ಹುಬ್ಬಳ್ಳಿ: ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಯಾದ ಮಹದಾಯಿ, ಕಳಸಾ-ಬಂಡೂರಿ ಯೋಜನೆಯನ್ನು ಸರಕಾರವೇ ಮುತುವರ್ಜಿ ವಹಿಸಿ ಬಗೆಹರಿಸಬೇಕೆಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಒತ್ತಾಯಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಇಲಾಖಾ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹದಾಯಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಆ ಭಾಗದ ರೈತರು, ಸಾರ್ವಜನಿಕರು ಕಳೆದ 680 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ನಿರೀಕ್ಷಿತ ಮಟ್ಟದಲ್ಲಿ ಕ್ರಮ ಕೈಗೊಂಡಿಲ್ಲ.
ಗೋವಾ ಚುನಾವಣೆ ಮುಗಿಯಲಿ ಎಂದು ಮೊದಲು ಹೇಳುತ್ತಿದ್ದ ಬಿಜೆಪಿ ಈಗ ತೆಪ್ಪಗಿದೆ. ಗೋವಾ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ. ಆದ್ದರಿಂದ ರಾಜ್ಯ ಸರಕಾರವೇ ಮುತುವರ್ಜಿ ವಹಿಸಿ ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕೆಂದು ಆಗ್ರಹಿಸಿದ್ದಾರೆ.
ಸಾಲಮನ್ನಾ ಮಾಡಿ: ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಬರಗಾಲ ಹಾಗೂ ಅತೀವೃಷ್ಟಿಯಿಂದ ಸಾಲ ತೀರಿಸಲಾಗದೆ 3 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ರೈತರ ಸಾಲಮನ್ನಾ ಮಾಡುವುದು ಬಹಳ ಅವಶ್ಯ. ಈ ವಿಷಯವಾಗಿ ಕೇಂದ್ರದ ಮನವೊಲಿಕೆಗೆ ದೆಹಲಿಗೆ ನಿಯೋಗ ಕೊಂಡೊಯ್ಯಬೇಕು ಹಾಗೂ ಮುಖ್ಯಮಂತ್ರಿಯವರು ರೈತರ ಸಾಲಮನ್ನಾ ಘೋಷಿಸಬೇಕೆಂದು ಒತ್ತಾಯಿಸಿದರು.
ಕನ್ನಡ ಶಾಲೆಗೆ ಕಳಿಸಲು ಸುತ್ತೋಲೆ ಹೊರಡಿಸಿ: ರಾಜ್ಯದಲ್ಲಿ ಸರಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆಗಳು ಮುಚ್ಚುವ ಸ್ಥಿತಿ ಬಂದಿರುವುದು ಗಂಭೀರ ಸಮಸ್ಯೆಯಾಗಿದೆ. ಆದ್ದರಿಂದ ಮುಖ್ಯಮಂತ್ರಿ, ಮಂತ್ರಿಗಳು, ಸರಕಾರಿ ನೌಕರರು ತಮ್ಮ ಮಕ್ಕಳು, ಪರಿವಾರವನ್ನು ಕನ್ನಡ ಶಾಲೆಗೆ ಕಳಿಸುವುದನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಬೇಕು.
ರಾಜ್ಯದಲ್ಲಿರುವ ಎಲ್ಲ ತಾಲೂಕು ಕೇಂದ್ರಗಳಲ್ಲಿ ಜಮೀನು ಇಲ್ಲದೆ ಕ್ರೀಡಾಂಗಣ ನಿರ್ಮಾಣವಾಗಿಲ್ಲ. ಅಂತಹ ಕಡೆ ಸರಕಾರವೇ 5 ಎಕರೆ ಜಮೀನು ಖರೀದಿಸಿ ಕ್ರೀಡಾಂಗಣ ನಿರ್ಮಿಸಬೇಕು. ನವಲಗುಂದ ತಾಲೂಕಿನ ನವಲಗುಂದ ಹಾಗೂ ಅಣ್ಣಿಗೇರಿ ಪುರಸಭೆಗಳಿಗೆ ತಲಾ 10 ಕೋಟಿ ರೂ. ಎಸ್‌ಎಫ್‌ಸಿ ವಿಶೇಷ ಅನುದಾನ ನೀಡಬೇಕು.
ಯಲ್ಲಮ್ಮನಗುಡ್ಡ, ನವಲಗುಂದ ನಾಗಲಿಂಗಪ್ಪನ ಮಠ, ಭಾವೈಕ್ಯತಾ ತಾಣವಾದ ಯಮನೂರು ಮುಂತಾದ ತಾಣಗಳನ್ನು ಪ್ರವಾಸೋದ್ಯಮ ಇಲಾಖೆಯ ಯೋಜನೆಗಳಡಿ ಅಭಿವೃದ್ಧಿ ಪಡಿಸಲು ಸರಕಾರ ಆಸ್ಥೆ ತೋರಬೇಕೆಂದು ಕೋನರಡ್ಡಿ ಒತ್ತಾಯಿಸಿದರು.