ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನೂತನ ಸರ್ಕಾರದ ಮೊದಲ ಬಜೆಟ್ ಮಂಡಿಸಿದರು. ಸುಮಾರು ಎರಡು ಗಂಟೆ 50 ನಿಮಿಷಗಳ ಕಾಲ ಬಜೆಟ್ ಮಂಡಿಸಿದ ಅವರು ಧಾರ್ಮಿಕ ದತ್ತಿ ಇಲಾಖೆಗೆ ಹಲವು ಯೋಜನೆಗಳನ್ನು ಘೋಷಿಸಿದರು.
ಇಲ್ಲಿದೆ ಪ್ರಮುಖ ಅಂಶಗಳು
1 ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ಮತ್ತು ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ದಿ ಕೈಗೊಳ್ಳುವ ದೃಷ್ಟಿಯಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು.
2 ರಾಜ್ಯದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಹೊರ ರಾಜ್ಯದ ಶಿಲ್ಪಿಗಳ ಮೇಲೆ ಅವಲಂಬಿತರಾಗಿದ್ದು, ನಮ್ಮ ರಾಜ್ಯದಲ್ಲಿಯೂ ದೇವಾಲಯಗಳ ನಿರ್ಮಾಣಕ್ಕಾಗಿ ನುರಿತ ಶಿಲ್ಪಿಗಳನ್ನು ತಯಾರಿಸಲು ಕೋಲಾರ ಜಿಲ್ಲೆಯಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುವುದು.
3 ಭೂ ಸುಧಾರಣಾ ಕಾಯ್ದೆ, 1974 ರನ್ವಯ ನಾನ್ ಇನಾಂ ಜಮೀನುಗಳು ಸರ್ಕಾರದಲ್ಲಿ ವಿಹಿತವಾಗಿರುವುದಕ್ಕೆ ಪರಿಹಾರಾರ್ಥವಾಗಿ ಒಟ್ಟು 3,721 ಸಂಸ್ಥೆಗಳಿಗೆ ಪ್ರಸ್ತುತ ಮಂಜೂರು ಮಾಡುತ್ತಿರುವ ವರ್ಷಾಸನ ಮೊತ್ತವನ್ನು 48,000 ರೂ.ಗಳಿಂದ 60,000 ರೂ.ಗಳಿಗೆ ಹೆಚ್ಚಿಸಲಾಗುವುದು. ಇದಕ್ಕಾಗಿ ಒಟ್ಟು 22 ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು.
4 ಯಾವುದೇ ಗಮನಾರ್ಹ ಆದಾಯವಿಲ್ಲದ ʻಸಿʼ ವರ್ಗದ ಒಟ್ಟು 121 ಮುಜರಾಯಿ ದೇವಸ್ಥಾನಗಳಿಗೆ ಕನಿಷ್ಠ 35 ರೂ.ಗಳಿಂದ 15,000 ರೂ.ಗಳವರೆಗೆ ನಗದು ಸಹಾಯಾನುದಾನ ನೀಡಲಾಗುತ್ತಿದ್ದು, ಎಲ್ಲಾ ದೇವಸ್ಥಾನಗಳಿಗೆ ಸಮಾನವಾಗಿ 15,000 ರೂ.ಗಳ ಸಹಾಯಾನುದಾನವನ್ನು ನೀಡಲಾಗುವುದು.