Advertisement

ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ

01:16 AM Jan 02, 2025 | Team Udayavani |

ಮಂಗಳೂರು: ಹೊಸ ವರ್ಷದ ಮೊದಲ ದಿನವಾದ ಬುಧವಾರ ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಕಟೀಲು, ಪೊಳಲಿ, ಮಂಗಳಾದೇವಿ, ಕುದ್ರೋಳಿ, ಬಪ್ಪನಾಡು, ಕದ್ರಿ, ಶರವು ದೇವಸ್ಥಾನ ಸಹಿತ ವಿವಿಧ ದೇವಾಲಯಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸಿದರು.

Advertisement

ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಕ್ರೈಸ್ತರು ಮಂಗಳವಾರ ರಾತ್ರಿ ನಿಕಟಪೂರ್ವ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಿದರು. ಈ ಹಿನ್ನೆಲೆಯಲ್ಲಿ ಚರ್ಚ್‌ ಗಳಲ್ಲಿ ಪರಮ ಪ್ರಸಾದದ ಆರಾಧನೆ, ವಿಶೇಷ ಪ್ರಾರ್ಥನೆ ಮತ್ತು ಬಲಿ ಪೂಜೆ ನಡೆಯಿತು.

ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮ ಹೊಟೇಲ್‌, ಸಭಾಂಗಣಗಳಲ್ಲಿ ಮಂಗಳವಾರ ಮಧ್ಯರಾತ್ರಿವರೆಗೂ ನಡೆದಿತ್ತು. ಪೊಲೀಸರ ಹಲವು ನಿರ್ಬಂಧಗಳ ನಡುವೆ ಕಾರ್ಯಕ್ರಮ ಆಯೋಜನೆಗೊಂಡಿದ್ದವು. ಬೀಚ್‌ಗಳಲ್ಲಿ ಜನಜಾತ್ರೆಯೇ ಇತ್ತು. ಮಧ್ಯರಾತ್ರಿ ಕೆಲವೆಡೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾದ್ಯಂತ ವಾಹನಗಳ ತಪಾಸಣೆ ಮಂಗಳವಾರ ರಾತ್ರಿ ಬಿಗಿಯಾಗಿತ್ತು. ಈ ಮಧ್ಯೆ, ಮಂಗಳೂರಿನ ನಂತೂರು, ಕದ್ರಿ ಸಹಿತ ಕೆಲವೆಡೆ ಪೊಲೀಸರು ರಾತ್ರಿ ಕೇಕ್‌ ಕತ್ತರಿಸಿ ವಾಹನ ಚಾಲಕರಿಗೆ ಹಂಚಿ ಸಂಭ್ರಮಿಸುತ್ತಿರುವುದು ಕಂಡುಬಂತು.

ಧರ್ಮಸ್ಥಳದಲ್ಲಿ ಭಕ್ತರ ಗಡಣ
ಹೊಸ ವರ್ಷದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜ.1 ರಂದು ಅಪಾರ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದರು.
ಬೆಂಗಳೂರಿನ ಟಿ.ವಿ.ಎಸ್‌. ಕಂಪೆನಿಯ ಗೋಪಾಲ ರಾವ್‌ ಮತ್ತು ಆನಂದಮೂರ್ತಿ ಬಳಗದವರು ಹೊಸವರ್ಷ ಪ್ರಯುಕ್ತ ಬುಧವಾರ ಧರ್ಮಸ್ಥಳದಲ್ಲಿ ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ), ಅನ್ನಪೂರ್ಣ ಭೋಜನಾಲಯ, ಗೋಪುರ, ಮುಖಮಂಟಪ ಹಾಗೂ ವಿವಿಧ ಕಟ್ಟಡಗಳ ಅಲಂಕಾರ ಸೇವೆ ಮಾಡಿದ್ದು, ಭಕ್ತರು ಕಣ್ತುಂಬಿಕೊಂಡರು.

