Advertisement

ಕಾಂಗ್ರೆಸ್‌ ಬಿಟ್ಟ ಗುತ್ತೇದಾರ್‌ ಮಣಿಸಲು ಖರ್ಗೆ ಕ್ಯಾಂಪ್‌ ತಂತ್ರ

06:00 AM Apr 28, 2018 | |

ಕಲಬುರಗಿ: ಅಫಜಲಪುರ ಕ್ಷೇತ್ರದಿಂದ 6 ಸಲ ಶಾಸಕರಾಗಿರುವ ಮಾಲೀಕಯ್ಯ ಗುತ್ತೇದಾರ್‌ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಎಂ.ವೈ.ಪಾಟೀಲ್‌ ಸ್ಪರ್ಧಿಸಿದ್ದಾರೆ. ಆದರೆ, ತಮಗೆ ಸಚಿವ ಪಟ್ಟ ತಪ್ಪಿಸಲು ಕಾರಣ ರಾಗಿದ್ದಾರೆಂದು ಗುತ್ತೇದಾರ್‌, ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ ವಿರುದ್ಧ ಸಮರ ಸಾರಿದ್ದಾರೆ. ಇದನ್ನು ಖರ್ಗೆ ಹಾಗೂ ಕಾಂಗ್ರೆಸ್‌ ಸವಾಲಾಗಿ ಸ್ವೀಕರಿಸಿರುವುದರಿಂದ ಅಫಜಲಪುರ ಕ್ಷೇತ್ರ ರಣಾಂಗಣವಾಗಿ ಮಾರ್ಪಟ್ಟಿದೆ. 

Advertisement

ಅಫಜಲಪುರ ಕ್ಷೇತ್ರದಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಮುಖ್ಯ ಎಂಬುದನ್ನು ಇತಿಹಾಸವೇ ತಿಳಿಸುತ್ತದೆ. ಕಾಂಗ್ರೆಸ್‌ ಅಭ್ಯರ್ಥಿ ಎಂ.ವೈ.ಪಾಟೀಲ್‌ ಹಾಗೂ ಬಿಜೆಪಿ ಅಭ್ಯರ್ಥಿ ಗುತ್ತೇದಾರ್‌ ಎದುರಾಳಿಗಳು. ಜೆಡಿಎಸ್‌ ಅಭ್ಯರ್ಥಿ, ರಾಜೇಂದ್ರ ಪಾಟೀಲ್‌ ರೇವೂರ ಪೈಪೋಟಿ ನೀಡಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಗುತ್ತೇದಾರ್‌ರನ್ನು ಮಣಿಸಲು ಪಾಟೀಲ್‌ದ್ವಯರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ.

ಈವರೆಗೆ ನಡೆದ 13 ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದರೆ, ಬಿಜೆಪಿ ಒಮ್ಮೆಯೂ ಜಯ ಸಾಧಿಸಿಲ್ಲ. ಮಾಲೀಕಯ್ಯ ಗುತ್ತೇದಾರ ನಾಲ್ಕು ಸಲ ಕಾಂಗ್ರೆಸ್‌ನಿಂದ, ಜೆಡಿಎಸ್‌ ಹಾಗೂ ಕೆಸಿಪಿಯಿಂದ ತಲಾ ಒಂದು ಸಲ ಗೆದ್ದಿದ್ದಾರೆ. ಎಂ.ವೈ.ಪಾಟೀಲ್‌ ಅವರು ಜನತಾ ಪಕ್ಷ ಹಾಗೂ ಜನತಾದಳದಿಂದ ತಲಾ ಒಂದು ಸಲ ಗೆದ್ದಿದ್ದಾರೆ.

