Advertisement

ಕಾವೂರು ಸ.ಪ್ರ.ದ. ವಿದ್ಯಾರ್ಥಿಗಳ ಕಾಡುತ್ತಿದೆ ನೀರಿನ ಸಮಸ್ಯೆ

11:45 AM Sep 18, 2017 | Harsha Rao |

ಮಹಾನಗರ : ಮಾರ್ಚ್‌ ತಿಂಗಳು ಬಂದರೆ ಸಾಕು, ನೀರಿನ ಸಮಸ್ಯೆ ಎದುರಾಗುವುದು ಸಾಮಾನ್ಯ. ಆದರೆ ನಗರದ ಕಾವೂರು ಗಾಂಧಿನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಳೆಗಾಲದಲ್ಲೇ ನೀರಿನ ಸಮಸ್ಯೆ ಎದುರಾಗಿದೆ. ಈ ಕಾಲೇಜು ಎತ್ತರ ಪ್ರದೇಶದಲ್ಲಿರುವ ಕಾರಣ ಪಾಲಿಕೆಯ ನೀರು ಏರದೆ, ವಿದ್ಯಾರ್ಥಿಗಳು ನೀರಿನ ತೊಂದರೆ ಎದುರಿಸುವಂತಾಗಿದೆ. ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಸಮತಟ್ಟು ಮಾಡಿ 2012ರಲ್ಲಿ ಒಂದು ಅಂತಸ್ತಿನ ಕಟ್ಟಡವನ್ನು ಕಾಲೇಜಿಗಾಗಿ ನಿರ್ಮಿಸಲಾಗಿತ್ತು. ಆಗ ನೀರಿನ ಸಮಸ್ಯೆ ಅಷ್ಟಾಗಿ ಇರಲಿಲ್ಲ. ಈಗ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಟ್ಟಡಕ್ಕೆ ಎರಡನೇ ಮಹಡಿಯನ್ನು ನಿರ್ಮಿಸಲಾಗಿದೆ. ಅದರ ಮೇಲ್ಭಾಗದಲ್ಲಿ ನೀರಿನ ಟ್ಯಾಂಕ್‌ ಅಳವಡಿಸಿದ್ದರಿಂದ ಸಮಸ್ಯೆ ತಲೆದೋರಿದೆ. ಮೊದಲೇ ಎತ್ತರದಲ್ಲಿರುವ ಕಟ್ಟಡದ ಎರಡನೇ ಮಹಡಿಗೆ ನೀರು ಏರುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸಮಸ್ಯೆಯ ಜತೆಗೆ ಶೌಚಾಲಯಕ್ಕೂ ನೀರಿಲ್ಲದಂತಾಗಿದೆ.

Advertisement

ಶೇ. 70 ವಿದ್ಯಾರ್ಥಿನಿಯರು ಪ್ರಸ್ತುತ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಬಿಎಂ, ಬಿಬಿಎ ವಿಭಾಗಗಳಿದ್ದು, ಒಟ್ಟು 155 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಶೇ. 70 ವಿದ್ಯಾರ್ಥಿನಿಯರೇ ಇದ್ದಾರೆ. ನೀರಿನ ಸಮಸ್ಯೆಯಿಂದಾಗಿ ಅವರೆಲ್ಲ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಬೇಸಗೆಯಲ್ಲಿ ಏನಾಗಬೇಡ ಎಂದು ಚಿಂತಿಸುವಂತಾಗಿದೆ. ಎತ್ತರ ಪ್ರದೇಶದಲ್ಲಿರುವ ಕಾಲೇಜಿಗೆ ಸದ್ಯ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ, ಅದೂ ಸಮರ್ಪಕವಾಗಿಲ್ಲದೆ ಸಮಸ್ಯೆ ಉಲ್ಬಣಿಸಿದೆ. ಕಾಲೇಜಿನಿಂದ ದೂರವಾಣಿ ಕರೆ ಮಾಡಿದರೂ ಪೂರೈಕೆದಾರರು ಸ್ವೀಕರಿಸುತ್ತಿಲ್ಲ. ನೆನಪಾದಾಗೊಮ್ಮೆ ವಾರಕ್ಕೆ ಒಂದು-ಎರಡು ಬಾರಿ ನೀರು ಪೂರೈಸುತ್ತಾರೆ ಎಂಬುದು ವಿದ್ಯಾರ್ಥಿಗಳ ಆರೋಪ.

ಯಾರಿಗೇಳೋಣ  ನಮ್‌ ಪ್ರಾಬ್ಲಿಮ್ಮು?
ಎತ್ತರ ಪ್ರದೇಶಕ್ಕೆ ನೀರು ಹೋಗದೇ ಇರುವಾಗ ಶಾಶ್ವತ ಪರಿಹಾರಕ್ಕೆ ಕ್ರಮ ಜರಗಿಸುವ ಕುರಿತು ಸಂಬಂಧಪಟ್ಟವರು ಆಲೋಚಿಸಬೇಕಿದೆ. ಕಾಲೇಜಿನ ಆವರಣದಲ್ಲೇ ಭೂಮಿಯೊಳಗೆ ಟ್ಯಾಂಕ್‌ ಒಂದನ್ನು ನಿರ್ಮಿಸಿ, ಅಲ್ಲಿಂದ ಪಂಪ್‌ ಮೂಲಕ ನೀರನ್ನು ಎರಡನೇ ಮಹಡಿ ಮೇಲಿರುವ ಟ್ಯಾಂಕ್‌ಗಳಿಗೆ ಏರಿಸುವ ವ್ಯವಸ್ಥೆ ಮಾಡಬೇಕು ಎಂಬುದನ್ನು ಹಲವು ತಿಂಗಳಿಂದ ಪ್ರಾಂಶುಪಾಲರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೇವೆ. ಆದರೆ, ಅಭಿವೃದ್ಧಿ ಸಮಿತಿಯವರು ಈ ಸಮಸ್ಯೆಗೆ ಸ್ಪಂದಿಸಬೇಕೆಂದು ಅವರು ಉತ್ತರಿಸುತ್ತಿದ್ದಾರೆ. ಈಗ ಅಭಿವೃದ್ಧಿ ಸಮಿತಿಯ ಸಭೆಯೂ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಬೇಕು ಎಂಬುದು ತಿಳಿಯುತ್ತಿಲ್ಲವೆಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

ಶಾಶ್ವತ ಪರಿಹಾರಕ್ಕೆ ಪ್ರಯತ್ನ ಕಾಲೇಜಿನ ನೀರಿನ ಸಮಸ್ಯೆಯ ಕುರಿತು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಉತ್ತರ ಕ್ಷೇತ್ರದ ಶಾಸಕರು ಹಾಗೂ ಸ್ಥಳೀಯ ಕಾರ್ಪೊರೇಟರ್‌ ಗಮನಕ್ಕೆ ತರಲಾಗಿದೆ. ಸ್ಥಳೀಯ ಪಾಲಿಕೆ ಅಥವಾ ಜಿ.ಪಂ. ಅನುದಾನದ ಮೂಲಕ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಪಾಲಿಕೆ ಸದಸ್ಯರು ತಿಳಿಸಿದ್ದಾರೆ. ಶೀಘ್ರದಲ್ಲಿ ಅಭಿವೃದ್ಧಿ ಸಮಿತಿಯ ಸಭೆ ಕರೆದು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು.
ಯು. ತಾರಾ ರಾವ್‌,
ಪ್ರಾಂಶುಪಾಲರು,ಕಾವೂರು ಕಾಲೇಜು

Advertisement

Udayavani is now on Telegram. Click here to join our channel and stay updated with the latest news.

Next