Advertisement

ದೇಗುಲದಲ್ಲಿ ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಮ್ಮನವರ ವಿಶೇಷ ಪೂಜೆ ಸಹಿತ ಉತ್ಸವ ನೆರವೇರಿತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಬಂದುದರಿಂದ ಅನ್ನಛತ್ರ, ದರ್ಶನ, ಪಾರ್ಕಿಂಗ್‌, ಬಾಹುಬಲಿ ಬೆಟ್ಟ ಸಹಿತ ಎಲ್ಲೆಡೆ ಜನಸಂದಣಿ ಕಂಡುಬಂತು.

ಸಮೀಪದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಮಣ್ಣಿನ ಹರಕೆಯ ಖ್ಯಾತಿಯ ಶ್ರೀ ಸದಾಶಿವರುದ್ರ ದೇವಸ್ಥಾನ, ಉಜಿರೆ ಶ್ರೀ ಜನಾರ್ದನ ದೇವಸ್ಥಾನಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.

ಕೊಲ್ಲೂರಿನಲ್ಲಿ
ಕಳೆದ 1 ವಾರದಿಂದ ಪ್ರತಿದಿನ 12 ಸಾವಿರಕ್ಕೂ ಮಿಕ್ಕಿ ಭಕ್ತರು ಭೇಟಿ ನೀಡುತ್ತಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಬುಧವಾರ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಕೇರಳ ಸಹಿತ ಹೊರ ರಾಜ್ಯದ ಭಕ್ತರ ಸಂಖ್ಯೆಯೂ ಹೆಚ್ಚಿದ್ದು, ತುಂಬಾ ಉದ್ದದ ಸರತಿ ಕಂಡುಬಂತು. ವಾಹನ ದಟ್ಟಣೆಯೂ ಅತಿಯಾಗಿತ್ತು. ದೇವರ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ದೇಗುಲದ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು.

ಉಡುಪಿ ಶ್ರೀ ಕೃಷ್ಣ ಮಠಕ್ಕೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ

ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ ಬುಧವಾರ ಅಪಾರ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದರು. ಹೊಸ ವರ್ಷ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಹೂವು ಹಾಗೂ ಫಲಗಳನ್ನು ಬಳಸಿ ವಿಶೇಷ ಅಲಂಕಾರ ನಡೆಸ ಲಾಗಿತ್ತು. ಬುಧವಾರ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು. ಕ್ಷೇತ್ರದ ಹೊರಾಂಗಣ, ರಥಬೀದಿ, ರಸ್ತೆಗಳಲ್ಲಿ ಭಕ್ತರ ದಟ್ಟಣೆ ಕಂಡುಬಂದಿತ್ತು. ದೂರದ ಊರುಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು.

ಪ್ರವಾಸಿ ತಾಣಗಳಲ್ಲೂ ಜನಸಂದೋಹ
ಕರಾವಳಿಯ ದೇಗುಲಗಳಲ್ಲಿ ಮಾತ್ರವಲ್ಲದೆ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲೂ ಪ್ರವಾಸಿಗರ ಸಂಖ್ಯೆ ವಿಪರೀತವಾಗಿತ್ತು. ಮಂಗಳವಾರ ರಾತ್ರಿ ಬೀಚ್‌ಗಳನ್ನು ಹೆಚ್ಚು ಹೊತ್ತು ಪ್ರವಾಸಿಗರಿಗೆ ಮುಕ್ತವಾಗಿರಿಸಿದ್ದ ಕಾರಣ ಕಡಲ ತಡಿಯಲ್ಲಿ ಹೊಸ ವರ್ಷವನ್ನು ಜನರು ಸಂಭ್ರಮದಿಂದ ಸ್ವಾಗತಿಸಿದರು. ಕೆಲವು ಶಾಲೆಗಳಿಗೂ ಹೊಸ ವರ್ಷದ ಮೊದಲ ದಿನ ರಜೆ ನೀಡಿದ್ದರಿಂದ ಕುಟುಂಬ ಸಮೇತ ತಡರಾತ್ರಿ ವರೆಗೂ ಹೊಸ ವರ್ಷದ ಆಚರಣೆಯನ್ನು ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next