Advertisement
ಸೋಮವಾರ ಸಂಜೆ ನಕ್ಸಲ್ ಮತ್ತು ಎಎನ್‌ಎಫ್ ನಡುವಿನ ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡ ಹತನಾಗಿರುವ ಘಟನೆ ನಡೆದ ಗ್ರಾಮದಲ್ಲೀಗ ನೀರವ ಮೌನ ಆವರಿಸಿಕೊಂಡಿದೆ. ಗುರುವಾರದವರೆಗೂ ಸ್ಥಳದಲ್ಲಿ ಬಿಗು ಭದ್ರತೆಯೊಂದಿಗೆ ತನಿಖೆ ಕಾರ್ಯಗಳು ನಡೆದಿವೆ. ಫಾರೆನ್ಸಿಕ್ ತಂಡದ ತಜ್ಞರು ಮಂಗಳೂರು ಮತ್ತು ಬೆಂಗಳೂರಿನಿಂದ ಆಗಮಿಸಿ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.
Related Articles
Advertisement
ಎನ್‌ಕೌಂಟರ್ ಕುರುಹುಗಳುಎಎನ್ಎಫ್ ಮತ್ತು ನಕ್ಸಲ್ ನಡುವಿನ ಗುಂಡಿನ ಚಕಮಕಿಯಲ್ಲಿ ಗುಂಡುಗಳು ಅಡಿಕೆ, ತೆಂಗಿನ ಮರಗಳನ್ನು ಸೀಳಿ ಸಾಗಿದ ಕುರುಹುಗಳು ಕಾಣಸಿಗುತ್ತವೆ. ಮನೆಯ ಚಾವಡಿಯಲ್ಲಿ ದೇಹವು ಬಿದ್ದ ಕುರುಹಿದೆ. ಈ ಮನೆಯ ಒಳಗೆ ಮತ್ತು ಹೊರಗೆ ಪೊಲೀಸರು ಸಾಕ್ಷ್ಯ ಮತ್ತು ಮಹಜರು ವೇಳೆ ಗುರುತಿಸಿದ ಕೆಲವು ಕುರುಹುಗಳಿಗೆ ವೃತ್ತಾಕಾರ ಬಿಡಿಸಿ ಅದಕ್ಕೆ ಸಂಖ್ಯೆಗಳನ್ನು ನೀಡಲಾಗಿದೆ. ಪರಿಸರದ ಚಿತ್ರಣ ಹೇಗಿದೆ?
ಎನ್‌ಕೌಂಟರ್ ನಡೆದ ಜಯಂತ್ ಗೌಡರ ಮನೆಯೊಳಗೆ ಅಡುಗೆ ಮಾಡಿಟ್ಟ ಪಾತ್ರೆ, ಹಳಸಿದ ಬೇಯಿಸಿದ ವಸ್ತುಗಳು ಹಾಗೆಯೇ ಉಳಿದುಕೊಂಡಿವೆ. ಕೋಳಿ, ನಾಯಿಗಳ ವೇದನೆ ಕೇಳುವವರಿಲ್ಲ. ಉಳಿದ ಎರಡು ಮನೆಗಳ ಸ್ಥಿತಿಯೂ ಇದೇ ರೀತಿಯಲ್ಲಿದೆ. ಮೂರೂ ಮನೆಗಳಿಗೆ ಬೀಗವನ್ನೂ ಹಾಕಿಲ್ಲ. ಅವರು ಕೆಲಸಕ್ಕೆ ಹೋಗುವಾಗಲೂ ಇಲ್ಲಿ ಬೀಗ ಹಾಕುತ್ತಿರಲಿಲ್ಲ.
ಪುಳ್ಳಂತಬೆಟ್ಟಿನ ಪುತ್ರಿಯ ಮನೆಯಲ್ಲಿ ನೆಲೆಸಿದ್ದ ಜಯಂತ್ ಗೌಡರ ಪತ್ನಿ ಗಿರಿಜಾ ಮಾತನಾಡಿ, ವಿಕ್ರಂ ಗೌಡನನ್ನು ಎನ್‌ಕೌಂಟರ್ ಮಾಡಲಾಗಿದೆ. ಸುರಕ್ಷೆ ದೃಷ್ಟಿಯಿಂದ ನೀವು ಮನೆಗೆ ಹೋಗುವುದು ಬೇಡ ಎಂದು ಪೊಲೀಸರು ನಮಗೆ ಸೂಚಿಸಿದ್ದರು. ಮುಂದೆ ಹೇಗೆ ಎಂದು ನೋಡಬೇಕು. ಮಗ ರಾಕೇಶ್ ಕೈ ಮುರಿದುಕೊಂಡಿದ್ದು, ಕಳೆದ ವಾರ ಆಸ್ಪತ್ರೆಗೆ ಹೋಗಿದ್ದ. ಪೀತಬೈಲಿನಲ್ಲಿ ಏನೆಲ್ಲ ನಡೆದಿವೆ ಎಂಬುದು ಟಿವಿ ಮೂಲಕವೇ ತಿಳಿಯಿತು ಎಂದು ವಿವರಿಸಿದರು. ಮೂಲ ಸೌಕರ್ಯ ಕಲ್ಪಿಸಲಿ
ತಿಂಗಳಮಕ್ಕಿ, ಪೀತಬೈಲು ಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸರಕಾರ ಮುಂದಾಗಬೇಕು. ಇಲ್ಲಿನ ಜನರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಅಂಗವಿಕಲನಾಗಿದ್ದು, ಇಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಕನಿಷ್ಠ ರಸ್ತೆಯನ್ನಾದರೂ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು. ಸರಕಾರ ವಿಶೇಷ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. -ಲಕ್ಷ್ಮಣ ಗೌಡ, ತಿಂಗಳಮಕ್ಕಿ ನಿವಾಸಿ