ನಿರ್ಣಾಯಕ ಅಂಶವೇನು?
ಮಾಲೀಕಯ್ಯ ಗುತ್ತೇದಾರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ವೀರಶೈವ-ಲಿಂಗಾಯತರ ಒಳಪಂಗಡ ಆದಿಲಿಂಗಾಯತ ಸಮುದಾಯ ಹಾಗೂ ಅಲ್ಪಸಂಖ್ಯಾತ, ಕುರುಬ ಹಾಗೂ ದಲಿತ ವರ್ಗದ ಮತಗಳು ಈ ಮೊದಲಿನಷ್ಟು ಬಾರದಿರುವ ಅಂಶ ಸ್ಪಷ್ಟವಾಗಿ ಕಂಡು ಬರುತ್ತಿದೆ. ಈ ವರ್ಗದ ಮತಗಳು ಕಾಂಗ್ರೆಸ್‌ ಇಲ್ಲವೇ ಜೆಡಿಎಸ್‌ ಇಬ್ಬರಲ್ಲಿ ಯಾರಿಗೆ ಹೆಚ್ಚು ಒಲಿಯುತ್ತವೆಯೋ ಅವರ ದಾರಿ ಸುಲಭವಾಗುತ್ತದೆ. ಖರ್ಗೆ ಹಾಗೂ ಜಿಲ್ಲೆಯ ಸಚಿವರಿಬ್ಬರು ಅಫಜಲಪುರ ಕ್ಷೇತ್ರದ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಇವರ ತಂತ್ರಗಾರಿಕೆಗಳೇ ನಿರ್ಣಾಯಕ ಅಂಶವಾಗಿದೆ. ಜೆಡಿಎಸ್‌ನ ರಾಜೇಂದ್ರ ಪಾಟೀಲ್‌ ಹಾಗೂ ಕಾಂಗ್ರೆಸ್‌ ನ ಎಂ.ವೈ. ಪಾಟೀಲ್‌ ಇಬ್ಬರೂ ಲಿಂಗಾಯತರು. ಇಬ್ಬರಿಗೂ ಲಿಂಗಾಯತ ಮತಗಳು ಹಂಚಿಕೆಯಾಗಲಿವೆ ಎನ್ನಬಹುದಾದರೂ ಮಾಲೀಕಯ್ಯ ಗುತ್ತೇದಾರ ಪಡೆಯುವ ಲಿಂಗಾಯತ ಸಮುದಾಯದ ಮೇಲೆ ಫಲಿತಾಂಶ ಅಲವಂಬನೆಯಾಗಿದೆ.


ಪಕ್ಷಗಿಂತ ವ್ಯಕ್ತಿ ನಿಷ್ಠೆ ತೋರುತ್ತಾ ಕ್ಷೇತ್ರದ ಜನರು ಪ್ರತಿ ಸಲ ನನ್ನನ್ನು ಗೆಲ್ಲಿಸುತ್ತಾ ಬರುತ್ತಿದ್ದಾರೆ.ಕ್ಷೇತ್ರದ ಜನರಿಗೆ ಗುತ್ತೇದಾರ
ಕುಟುಂಬದ ಮೇಲೆ ಹೆಚ್ಚು ನಂಬಿಕೆ ಹಾಗೂ ಪ್ರೀತಿ ಇದೆ.

–  ಮಾಲೀಕಯ್ಯ ಗುತ್ತೇದಾರ, ಬಿಜೆಪಿ

ಮಾಲೀಕಯ್ಯ ರಾಜಕೀಯದಲ್ಲಿ ತಮ್ಮ ದಂಧೆ ವೃದಿಟಛಿಸಿಕೊಳ್ಳುತ್ತಾ ಬಂದಿದ್ದಾರೆ. ಭೀಮಾ ನದಿಯಲ್ಲಿನ ಮರಳು ಲೂಟಿ, ಅಕ್ರಮ ಸಾರಾಯಿ ದಂಧೆಗಳೇ ಇದಕ್ಕೆ ಸಾಕ್ಷಿ. ಇದಕ್ಕೆ ಕೊನೆಗಾಣಿ ಸಲು ಜನ ನನಗೇ ಆಶೀರ್ವಾದ ಮಾಡಲಿದ್ದಾರೆ.
– ಎಂ.ವೈ.ಪಾಟೀಲ್‌, ಕಾಂಗ್ರೆಸ್‌

Advertisement

ಮಾಲೀಕಯ್ಯ ಗುತ್ತೇದಾರ ಹಾಗೂ ಎಂ.ವೈ.ಪಾಟೀಲ್‌ ಇಬ್ಬರೂ ಎಲ್ಲ ಕಾರ್ಯದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಇವರಿಬ್ಬರನ್ನು ಬದಲಾಯಿಸಿ ಹೊಸ ಮುಖಕ್ಕೆ ಅವಕಾಶ ನೀಡಲು ಮತದಾರರು ದೃಢ ನಿಶ್ಚಯ ಮಾಡಿದ್ದಾರೆ.
– ರಾಜೇಂದ್ರ ಪಾಟೀಲ್‌, ಜೆಡಿಎಸ್‌

– ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next