Advertisement

ರಾಜ್ಯದ ಅಂತರ್ಜಲ ವಿಷಮಯ: ಪ್ರತಿಕೂಲ ಪರಿಣಾಮ ಏನು?

12:40 AM Jan 03, 2025 | Team Udayavani |

ಹೊಸದಿಲ್ಲಿ: ದೇಶದಲ್ಲಿ ಅಂತ ರ್ಜಲ ಭಾರೀ ಕುಸಿತ ಕಾಣುತ್ತಿದೆ ಎಂಬ ಆತಂಕಕಾರಿ ವರದಿಗಳ ನಡುವೆಯೇ ಅಂತರ್ಜಲದಲ್ಲಿ ಫ್ಲೋರೈಡ್‌, ನೈಟ್ರೇಟ್‌, ಯುರೇನಿಯಂನಂತಹ ಅಪಾಯಕಾರಿ ಅಂಶಗಳ ಪ್ರಮಾಣ ಏರಿಕೆಯಾಗಿರುವ ಅಂಶ ಬೆಳಕಿಗೆ ಬಂದಿದೆ. ಕರ್ನಾಟಕ ಸಹಿತ ದಕ್ಷಿಣದ ರಾಜ್ಯಗಳ ಅಂತರ್ಜಲದಲ್ಲಿ ನೈಟ್ರೇಟ್‌, ಯುರೇನಿಯಂ, ಫ್ಲೋರೈಡ್‌, ಆರ್ಸೆ ನಿಕ್‌ ಪ್ರಮಾಣ ಹೆಚ್ಚಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿ (ಸಿಜಿಡಬ್ಲ್ಯುಬಿ)ಯ 2024ರ “ವಾರ್ಷಿಕ ಅಂತ ರ್ಜಲ ಗುಣಮಟ್ಟ ವರದಿ’ ಕಳವಳ ವ್ಯಕ್ತಪಡಿಸಿದೆ.

Advertisement

ಕರ್ನಾಟಕದ 19 ಜಿಲ್ಲೆಗಳ ಅಂತರ್ಜಲದಲ್ಲಿ ಫ್ಲೋರೈಡ್‌ ಹೆಚ್ಚಾಗಿದೆ. ಕೇಂದ್ರದ ವರದಿಯ ಪ್ರಕಾರ ರಾಜ್ಯದ ಅಂತರ್ಜಲದಲ್ಲಿ ಫ್ಲೋರೈಡ್‌ ಶೇ. 14.87ರಷ್ಟು ಹೆಚ್ಚು ಪ್ರಮಾಣದಲ್ಲಿದೆ. ಬಳ್ಳಾರಿ, ಬೆಂಗಳೂರು, ಗ್ರಾಮಾಂತರ, ದಾವಣಗೆರೆ ಜಿಲ್ಲೆ ಸಹಿತ ಒಟ್ಟು 19 ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ. ಭಾರತೀಯ ಗುಣಮಟ್ಟ ಪ್ರಾಧಿಕಾರದ ಪ್ರಕಾರ ಒಂದು ಲೀ. ನೀರಿನಲ್ಲಿ 1.5 ಮಿಲಿಗ್ರಾಂ ಫ್ಲೋರೈಡ್‌ ಇದ್ದರೆ ಅದು ಸಹ್ಯ.

ಇದೇವೇಳೆ ರಾಜ್ಯದ 27 ಜಿಲ್ಲೆಗಳ ಅಂತರ್ಜಲದಲ್ಲಿ ನೈಟ್ರೇಟ್‌ ಪ್ರಮಾಣ ಹೆಚ್ಚಿದೆ. ವರದಿಯ ಪ್ರಕಾರ ಅಂತರ್ಜಲದಲ್ಲಿ ನೈಟ್ರೇಟ್‌ ಶೇ. 48ರಷ್ಟು ಇದೆ.
ಯುರೇನಿಯಂ ಪ್ರಮಾಣ ಏರಿಕೆ: ಕರ್ನಾಟಕ ಸಹಿತ 7 ರಾಜ್ಯಗಳ ಕೆಲವು ಭಾಗಗಳಲ್ಲಿ ಅಂತರ್ಜಲವನ್ನು ಮಿತಿಮೀರಿ ಬಳಕೆ ಮಾಡಿದ್ದರಿಂದ ಯುರೇನಿಯಂ ಪ್ರಮಾಣ ಏರಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಯುರೇನಿಯಂ ಪ್ರಮಾಣ 30 ಪಿಪಿಬಿ (ಪಾರ್ಟ್ಸ್ ಪರ್‌ ಬಿಲಿಯನ್‌) ಇರಬಹುದು.

ಆದರೆ ಈ ರಾಜ್ಯಗಳಲ್ಲಿ ಯುರೇನಿಯಂ ಪ್ರಮಾಣ 100 ಪಿಪಿಬಿ ಅಥವಾ ಅದಕ್ಕಿಂತ ಹೆಚ್ಚಿದೆ. ಇದಲ್ಲದೆ ರಾಜ್ಯದ ಭೌಗೋಳಿಕ ಪರಿಸ್ಥಿತಿಯ ಕಾರಣದಿಂ ದಾಗಿಯೂ ನೀರಿನಲ್ಲಿ ಯುರೇನಿಯಂ ಹೆಚ್ಚಾಗಿರುವ ಸಾಧ್ಯತೆಯೂ ಇದೆ ಎಂದು ವರದಿ ಹೇಳಿದೆ.

