ವಾರ್ಡ್‌ಗಳಲ್ಲಿ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಒಂದೆಡೆ ಅಂತರ್ಜಲ ಮಟ್ಟ ಕುಸಿದು, ಕೊಳೆವೆಬಾವಿಗಳು ಬತ್ತುತ್ತಿದ್ದು, ಬೋರ್‌ವೆಲ್‌ ನೀರನ್ನೇ ಅವಲಂಬಿಸಿದ್ದ ಹಲವು ಗ್ರಾಮಗಳಲ್ಲಿ ಸಮಸ್ಯೆ ಹೆಚ್ಚಾಗಿದೆ.

Advertisement

ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ ಕ್ಷೇತ್ರದ 11 ಹಳ್ಳಿಗಳಿಗೆ ಜಲಮಂಡಳಿ ಕಾವೇರಿ ನೀರಿನ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ಬೋರ್‌ವೆಲ್‌ ನೀರಿಲ್ಲದೆ, ಇತ್ತ ಕಾವೇರಿ ನೀರೂ ಬಾರದೆ ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರು, ಅನಿವಾರ್ಯವಾಗಿ ಒಂದು ಟ್ಯಾಂಕರ್‌ ನೀರಿಗೆ 600ರಿಂದ 700 ರೂ. ಕೊಟ್ಟು ನೀರು ಖರೀದಿಸುತ್ತಿದ್ದಾರೆ.

ಕೆ.ಆರ್‌.ಪುರ ಕ್ಷೇತ್ರದ ವ್ಯಾಪ್ತಿಯ 9 ವಾರ್ಡ್‌ಗಳಲ್ಲೂ ಕುಡಿಯುವ ನೀರಿನ ತತ್ವಾರ ಎದುರಾಗಿದೆ. ಬಸವನಪುರ ವಾರ್ಡ್‌ನ ಸ್ವತಂತ್ರನಗರ, ಪಾರ್ವತಿನಗರ, ದೊಡ್ಡಬಸವನಪುರ ಹಾಗೂ ರಾಮಮೂರ್ತಿನಗರ ವಾರ್ಡ್‌ನ ಕೆ.ಚನ್ನಸಂದ್ರ, ಕನಕನಗರ, ರಾಮಮೂರ್ತಿನಗರ, ಕಲ್ಕೆರೆ ಗ್ರಾಮಗಳಲ್ಲಿ ವಾರದಲ್ಲಿ ಒಂದು ದಿನ ನೀರು ಬರುತ್ತಿದೆ.

ಆದರೆ ಯಾವ ದಿನ ಬರುತ್ತದೆ ಎಂಬ ಖಾತ್ರಿಯಿಲ್ಲದ ಕಾರಣ, ಇಲ್ಲಿನ ನಿವಾಸಿಗಳು ಲ್ಲ ಕೆಲಸ ಬಿಟ್ಟು, ಬಿಂದಿಗೆ ಹಿಡಿದು ನಿಂತು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಹೊರಮಾವು ವಾರ್ಡ್‌ನ ಬಾಬುಸಾಪಾಳ್ಯ, ಎಂ.ಎಂ.ಗಾರ್ಡನ್‌, ದೊಡ್ಡಯ್ಯಲೇಔಟ್‌, ಜಯಂತಿನಗರ, ಸೇರಿ ಹಲವೆಡೆ ನೀರಿನ ಸಮಸ್ಯೆ ತೀವ್ರವಾಗಿದೆ.

ಇದ್ದ ಮೂರು ಬೊರ್‌ವೆಲ್‌ಗ‌ಳ ಪೈಕಿ ಎರಡು ಕೆಟ್ಟಿವೆ. ಸಮಸ್ಯೆ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜವಾಗಿಲ್ಲ ಎಂದು ದೊಡ್ಡಯ್ಯ ಬಡಾವಣೆ ನಿವಾಸಿಗಳು ಅವಲತ್ತುಕೊಳ್ಳುತ್ತಿದ್ದಾರೆ.

Advertisement

500 ರೂ. ಕೇಳುವ ನೀರುಗಂಟಿ!: ಕಲ್ಕೆರೆಯ ಖಾನೆ ಬಡಾವಣೆಯ ಹಲವು ಮನೆಗಳಿಗೆ ನಾಲ್ಕೈದು ತಿಂಗಳಿನಿಂದ ಕುಡಿಯುವ ನೀರೇ ಬರುತ್ತಿಲ್ಲ. ಹೀಗಾಗಿ ಕಿ.ಮೀ.ಗಟ್ಟಲೆ ಕ್ರಮಿಸಿ, ನೀರು ಹೊತ್ತು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೊರೆಸಿರುವ ಬೋರ್‌ವೆಲ್‌ಗ‌ಳಲ್ಲಿ ನೀರಿಲ್ಲ.

ಜಾನುವಾರುಗಳಿಗೂ ಕುಡಿಯಲು ನೀರು ಸಿಗದ ಕಾರಣ, ಪಶುಸಂಗೋಪನೆ ನೆಚ್ಚಿಕೊಂಡಿರುವ ರೈತರು ಕಂಗಾಲಾಗಿದ್ದಾರೆ. ಪ್ರತಿ ಮನೆಯಿಂದ 500 ರೂ. ವಸೂಲಿ ಮಾಡುವ ನೀರುಗಂಟಿ, ಹಣ ಕೊಡದಿದ್ದರೆ ನೀರೇ ಬಿಡುವುದಿಲ್ಲ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.

ನಮ್ಮ ಬಡಾವಣೆಯಲ್ಲಿ ಉಳ್ಳವರ ಮನೆಗಷ್ಟೇ ನೀರು. ಇಕ್ಕಟ್ಟಿನ ರಸ್ತೆಗಳಿರುವ ಪ್ರದೇಶಕ್ಕೆ ಟ್ಯಾಂಕರ್‌ ಬರುವುದಿಲ್ಲ. ನೀರು ಬಿಡುವ ವ್ಯಕ್ತಿ 500 ರೂ. ಕೇಳುತ್ತಾನೆ. ಹೀಗಾಗಿ ದೂರದವರೆಗೆ ಹೋಗಿ ನೀರು ಹೊತ್ತು ತರುವುದು ಅನಿವಾರ್ಯ.
-ಶ್ಯಾಮಲಾ, ಖಾನೆ ಬಡಾವಣೆ ನಿವಾಸಿ

* ಕೆ.ಆರ್‌.ಗಿರೀಶ್‌

Advertisement

Udayavani is now on Telegram. Click here to join our channel and stay updated with the latest news.

Next