ಆದರೆ 2019 ಮತ್ತು 2023ಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಯುರೇನಿಯಂ ಪ್ರಮಾಣ ಹೆಚ್ಚಿರುವ ಜಿಲ್ಲೆಗಳ ಸಂಖ್ಯೆ ಇಳಿಕೆಯಾಗಿದೆ ಎಂಬ ಸಮಾಧಾನಕರ ಅಂಶವನ್ನೂ ವರದಿ ತಿಳಿಸಿದೆ. 2019ರಲ್ಲಿ 18 ಜಿಲ್ಲೆಗಳಲ್ಲಿ ಯುರೇನಿಯಂ ಹೆಚ್ಚಿದ್ದರೆ, 2023ರಲ್ಲಿ 10ಕ್ಕೆ ಇಳಿದಿದೆ. ಕೋಲಾರ, ರಾಯಚೂರು, ತುಮಕೂರು ಜಿಲ್ಲೆಗಳಲ್ಲಿ ಈ ಪ್ರಮಾಣ ಮಿತಿಗಿಂತ ಹೆಚ್ಚಿದೆ.

Advertisement

ಆರ್ಸೆನಿಕ್‌ ಹೆಚ್ಚಳ: ರಾಜ್ಯದ ಗದಗ ಮತ್ತು ರಾಯಚೂರು ಜಿಲ್ಲೆಗಳ ಅಂತರ್ಜಲದಲ್ಲಿ ಆರ್ಸೆನಿಕ್‌ ಪ್ರಮಾಣ ಹೆಚ್ಚಿದೆ. ವರದಿಯ ಪ್ರಕಾರ ಈ 2 ಜಿಲ್ಲೆಗಳಲ್ಲಿ ಅದರ ಪ್ರಮಾಣ 10 ಪಿಪಿಬಿ ಇದೆ.

ಕಬ್ಬಿಣಾಂಶ ಹೆಚ್ಚು
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ಅಂತರ್ಜಲದಲ್ಲಿ ಕಬ್ಬಿಣಾಂಶದ ಪ್ರಮಾಣ ಪ್ರತೀ ಲೀಟರ್‌ಗೆ 1.5 ಮಿಲಿಗ್ರಾಂ ಇದೆ. ಭಾರತದ ಗುಣಮಟ್ಟ ಪ್ರಾಧಿಕಾರ ನಿಗದಿ ಮಾಡಿರುವಂತೆ ನೀರಿನಲ್ಲಿ ಇದು ಲೀಟರ್‌ಗೆ 1 ಮಿಲಿಗ್ರಾಂ ಇರಬಹುದು.

ಪ್ರತಿಕೂಲ ಪರಿಣಾಮ ಏನು?
ನೀರಿನಲ್ಲಿ ಹೆಚ್ಚು ನೈಟ್ರೇಟ್‌ ಇದ್ದರೆ ಮಕ್ಕಳ ಚರ್ಮ ನೀಲಿಗಟ್ಟುತ್ತದೆ
ಫ್ಲೋರೈಡ್‌ ಹೆಚ್ಚಾದರೆ ಕ್ಯಾನ್ಸರ್‌ ಅಥವಾ ಚರ್ಮ ಸಂಬಂಧಿ ರೋಗ ಬಾಧೆ
ಪ್ರಾಣಿ ತ್ಯಾಜ್ಯವನ್ನು ಸಮರ್ಪಕ ವಿಲೇವಾರಿ ಮಾಡದಿದ್ದರೆ ಮಣ್ಣಿನಲ್ಲಿ ನೈಟ್ರೇಟ್‌ ಪ್ರಮಾಣ ಏರಿಕೆ

ಕೆಲವು ಜಿಲ್ಲೆಗಳಲ್ಲಿ ಸುಧಾರಣೆ
ಮಳೆಗಾಲದ ಅವಧಿಯಲ್ಲಿ ಅಂತರ್ಜಲ ಮೂಲ ವನ್ನು ಮರು ಪೂರಣಗೊಳಿಸಿದಾಗ ರಾಜ್ಯದ ಕೆಲವು ಕಡೆ ಫ್ಲೋರೈಡ್‌ ಪ್ರಮಾಣ ತಗ್ಗಿದೆ. ರಾಜ್ಯದ 176 ಸ್ಥಳಗಳಲ್ಲಿನ ಮಾದರಿ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಲ್ಲಿ ಮಳೆಗಾಲಕ್ಕಿಂತ ಮೊದಲು ಫ್ಲೋರೈಡ್‌ ಪ್ರಮಾಣ ಶೇ.17.61 ಆಗಿತ್ತು. ಮರು ಪೂರ ಣದ ಬಳಿಕ 22 ಸ್ಥಳಗಳಲ್ಲಿ ಸುಧಾರಣೆ ಕಂಡು ಬಂದಿದೆ. ಸುಧಾರಣೆ ಆದ ಬಳಿಕ ಅದರ ಪ್ರಮಾಣ ಶೇ.15.34ಕ್ಕೆ ಇಳಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಲವೆಡೆ ಫ್ಲೋರೈಡ್‌ ಪ್ರಮಾಣ ಲೀಟರ್‌ಗೆ 1.5 ಮಿಲಿಗ್ರಾಂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next